Advertisement

ಗಂಗಾ ಕಲ್ಯಾಣ: ಫಲಾನುಭವಿಗಳ ಪಟ್ಟಿ ನೀಡುವಂತೆ ಕೋಟ ಸೂಚನೆ

12:18 AM Jan 04, 2023 | Team Udayavani |

ಮಂಗಳೂರು : ಡಾ| ಬಿ. ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಸೇರಿದಂತೆ ವಾಲ್ಮೀಕಿ, ಭೋವಿ, ಆದಿ ಜಾಂಬವ, ಅಲೆಮಾರಿ ಹಾಗೂ ಅರೆ ಅಲೆಮಾರಿ ಮೊದಲಾದ ಅಭಿವೃದ್ಧಿ
ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಜಿಲ್ಲೆಗೆ ನಿಗದಿಪಡಿಸಿರುವ ಕೊಳವೆ ಬಾವಿ ಕೊರೆಸುವ ಯೋಜನೆಗೆ ಅರ್ಹರ ಪಟ್ಟಿ ನೀಡುವಂತೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Advertisement

ಮಂಗಳವಾರ ನಗರದ ಜಿಲ್ಲಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಂಗಾ ಕಲ್ಯಾಣ ಯೋಜನೆಯಡಿ ಜಿಲ್ಲೆಗೆ 232 ಗುರಿ ನಿಗದಿಪಡಿಸಲಾಗಿದ್ದು, ಎಲ್ಲ ಅಭಿವೃದ್ಧಿ ನಿಗಮಗಳು ಸಂಬಂಧಿಸಿದ ಶಾಸಕರ ಅಧ್ಯಕ್ಷತೆಯಲ್ಲಿ ತಮ್ಮ ವ್ಯಾಪ್ತಿಯ ಫಲಾನುಭವಿಗಳನ್ನು ಕೂಡಲೇ ಆಯ್ಕೆ ಮಾಡಿ, ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದರು.

ದ್ವಿಚಕ್ರ ವಾಹನ ಖರೀದಿಗೆ ನೆರವು
ನಿರುದ್ಯೋಗಿಗಳಿಗೆ ಅನು ಕೂಲ ವಾಗುವಂತೆ ಝೋಮ್ಯಾಟೋ, ಸ್ವಿಗ್ಗಿ ಇತರ ಕಂಪೆನಿಗಳೊಂದಿಗೆ ಕೆಲಸ ನಿರ್ವಹಿಸಲು, ಇ-ಕಾಮರ್ಸ್‌ ನೊಂದಿಗೆ ಲಿಂಕ್‌ ಮಾಡಿಕೊಂಡು ವಹಿವಾಟು ನಡೆಸಲು ದ್ವಿಚಕ್ರ ವಾಹನ ಖರೀದಿಗೆ ನೆರವು ನೀಡುವ ಸಲುವಾಗಿ ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ನೂರು ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ತಿಳಿಸಿದರು.

ಫಲಾನುಭವಿಗಳ ಆಯ್ಕೆ ಶೀಘ್ರ
ಡಾ| ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಮನಿಷ್‌ ಮಾತನಾಡಿ, ಈ ಹಿಂದೆ ಜಿಲ್ಲೆಗೆ 36 ಫಲಾನುಭವಿಗಳಿಗೆ ಗುರಿ ನಿಗದಿಪಡಿಸಲಾಗಿತ್ತು. ಈಗ ಹೆಚ್ಚು
ವರಿಯಾಗಿ ಗುರಿ ನಿಗದಿ ಪಡಿಲಾಗಿದೆ. ಕೂಡಲೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.

Advertisement

ಡಿಸಿ ಮನ್ನಾ ಜಾಗ
ಅರ್ಹರಿಗೆ ಡಿಸಿ ಮನ್ನಾ ಜಾಗವನ್ನು ನೀಡುವ ಸಂದರ್ಭದಲ್ಲಿ ಅವರು ವಾಸಿಸುತ್ತಿರುವ ಸ್ಥಳದ ಐದು ಕಿ. ಮೀ. ವ್ಯಾಪ್ತಿಯಲ್ಲಿಯೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಡಿಸಿ ಮನ್ನಾ ಜಾಗ ನೀಡುವಂತೆಯೂ ಸಚಿವರು ಸೂಚಿಸಿದರು.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮಾಡಿದರು.

ಶಾಸಕ ವೇದವ್ಯಾಸ್‌ ಕಾಮತ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪ ಸಿಂಹ ನಾಯಕ್‌, ಜಿಲ್ಲಾಧಿಕಾರಿ ರವಿ ಕುಮಾರ್‌ ಎಂ.ಆರ್‌., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್‌, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗೇಶ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ರಶ್ಮಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next