Advertisement

ಗಣೇಶೋತ್ಸವ ಸ್ಪೆಷಲ್ ; ಚೌತಿ ಸಂಭ್ರಮಕ್ಕೆ ಬಗೆ ಬಗೆಯ ಖಾದ್ಯ

01:19 PM Aug 21, 2020 | Nagendra Trasi |

ಹಬ್ಬ ಎಂದರೆ ಸಂಭ್ರಮ. ಸಿಹಿತಿಂಡಿ ಮಾಡುವುದು, ಅದನ್ನು ಹಂಚುವ ಉತ್ಸಾಹ ಎಲ್ಲರಲ್ಲಿಯೂ ಇರುತ್ತದೆ. ಗಣೇಶ ಹಬ್ಬ ಭಾರತಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಒಂದು ವಾರಗಳವರೆಗೆ ಆಚರಿಸಲ್ಪಡುವ ಈ ಹಬ್ಬಕ್ಕೆ ನಾನಾ ಕಡೆ ಹಲವು ರೀತಿಯ ತಿಂಡಿಗಳನ್ನು ತಯಾರಿಸ ಲಾಗುತ್ತದೆ. ಅವುಗಳಲ್ಲಿ ಕೆಲವು ತಿಂಡಿ ತಯಾರಿಕ ವಿಧಾನ ಇಲ್ಲಿದೆ.

Advertisement

ಮೋದಕ
ಮೋದಕ ಸಾಮಾನ್ಯವಾಗಿ ಚೌತಿಯ ದಿನ ಮಾಡುವ ಪ್ರಸಿದ್ಧ ತಿಂಡಿ. ಇದು ಗಣಪತಿಗೆ ಪ್ರಿಯವಾದ ತಿಂಡಿ. ನೈವೇವಾಗಿ ಮೋದಕವನ್ನು ಇಡುವುದು ಎಲ್ಲ ಕಡೆಗಳಲ್ಲೂ ಸಾಮಾನ್ಯ.

ಬೇಕಾಗುವ ಸಾಮಗ್ರಿಗಳು
ತುರಿದ ತೆಂಗಿನ ತುರಿ: ಒಂದು ಕಪ್‌
ಬೆಲ್ಲ : ಒಂದು ಕಪ್‌
ಜಾಯಿಕಾಯಿ: ಸ್ವಲ್ಪ
ಕೇಸರಿ: ಸ್ವಲ್ಪ
ನೀರು: ಒಂದು ಕಪ್‌
ತುಪ್ಪ: ಮೂರು ಚಮಚ
ಅಕ್ಕಿ ಹಿಟ್ಟು: ಒಂದು ಕಪ್‌

ಮಾಡುವ ವಿಧಾನ
ಒಂದು ಪ್ಯಾನ್‌ ಸ್ವಲ್ಪ ಬಿಸಿ ಮಾಡಿ ಅದಕ್ಕೆ ತುರಿದ ತೆಂಗಿನಕಾಯಿ ತುರಿ ಮತ್ತು ಬೆಲ್ಲ ಹಾಕಿ ಅದನ್ನು 5 ನಿಮಿಷ ಹಾಗೆಯೇ ಬಿಡಬೇಕು. ಅನಂತರ ಅದಕ್ಕೆ ಸ್ವಲ್ಪ ಜಾಯಿಕಾಯಿ ಮತ್ತು ಕೇಸರಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು.

Advertisement

ಮತ್ತೂಂದು ಪಾತ್ರೆ ತೆಗೆದುಕೊಂಡು ಅದಕ್ಕೆ ನೀರು ಹಾಕಿ ಬಿಸಿ ಮಾಡಿಕೊಳ್ಳಬೇಕು. ಅನಂತರ ಅದಕ್ಕೆ ಸ್ವಲ್ಪ ತುಪ್ಪ ಹಾಕಿಕೊಳ್ಳಬೇಕು. ಅದಕ್ಕೆ ಉಪ್ಪು ಮತ್ತು ಅಕ್ಕಿಹಿಟ್ಟು ಹಾಕಿಕೊಂಡು ಚೆನ್ನಾಗಿ ಮಿಕ್ಸ್‌ ಮಾಡಿಕೊಂಡು ಬೇಯಿಸಬೇಕು. ಅರ್ಧ ಗಂಟೆ ಹಿಟ್ಟು ಬೇಯಬೇಕು. ಅನಂತರ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಸವರಿಕೊಳ್ಳಬೇಕು. ತುಪ್ಪ ಸವರಿದ ಪಾತ್ರೆಗೆ ಸ್ವಲ್ಪ ಬಿಸಿ ಇರುವಾಗಲೇ ಹಿಟ್ಟನ್ನು ಹಾಕಿಕೊಳ್ಳಬೇಕು.

ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿ ಅದರೊಳಗಡೆ ಒಂದು ಸ್ಪೂನ್‌ ಮೊದಲೇ ತಯಾರಿಸಿದ ಬೆಲ್ಲದ ಮಿಶ್ರಣವನ್ನು ತುಂಬಬೇಕು. ಉಂಡೆಯ ಆಕಾರದಲ್ಲಿರುವ ಹಿಟ್ಟಿಗೆ ಬೇಕಾದ ಆಕಾರ ನೀಡಬಹುದು. ಇದನ್ನು 5 ನಿಮಿಷ ಹಬೆಯಲ್ಲಿ ಬೇಯಿಸಿದರೆ ಮೋದಕ ಸಿದ್ಧ.

ಪೂರನ್‌ ಪೋಲಿ
ಬೇಕಾಗುವ ಸಾಮಗ್ರಿ
ಕಡಲೆಬೇಳೆ: ಒಂದು ಕಪ್‌
ಮೈದಾ: ಎರಡು ಕಪ್‌
ನೀರು: ಮೂರು ಕಪ್‌
ಸಕ್ಕರೆ : ಒಂದು ಕಪ್‌
ಏಲಕ್ಕಿ : ಒಂದು ಚಮಚ
ಜಾಯಿಕಾಯಿ
ಉಪ್ಪು : ಸ್ವಲ್ಪ

ಬೇಳೆಯನ್ನು ಕುಕ್ಕರ್‌ನಲ್ಲಿ 3 ರಿಂದ 4 ವಿಶ‌ಲ್‌ವರೆಗೆ ಬೇಯಿಸಿಕೊಳ್ಳಬೇಕು. ನೀರು ಆರಿ ಚೆನ್ನಾಗಿ ಸ್ಮಾಶ್‌ ಆಗುವವರೆಗೆ ಬೇಯಿಸಿಕೊಳ್ಳಬೇಕು. ಅನಂತರ ಅದಕ್ಕೆ ಸಕ್ಕರೆ ಹಾಕಿ ಮಿಕ್ಸ್‌ ಮಾಡಿಕೊಳ್ಳಬೇಕು. ಸಣ್ಣ ಉರಿಯಲ್ಲಿ ಬೇಯಿಸುತ್ತಿರಬೇಕು. ಅನಂತರ ಅದಕ್ಕೆ ಜಾಯಿಕಾಯಿ ಮತ್ತು ಏಲಕ್ಕಿ ಹಾಕಿ ಮಿಕ್ಸ್‌ ಮಾಡಿಕೊಳ್ಳಬೇಕು. ಡ್ರೈ ಆಗುವವರೆಗೆ ಸಾಧಾರಣ ಉರಿಯಲ್ಲಿ ಬೇಯಿಸುತ್ತಿರಬೇಕು.

ಇನ್ನೊಂದು ಪಾತ್ರೆ ತೆಗೆದುಕೊಂಡು ಮೈದಾ, ಉಪ್ಪು ಮತ್ತು ತುಪ್ಪ ಹಾಕಿಕೊಂಡು ಮಿಕ್ಸ್‌ ಮಾಡಿಕೊಳ್ಳಬೇಕು. ಅನಂತರ ಸ್ವಲ್ಪ ನೀರು ಹಾಕಿಕೊಂಡು ಹದವಾಗಿ ಹಿಟ್ಟಿನ ಮಾದರಿಯಲ್ಲಿ ಮಾಡಿಕೊಳ್ಳಬೇಕು. ಅನಂತರ ಆ ಪಾತ್ರೆಯನ್ನು ಪ್ಲಾಸ್ಟಿಕ್‌ ಕವರ್‌ನಿಂದ 30 ನಿಮಿಷಗಳ ಕಾಲ ಮುಚ್ಚಿಡಬೇಕು.

ಹಿಟ್ಟಿನ ಮದ್ಯ ಮೊದಲೇ ತಯಾರಿಸಿದ ಬೇಳೆಯ ಮಿಶ್ರಣವನ್ನು ಹಾಕಿ ಚಪಾತಿ ರೀತಿಯಲ್ಲಿ ಲಟ್ಟಿಸಿಕೊಳ್ಳಬೇಕು. ತವಾದಲ್ಲಿ ಈ ಚಪಾತಿಯನ್ನು ಹಾಕಿ ಕಾಯಿಸಿಕೊಳ್ಳಿ ಅದರ ಮೆಲೆ ಸ್ವಲ್ಪ ತುಪ್ಪ ಹಾಕಿಕೊಳ್ಳಬಹುದು. ಈಗ ಬಿಸಿಯಾಗಿ ಪೂರನ್‌ ಪೋಲಿ ಸವಿಯಲು ಸಿದ್ಧ.

