ನವದೆಹಲಿ: ಕ್ರೆಡಿಟ್ ಕಾರ್ಡ್ ಸೇವೆಗಳನ್ನು ಸಕ್ರಿಯಗೊಳಿಸುವ ಹೆಸರಿನಲ್ಲಿ ಫಾಸ್ಟಾಗ್ ಮೂಲಕ ಹಣ ಲಪಟಾಯಿಸಿ ವಂಚಿಸುತ್ತಿದ್ದ ಗ್ಯಾಂಗ್‌ವೊಂದನ್ನು ದೆಹಲಿ ಪೊಲೀಸರ ಕ್ರೈಂ ಬ್ರಾಂಚ್ ಬಂಧಿಸಿದೆ.
ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, ಅವರಲ್ಲಿದ್ದ ಐಷಾರಾಮಿ ವಾಹನಗಳು, ಇತರೆ ಎಸ್‌ಯುವಿಗಳು, ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು, ಕಾರ್ಡ್ ಸ್ವೈಪ್ ಯಂತ್ರ, ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಈ ಆರೋಪಿಗಳು 80 ಲಕ್ಷ ರೂ.ಗಳನ್ನು ಲಪಟಾಯಿಸಿದ್ದಾರೆ.
ಹೇಗೆ ವಂಚಿಸುತ್ತಿದ್ದರು?:
ಇತ್ತೀಚೆಗೆ ಯಾರೆಲ್ಲ ಕ್ರೆಡಿಟ್ ಕಾರ್ಡ್‌ಗಳನ್ನು ಖರೀದಿಸಿರುತ್ತಾರೋ ಅಂಥವರ ಮಾಹಿತಿಯನ್ನು ಮೊದಲು ಆರೋಪಿಗಳು ಸಂಗ್ರಹಿಸುತ್ತಿದ್ದರು. ನಂತರ, ಅಂಥ ಗ್ರಾಹಕರಿಗೆ ಕರೆ ಮಾಡಿ, ಕ್ರೆಡಿಟ್ ಕಾರ್ಡ್ ಆ್ಯಕ್ಟಿವೇಷನ್ ಮಾಡುವ ಮತ್ತು ಸಾಲದ ಮಿತಿ ಹೆಚ್ಚಳ ಮಾಡುವ ನೆಪ ಹೇಳಿ, ಗ್ರಾಹಕರ ಖಾತೆಯ ವಿವರಗಳನ್ನು ಪಡೆಯುತ್ತಿದ್ದರು. ಈ ಮಾಹಿತಿಗಳು ಮತ್ತು ಒಟಿಪಿಯನ್ನು ಬಳಸಿಕೊಂಡು, ಹೊಸ ಫಾಸ್ಟಾಗ್ ವ್ಯಾಲೆಟ್‌ವೊಂದನ್ನು ಸೃಷ್ಟಿಸಿ, ಈ ವ್ಯಾಲೆಟ್ ಅನ್ನು ಆ ಗ್ರಾಹಕನ ಬ್ಯಾಂಕ್ ಖಾತೆಗೆ ಲಿಂಕ್ ಮಾಡುತ್ತಿದ್ದರು.
ಮೊದಲಿಗೆ, ಬ್ಯಾಂಕ್ ಖಾತೆಯಲ್ಲಿನ ಹಣವನ್ನು ವ್ಯಾಲೆಟ್‌ಗೆ ವರ್ಗಾಯಿಸುತ್ತಿದ್ದರು. ಹರ್ಯಾಣ, ಚಂಡೀಗಡದಲ್ಲಿ ಪೆಟ್ರೋಲ್ ಪಂಪ್‌ಗ್ಳೊಂದಿಗೆ ನಂಟು ಹೊಂದಿರುವ ಆರೋಪಿಗಳು, ಅಲ್ಲಿರುವ ಸ್ವೆ„ಪ್ ಯಂತ್ರಗಳನ್ನು ಬಳಸಿ ವ್ಯಾಲೆಟ್‌ನಲ್ಲಿರುವ ಮೊತ್ತವನ್ನು ನಗದಾಗಿ ಪರಿವರ್ತಿಸಿಕೊಳ್ಳುತ್ತಿದ್ದರು. ನಂತರ ಆ ಮೊತ್ತವನ್ನು ಮೂವರೂ ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.