ಗಂಗಾವತಿ: ಜಿಲ್ಲೆಯಾದ್ಯಂತ ಕಳೆದ 1 ವಾರದಿಂದ ಸರ್ವರ್ ತೊಂದರೆಯ ಪರಿಣಾಮವಾಗಿ ಆಧಾರ್ ತಿದ್ದುಪಡಿ ಮತ್ತು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಇದೀಗ ಶಾಲಾ ಕಾಲೇಜುಗಳ ದಾಖಲಾತಿ ಮತ್ತು ಸರ್ಕಾರ ಪ್ರೋತ್ಸಾಹ ಧನ ನೀಡುವ ಅರ್ಜಿ ಆಹ್ವಾನಿಸಿದ್ದು ಜನರು ತಮ್ಮ ಆಧಾರ್ ಕಾರ್ಡ್ ನಲ್ಲಿ ಆಗಿರುವ ತಪ್ಪುಗಳನ್ನು ತಿದ್ದುಪಡಿ ಮಾಡಿಸಲು ಆಧಾರ್ ಸೇವಾ ಕೇಂದ್ರ ಮತ್ತು ಬ್ಯಾಂಕ್ ಗಳಿಗೆ ತೆರಳಿದರೆ ಸರ್ವರ್ ತೊಂದರೆಯ ಕಾರಣ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ.
ಸರಕಾರ ಕೊರೋನಾ ಸಂದರ್ಭದಲ್ಲಿ ಕಾರ್ಮಿಕರು ಮತ್ತು ಕುಶಲಕರ್ಮಿಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಕೂಲಿ ಕಾರ್ಮಿಕರ ಕಟ್ಟಡ ಕಾರ್ಮಿಕರ ಕುಶಲಕರ್ಮಿಗಳ ಬ್ಯಾಂಕ್ ಖಾತೆಗಳಿಗೆ ಸರಕಾರ ಪ್ರೋತ್ಸಾಹ ಧನ ಜಮಾ ಮಾಡುತ್ತಿದೆ. ಸರಕಾರದ ಹಣ ಪಡೆಯಲು ಆಧಾರ್ ಕಾರ್ಡ್ ತಿದ್ದುಪಡಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆ ಮತ್ತು ಬ್ಯಾಂಕ್ ಗಳಿಗೆ ಸಲ್ಲಿಸಬೇಕಾಗಿದೆ.
ಕೆಲವು ಜನರ ಆಧಾರ್ ಕಾರ್ಡ್ ಗಳಲ್ಲಿ ಮೊಬೈಲ್ ಸಂಖ್ಯೆಯಿಂದ ಹೆಸರು ತಪ್ಪಾಗಿದೆ ಇವುಗಳನ್ನ ತಿದ್ದುಪಡಿ ಮಾಡಲು ಆಧಾರ್ ಸೇವಾ ಕೇಂದ್ರಗಳಿಗೆ ತೆರಳಿದರೆ ಅಲ್ಲಿ ಕಳೆದ 1 ವಾರದಿಂದ ಸರ್ವರ್ ಸರಿಯಾಗಿ ಬರದೇ ಇರುವುದರಿಂದ ಕೆಲಸ ವಿಳಂಬವಾಗುತ್ತಿದೆ. ಗಂಗಾವತಿ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿರುವ ಆಧಾರ್ ಸೇವಾ ಕೇಂದ್ರ ಸೇರಿದಂತೆ ಜಿಲ್ಲೆಯ ಬಹುತೇಕ ಆಧಾರ್ ಸೇವಾ ಕೇಂದ್ರಗಳ ಕೆಲಸ ಕಾರ್ಯಗಳು ಸರ್ವರ್ ತೊಂದರೆಯ ಕಾರಣ ನಿಲುಗಡೆಯಾಗಿದೆ.
ಈಗಾಗಲೇ ಸಾರ್ವಜನಿಕರು ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷ ಮಾಡುತ್ತಿರುವುದು ಕಂಡುಬಂದಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಆಧಾರ್ ಕೇಂದ್ರಗಳಿಗೆ ಮತ್ತು ಸಿಎಸ್ ಸಿ ಕೇಂದ್ರಗಳಿಗೆ ಸರ್ವರ್ ತೊಂದರೆಯಿಂದ ಪರಿಹಾರ ಮಾಡಿ ಕೂಡಲೇ ಸೇವೆ ಆರಂಭಿಸಲು ನಿರ್ದೇಶನ ನೀಡಬೇಕಾಗಿದೆ.
ಸರ್ವರ್ ತೊಂದರೆಯಿಂದ ಆಧಾರ್ ಸೇವಾ ಕೇಂದ್ರದಲ್ಲಿ ಆಗಿರುವ ನೂನ್ಯತೆ ಬಗ್ಗೆ ತಮ್ಮ ಗಮನಕ್ಕೆ ಯಾರೂ ತಂದಿರಲಿಲ್ಲ ಕೂಡಲೇ ಸಂಬಂಧಪಟ್ಟವರ ಜೊತೆ ಮಾತನಾಡಿ ಶೀಘ್ರದಲ್ಲೇ ಸರ್ವರ್ ತೊಂದರೆ ಸರಿಪಡಿಸಲಾಗುತ್ತದೆ ಎಂದು ತಹಸೀಲ್ದಾರ್ ಯು.ನಾಗರಾಜ ಉದಯವಾಣಿಗೆ ತಿಳಿಸಿದ್ದಾರೆ.