ಗಂಗಾಧರೇಶ್ವರ ಯಲಹಂಕ ನಾಡಪ್ರಭುಗಳ ಆರಾಧ್ಯ ದೈವ. ಹಾಗಾಗಿ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನವನ್ನು ವಿಶೇಷವಾಗಿ ಜೀರ್ಣೋದ್ಧಾರ ಮಾಡಿಸುತ್ತಾರೆ. ದೇವಾಲಯದ ಮುಂಭಾಗದಲ್ಲಿರುವ ಏಕಶಿಲಾ ಕೆತ್ತನೆಗಳಾದ ತ್ರಿಶೂಲ, ಢಮರುಗ, ಸೂರ್ಯಪಾನ, ಚಂದ್ರಪಾನ ಕಂಭಗಳು ಯಲಹಂಕ ನಾಡಪ್ರಭುಗಳ ವಾಸ್ತುಶೈಲಿಯ ಅಭಿರುಚಿಗೆ ಅತ್ಯುತ್ಕೃಷ್ಟ ಉದಾಹರಣೆಗಳಾಗಿವೆ. ನಂದಿಯ ಅರುಣಾಚಲೇಶ್ವರ ದೇವಾಲ ಯವನ್ನು ಸಹ ಅವರು ಜೀರ್ಣೋದ್ಧಾರ ಮಾಡಿಸುತ್ತಾರೆ.
ಈಗಿನ ಬಸವನಗುಡಿಯಲ್ಲಿರುವ 11 ಅಡಿಗಳ ಬಹದಾಕಾರವಾದ ಬಸವಣ್ಣನನ್ನು ಕೆತ್ತಿಸಿದ್ದು ಕೆಂಪೇಗೌಡರೆ. ಅಲ್ಲಿಯೇ ದೊಡ್ಡಗಣಪತಿ ದೇವಸ್ಥಾನವನ್ನು ಸಹ ನಿರ್ಮಿಸಿದ್ದಾರೆ. ಕೋಟೆಯ ಗೋಪುರವನ್ನು ಕಾಯುತ್ತಿದ್ದ ಗುಜ್ಜಲಿ ಓಬನಾಯಕ ಎಂಬುವನು ಕೆಂಪೇಗೌಡರ ಅನುಮತಿ ಪಡೆದು ಬಂಡೆಯೊಂದರ ಮೇಲೆ ಬೇಡರ ಕಣ್ಣಪ್ಪನನ್ನು ಶಿವಲಿಂಗದೊಡನೆ ರೂಪಿಸಿದ್ದಾನೆ.ಅಸ್ತಿತ್ವಕ್ಕೆ ಬಂದ ಗ್ರಾಮಗಳು: ನಗರ ನಿರ್ಮಾಣದ ಜೊತೆಗೆ ಈ ನಾಡಿನಲ್ಲಿ ಹಲವಾರು ಗ್ರಾಮಗಳು ಅಸ್ತಿತ್ವಕ್ಕೆ ಬಂದವು.
ಗ್ರಾಮ ವ್ಯವಸ್ಥೆ ಸುಲಭವಾಗಿ ನಡೆಯಲು 12 ಮಂದಿ ಆಯಗಾರರನ್ನು ನೇಮಿಸಲಾಗಿತ್ತು. ಅವರುಗಳೆಂದರೆ, ಗೌಡ, ಶಾನಭೋಗ, ತಳವಾರ, ತೋಟಿ, ನೀರುಗುಂಟಿ, ಜೋಯಿಸ, ಕಮ್ಮಾರ, ಬಡಗಿ, ಕುಂಬಾರ, ಅಗಸ, ûೌರಿಕ ಮತ್ತು ಅಕ್ಕಸಾಲಿಗರು. ಇವರು ಜನತೆ ಮತ್ತು ಪ್ರಭುತ್ವದ ನಡುವೆ ಸಂಪರ್ಕಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹನ್ನೆರಡೂ ಮಂದಿ ಆಯಗಾರರಿಗೆ ಒಬ್ಬರು ಪಾರುಪತ್ತೆಗಾರರು ಇರುತ್ತಿದ್ದರು.
