ಅಫಜಲಪುರ: ಗಂಗಾಧರಾರ್ಯರು 41ದಿನಗಳ ಕಾಲ ಅನ್ನ, ನೀರು, ಸಮಾಜದ ಸಂಪರ್ಕವಿಲ್ಲದೆ ಅನುಷ್ಠಾನ ಕುಳಿತು ಭಗವಂತನನ್ನು ಸ್ಮರಿಸಿದ್ದಾರೆ. ಅವರ ಅನುಷ್ಠಾನದ ಫಲ ಈ ಭಾಗಕ್ಕೆ ದೊರೆಯಲಿ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಜಿ ನುಡಿದರು.
ತಾಲೂಕಿನ ಶಿವೂರ ಗ್ರಾಮದಲ್ಲಿ ಅಚಲ ಸನಾತನ ವಿಶ್ವ ಆಧ್ಯಾತ್ಮಿಕ ವಿಜ್ಞಾನ ಯೋಗಾಶ್ರಮದ ಪೂಜ್ಯರಾದ ಗಂಗಾಧರಾರ್ಯರ ಅನುಷ್ಠಾನ ಮುಕ್ತಾಯ ಸಮಾರಂಭದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ನೇತೃತ್ವ ವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಇಂತಹ ಯೋಗಗಳನ್ನು ಕಾಣುವುದು ದೊಡ್ಡ ಸೌಭಾಗ್ಯವಾಗಿದೆ. ಯೋಗ ಮತ್ತು ಆಧ್ಯಾತ್ಮದಿಂದ ಮನಸ್ಸು ಪ್ರಶಾಂತವಾಗಿರಲು ಸಾಧ್ಯ. ಹೀಗಾಗಿ ಎಲ್ಲರೂ ಯೋಗ ಸಿದ್ಧಿಸಿಕೊಳ್ಳಬೇಕು ಎಂದರು.
ಯೋಗಾಶ್ರಮದ ಪೂಜ್ಯರಾದ ಗಂಗಾಧರಾರ್ಯರು ಮಾತನಾಡಿ, ನಾನು 25 ವರ್ಷಗಳ ಹಿಂದೆ ಕುಂಡಲಿನಿ ಯೋಗದ ಅನುಷ್ಠಾನ ಕೈಗೊಂಡಿದ್ದೆ, ನಮ್ಮ ಗುರುಗಳಾದ ಶೂನ್ಯಾಮೃತಲಿಂಗಾರಾಧ್ಯರು 1992ರಲ್ಲಿ ಭೂಸಮಾಧಿ ಯೋಗ ಕೈಗೊಂಡಿದ್ದರು. ಅವರಂತೆಯೇ ನಾನು ಲೋಕಕಲ್ಯಾಣಕ್ಕಾಗಿ 41 ದಿನಗಳ ಕಾಲ ಭೂಸಮಾಧಿ ಯೋಗ ಮುಗಿಸಿ ಹೋರಬಂದಿದ್ದೇನೆ ಎಂದರು.
ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಶಿವೂರ ಗ್ರಾಮಸ್ಥರು ಪುಣ್ಯವಂತರು, ಯೋಗ ಶಕ್ತಿಯನ್ನು ಹೊಂದಿದ
ಪೂಜ್ಯರು ಗ್ರಾಮದಲ್ಲಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಮುಜರಾಯಿ ಇಲಾಖೆ ಸಚಿವರಾದ ರುದ್ರಪ್ಪ ಲಮಾಣಿ
ಅವರು ಶಿವೂರ ಗ್ರಾಮದ ವಿಜ್ಞಾನ ಯೋಗಾಶ್ರಮದ ಬೇಡಿಕೆಗಳನ್ನು ಈಡೆರಿಸುವುದಾಗಿ ಭರವಸೆ ನೀಡಿದ್ದಾರೆ
ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ವೈ. ಪಾಟೀಲ, ಬೆಂಗಳೂರಿನ ಯೋಗಾನಂದಾರ್ಯರು, ಹುಬ್ಬಳ್ಳಿಯ ದೇವಪ್ಪ ಅಜ್ಜನವರು, ಅಫಜಲಪುರದ ವಿಶ್ವರಾಧ್ಯ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಶಿವಬಸವರಾಜೇಂದ್ರ ಮಹಾಸ್ವಾಮೀಜಿ, ಶಾಂತಲಿಂಗ ಶಿವಾಚಾರ್ಯರು, ಶಿವಾನಂದ ಶಿವಾಚಾರ್ಯರು, ಅಭಿನವ ಪ್ರಭುಲಿಂಗ ಮಹಾಸ್ವಾಮೀಜಿ, ಕುಮಾರ ಶಿವಲಿಂಗ ಮಹಾಸ್ವಾಮೀಜಿ, ಸಿಂದಗಿ ಶಾಸಕ ರಮೇಶ ಭೂಸನೂರ, ಜಿ.ಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಶಿರಸಗಿ, ಎಪಿಎಂಸಿ ಅಧ್ಯಕ್ಷ ಶಂಕರಲಿಂಗ ಮೇತ್ರಿ, ಬಿಜೆಪಿ ತಾಲೂಕು ಅಧ್ಯಕ್ಷ ಸೂರ್ಯಕಾಂತ ನಾಕೇದಾರ ಹಾಗೂ ಮುಖಂಡರು ಹಾಜರಿದ್ದರು. ಉಪನ್ಯಾಸಕ ಜಿ.ಎಸ್. ಬಾಳಿಕಾಯಿ ಸ್ವಾಗತಿಸಿ, ನಿರೂಪಿಸಿದರು.