ಕದ್ರಿ: ಮಂಗಳೂರಿನ ಅತೀ ದೊಡ್ಡ ಪಾರ್ಕ್ ಆದ ಕದ್ರಿ ಪಾರ್ಕ್ ಅಭಿವೃದ್ಧಿ ನಿಟ್ಟಿನಲ್ಲಿ ಮುಡಾ ಮುಂದಡಿ ಇಡುತ್ತಿದ್ದು, ಮೊದಲನೇ ಹಂತದಲ್ಲಿ ಗಂಗನಪಳ್ಳ ಅಭಿವದ್ಧಿಗೆ ಯೋಜನೆ ಸಿದ್ಧಪಡಿಸುತ್ತಿದೆ.
ಪಾರ್ಕ್ ಒಳಗಿರುವ ಗಂಗನಪಳ್ಳ ಅಭಿವೃದ್ಧಿ ಹಲವು ವರ್ಷಗಳಿಂದ ಮರೀಚಿಕೆ ಯಾಗಿದೆ. ಸ್ಮಾರ್ಟ್‌ಸಿಟಿ, ತೋಟ ಗಾರಿಕೆ ಇಲಾಖೆಯಿಂದ ಈ ಹಿಂದೆ ಅಭಿವೃದ್ಧಿಯ ಬಗ್ಗೆ ಪ್ರಸ್ತಾವವಾಗಿತ್ತೇ ವಿನಾ ಯಾವುದೇ ರೀತಿಯ ಮುಂದುವರಿದ ಕಾಮಗಾರಿ ನಡೆದಿಲ್ಲ.
ಕದ್ರಿ ಪಾರ್ಕ್ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ‘ಉದಯವಾಣಿ ಸುದಿನ’ ಕೆಲವು ದಿನಗಳ ಹಿಂದೆ ವಿಸ್ತೃತ ವರದಿ ಮಾಡಿತ್ತು. ಕೆಲವು ದಿನಗಳ ಹಿಂದೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರನ್ನು ಒಳಗೊಡಂತೆ, ಅಧಿಕಾರಿಗಳ ಸಭೆ ನಡೆಸಿದ್ದು, ಈ ವೇಳೆ ಕದ್ರಿ ಪಾರ್ಕ್ ಸಮಗ್ರ ಅಭಿವೃದ್ಧಿಯ ಜತೆ ಗಂಗನಪಳ್ಳ ಅಭಿವೃದ್ಧಿಯ ಬಗ್ಗೆಯೂ ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗಂಗನಪಳ್ಳ ನೀರಿನ ಸೆಲೆಯ ಬಗ್ಗೆ ಪರಿಶೀಲನೆ ನಡೆಸಲು ಸೋಮವಾರ ಕದ್ರಿ ಪಾರ್ಕ್‌ಗೆ ಭೇಟಿ ನೀಡಿತ್ತು.
ಕದ್ರಿ ದೊಡ್ಡ ಪಾರ್ಕ್ ಸುಮಾರು 16 ಎಕರೆ ಇದ್ದು, ಪಕ್ಕದಲ್ಲಿರುವ ಕದ್ರಿ ಜಿಂಕೆ ಉದ್ಯಾನವನ ಸುಮಾರು 4 ಎಕರೆ ಇದೆ. ಈ ಎರಡೂ ಉದ್ಯಾನಗಳ ಗಿಡಗಳಿಗೆ ಪ್ರತೀ ದಿನ ನೀರು ಹಾಯಿಸಲಾಗುತ್ತದೆ. ಪಾಲಿಕೆಯು ನೀರಿನ ರೇಷನಿಂಗ್ ಆರಂಭಿಸಿದರೆ ಬೇಸಗೆ ವೇಳೆ ಕದ್ರಿ ಪಾರ್ಕ್‌ಗೆ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಒಂದು ವೇಳೆ ಗಂಗನಪಳ್ಳ ಅಭಿವೃದ್ಧಿಯಾದರೆ ಅಲ್ಲಿಂದಲೇ ಪಾರ್ಕ್ ಗಿಡಗಳಿಗೆ ನೀರುಣಿಸಬಹುದು ಎಂದ ಚಿಂತನೆ ಮುಡಾದ್ದಾಗಿದೆ.
ನಗರದ ಅತೀ ದೊಡ್ಡ ಪಾರ್ಕ್ ಎಂದು ಗುರುತಿಸಿಕೊಂಡ ಕದ್ರಿ ಪಾರ್ಕ್ ಅಭಿವೃದ್ಧಿ ಕಾಣುತ್ತಿದೆ. ಇಲ್ಲಿನ ಗಂಗನಪಳ್ಳ ಅಭಿವೃದ್ಧಿಯಾಗಬೇಕು ಎಂಬ ಆಶಯ ಹಲವು ಸಮಯಗಳಿಂದ ಇತ್ತು. ಇದೀಗ ಗಂಗನಪಳ್ಳಕ್ಕೆ ಹೊಸ ರೂಪ ನೀಡಲು ಮುಡಾ ಮುಂದಾಗಿದೆ ಎಂದು ಕದ್ರಿ ಪಾರ್ಕ್ ಅಭಿವೃದ್ಧಿ ಸಮಿತಿ ಸದಸ್ಯ ಜಿ.ಕೆ. ಭಟ್ ತಿಳಿಸಿದ್ದಾರೆ.
ನೀರಿನ ಸಮಸ್ಯೆ ನೀಗಿಸಲು ಕ್ರಮ
ಕದ್ರಿ ಪಾರ್ಕ್ ಅಭಿವೃದ್ಧಿ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಮೊದಲನೇ ಹಂತವಾಗಿ ಕದ್ರಿ ಪಾರ್ಕ್‌ನ ಗಂಗನಪಳ್ಳವನ್ನು ಅಭಿವೃದ್ಧಿಪಡಿಸಲು ಮುಡಾ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಗಂಗನಪಳ್ಳದಲ್ಲಿ ಭವಿಷ್ಯದಲ್ಲಿ ನೀರು ಲಭ್ಯವಾಗಬಹುದೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಪಾರ್ಕ್‌ಗೆ ನೀರಿನ ಸಮಸ್ಯೆಯಾಗದಂತೆ ಗಂಗನಪಳ್ಳ ಅಭಿವೃದ್ಧಿಯಾಗಲಿದೆ. ಕೆರೆಯಂತಿರುವ ಪಳ್ಳದ ಹೂಳು ತೆಗೆದು ಯೋಗ್ಯ ರೀತಿ ಲಭ್ಯವಾಗಿಸುವುದು ನಮ್ಮ ಉದ್ದೇಶ.
–ರವಿಶಂಕರ ಮಿಜಾರ್, ಮುಡಾ ಅಧ್ಯಕ್ಷ