ಇವರ ಕಾಲದಲ್ಲಿ ನಾಡನ್ನು ಗ್ರಾಮ ಅಥವಾ ಹಳ್ಳಿ, ಸೀಮೆ, ಸ್ಥಳ ಎಂಬುದಾಗಿ ವಿಭಜಿಸಲಾಗಿತ್ತು. ಗ್ರಾಮ ಅತ್ಯಂತ ಚಿಕ್ಕ ಘಟಕ, ಅದರ ನಂತರದ್ದು ಸ್ಥಳ, ಹಲವು ಸ್ಥಳಗಳನ್ನು ಒಳಗೊಂಡಿದ್ದು ಸೀಮೆ, ಹಲವು ಸೀಮೆಗಳನ್ನು ಒಳಗೊಂಡ ಒಟ್ಟು ಪ್ರದೇಶ ನಾಡು. ಕೆಂಪೇಗೌಡರು ತಮ್ಮ ಆಳ್ವಿಕೆಯ ಅವಧಿಯಲ್ಲಿ ಪ್ರಮುಖ ಸ್ಥಳಗಳಲ್ಲಿ ಸಂತೆಗಳನ್ನು ಸಹ ಪ್ರಾರಂಭಿಸಿದರು. ಅವರ ಆಡಳಿತಾವಧಿಯಲ್ಲಿ ಸುಂಕ ಮತ್ತು ತೆರಿಗೆಗಳು ಪ್ರಚಲಿತದಲ್ಲಿದ್ದವು. ಕೆಂಪೇಗೌಡರ ಕಾಲದಲ್ಲಿ ಬೆಂಗಳೂರು ಸೀಮೆಯ ವಾರ್ಷಿಕ ಆದಾಯ ಸುಮಾರು 50 ಸಾವಿರ ವರಹಗಳು ಆಗಿದ್ದವಂತೆ.
ಆಡಳಿತ ಅನುಕೂಲಕರವಾಗಿ ಸಾಗುವಂತೆ ಕೆಂಪೇಗೌಡರು ನಾಡನ್ನು ಹಲವಾರು ಪ್ರಾಂತ್ಯಗಳನ್ನಾಗಿ ವಿಂಗಡಿಸಿದ್ದರು. ಬೆಂಗಳೂರನ್ನು ತಮ್ಮಲ್ಲಿಯೇ ಇಟ್ಟುಕೊಂಡು ಉಳಿದ ಪ್ರಾಂತ್ಯಗಳಿಗೆ ತಮ್ಮಂದಿರನ್ನು ನೇಮಿಸಿದ್ದರು ಕೆಂಪೇಗೌಡರು ಮತ್ತು ಅವರ ಸಹೋದರರು ಧರ್ಮದ ತಳಹದಿಯ ಮೇಲೆ ನಾಡರಕ್ಷಣೆಯನ್ನು ಮಾಡುತ್ತಿದ್ದರು. ವಸೂಲಾದ ಕಂದಾಯವನ್ನು ಶಿವಗಂಗೆಯ ಖಜಾನೆಯಲ್ಲಿ ಶೇಖರಿಡಿಸಲಾಗುತ್ತಿತ್ತು ಎನ್ನಲಾಗುತ್ತದೆ. ಕೆಂಪೇಗೌಡರು ಯಾವುದೇ ಸಂಘರ್ಷ ಮತ್ತು ವಿವಾದಗಳಿಗೆ ಎಡೆಯಿಲ್ಲದಂತೆ ಶಾಂತಿ ಸುಭಿಕ್ಷೆಗಳಿಂದ ಕೂಡಿದ ಆಡಳಿತವನ್ನು ನಡೆಸುತ್ತಿದ್ದರು.