Advertisement
ಗಡಿಬಿಡಿಯಲ್ಲಿ ಎಲ್ಲಿಗೋ ಹೊಗೋವಾಗ ಚಪ್ಪಲಿ ಕಿತ್ತು ಹೋದರೆ, ಮೊದಲು ಹುಡುಕೋದು ಚಮ್ಮಾರರನ್ನು. ರಸ್ತೆ ಬದಿಯಲ್ಲೊಂದು ಟೆಂಟ್ ಕಟ್ಟಿಕೊಂಡು, ಚಪ್ಪಲಿ ಹೊಲಿಯುವವರಲ್ಲಿ ಗಂಡಸರೇ ಹೆಚ್ಚು. ಚಮ್ಮಾರಿಕೆ ಮಾಡುತ್ತಿರೋ ಕೆಲವೇ ಕೆಲವು ಮಹಿಳೆಯರಲ್ಲಿ, ಐವತ್ತೈದು ವರ್ಷದ ಗಂಗಮ್ಮ ಅವರೂ ಒಬ್ಬರು. ವಿಜಯಪುರದ ಗಾಂಧಿ ಚೌಕದ ಬಳಿಯ ಸರಕಾರಿ ಕಾಲೇಜಿನ ಹತ್ತಿರ ಇವರು ಚಪ್ಪಲಿ ಹೊಲಿಯುತ್ತಿರುತ್ತಾರೆ.
Related Articles
ಪ್ರತಿದಿನ ತಾವು ಕುಳಿತುಕೊಳ್ಳುವ ಸ್ಥಳದ ಬಾಡಿಗೆಯನ್ನು ಸರ್ಕಾರಕ್ಕೆ ಕೊಡಬೇಕು. ವ್ಯಾಪಾರವಾಗಲಿ, ಬಿಡಲಿ, ಸರ್ಕಾರ ಅದನ್ನು ಕೇಳುವುದಿಲ್ಲ. ಒಂದು ಚಪ್ಪಲಿ ಹೊಲಿದಿದ್ದಕ್ಕೆ 10-15 ರೂ. ಆಗುತ್ತೆ. ಆದ್ರೆ, ಕೆಲವರು ಅದರಲ್ಲೂ ಚೌಕಾಸಿಗಿಳಿದು 5 ರೂಪಾಯನ್ನಷ್ಟೇ ಕೊಟ್ಟು ಹೋಗ್ತಾರಂತೆ. ದಿನಕ್ಕೆ 10-12 ಮಂದಿ ಬಂದರೆ ಅದೇ ಹೆಚ್ಚು. ಉಳಿದ ಸಮಯದಲ್ಲಿ ಚರ್ಮ ತಂದು, ಎರಿ ಮಣ್ಣು ಹಚ್ಚಿ, ಸುತ್ತಲು ಮೊಳೆ ಬಡಿದು, ದಿನಕ್ಕೆ ಒಂದು ಜೋಡಿ ಚಪ್ಪಲಿ ತಯಾರಿಸ್ತಾರೆ. ಆ ಚಪ್ಪಲಿಗಳನ್ನು ರೈತರು, ಕುರಿಗಾಹಿಗಳು ಖರೀದಿಸ್ತಾರಂತೆ. ಕೆಲವೊಮ್ಮೆ ಚರ್ಮದ ಚಪ್ಪಲಿಗಳನ್ನು ಅಂಗಡಿಗೂ ಮಾರುತ್ತಾರೆ. ಗಂಗಮ್ಮ ಓದಿದ್ದು ಮೂರನೇ ಕ್ಲಾಸ್‌ವರೆಗೆ ಮಾತ್ರ. ಓದುವ ಆಸೆಯಿದ್ದರೂ, ಬಡತನ ಎಂಬ ಶತ್ರು ಓದಲು ಬಿಡಲಿಲ್ಲ ಎಂದು ವಿಷಾದಿಸುತ್ತಾರವರು.
Advertisement
“ಸುತ್ತಮುತ್ತ ಗಂಡಸರೇ ಚಪ್ಪಲಿ ಹೊಲಿಯೋದು. ಅವರ ಮಧ್ಯೆ ನಾನೊಬ್ಬಳೇ ಮಹಿಳೆ. ನನಗೆ ಚಪ್ಪಲಿ ಹೊಲಿಯೋದರ ಬಗ್ಗೆ ಯಾವುದೇ ನಾಚಿಕೆಯಿಲ್ಲ. ನಾಚಿಕೆ ಅಂತ ಸುಮ್ಮನಿದ್ದಿದ್ದರೆ ಇಷ್ಟೊತ್ತಿಗೆ ನಾನೂ, ನನ್ನ ಮಕ್ಕಳೂ ಕೆರೆ, ಬಾವಿ ನೋಡಿಕೊಳ್ಳಬೇಕಾಗುತ್ತಿತ್ತು. ಕಷ್ಟ ಎಲ್ರಿಗೂ ಬರುತ್ತೆ, ಛಲದಿಂದ ದುಡೀಬೇಕು ಅಷ್ಟೆ’-ಗಂಗಮ್ಮ ಮಾನೆ -ವಿದ್ಯಾಶ್ರೀ ಗಾಣಿಗೇರ