ಟೊಮೇಟೊ ಚಕ್ಕುಲಿ
ಗಣೇಶನ ಹಬ್ಬಕ್ಕೆ ಸಿಹಿ ತಿಂಡಿಯ ಜತೆಗೆ ವಿವಿಧ ಬಗೆಯ ಚಕ್ಕುಲಿ ಜತೆಗೆ ಟೊಮೇಟೋ ಚಕ್ಕುಲಿಯೂ ಒಂದು.

ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು : ಒಂದು ಕಪ್‌
ಹುರಿಗಡಲೆ: ಕಾಲು ಕಪ್‌
ಕಡಲೆಹಿಟ್ಟು: ಕಾಲು ಕಪ್‌
ಟೊಮೇಟೊ:ಎರಡು
ಮೆಣಸಿನ ಪುಡಿ: ಒಂದು ಚಮಚ
ಜೀರಿಗೆ :ಸ್ವಲ್ಪ
ಉಪ್ಪು : ಸ್ವಲ್ಪ
ಬೆಣ್ಣೆ : ಸ್ವಲ್ಪ
ಎಣ್ಣೆ: ಕರಿಯಲು

ಮಾಡುವ ವಿಧಾನ
ಬೇಳೆಯನ್ನು ಸ್ವಲ್ಪ ಹುರಿದುಕೊಂಡು ಅದನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಅನಂತರ ಟೊಮೇಟೊವನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟು, ಕಡಲೆಬೇಳೆ ಹಿಟ್ಟು, ಜೀರಿಗೆ, ಮೆಣಸಿನ ಪುಡಿ, ಬೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ಅನಂತರ ಅದಕ್ಕೆ ರುಬ್ಬಿದ ಟೊಮೇಟೊವನ್ನು ಹಾಕಿ ಮಿಕ್ಸ್‌ ಮಾಡಿಕೊಳ್ಳಬೇಕು. ಹಿಟ್ಟು ತಯಾರಿಸಿಕೊಳ್ಳಬೇಕು ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿಟ್ಟುಕೊಳ್ಳಬೇಕು. ಚಕ್ಕುಲಿ ಒತ್ತುವ ಪಾತ್ರೆಯನ್ನು ಬಳಸಿ ಹಿಟ್ಟನ್ನು ಎಣ್ಣೆಗೆ ಬಿಡಬೇಕು. ಈಗ ಬಿಸಿಬಿಸಿ ಟೊಮೇಟೊ ಚಕ್ಕುಲಿ ಸವಿಯಲು ಸಿದ್ಧ.

ಬಾಳೆಹಣ್ಣಿನ ಹಲ್ವಾ
ಬೇಕಾಗುವ ಸಾಮಗ್ರಿಗಳು
ಹುರಿದ ರವೆ:ಒಂದು ಕಪ್‌
ಬಾಳೆ ಹಣ್ಣು: 3
ಬಾದಾಮಿ ಮತ್ತು ಗೋಡಂಬಿ ಸ್ವಲ್ಪ
ಒಣದ್ರಾಕ್ಷಿ, ಏಲಕ್ಕಿ: ಸ್ವಲ್ಪ
ತುಪ್ಪ: ಮೂರು ಚಮಚ
ಕೇಸರಿ: ಸ್ವಲ್ಪ
ಬಿಸಿ ಹಾಲು:ಎರಡೂವರೆ ಕಪ್‌

ಮಾಡುವ ವಿಧಾನ
ಒಂದು ಪ್ಯಾನ್‌ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಹಾಕಿ ರವೆಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಅದಕ್ಕೆ ಸುಲಿದ ಬಾಳೆಹಣ್ಣು ಹಾಕಿ ಮಿಕ್ಸ್‌ ಮಾಡಿಕೊಳ್ಳಬೇಕು. ಬಿಸಿ ಹಾಲು ಅಥವಾ ನೀರು ಹಾಕಿಕೊಂಡು ಮಿಕ್ಸ್‌ ಮಾಡಿಕೊಳ್ಳಬೇಕು. ಅದಕ್ಕೆ ಗೋಡಂಬಿ, ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಹಾಕಿಕೊಂಡು ಮಿಕ್ಸ್‌ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಬೇಕಾದಷ್ಟು ಸಕ್ಕರೆ ಹಾಕಿಕೊಳ್ಳಬೇಕು. ಅದು ತಳ ಹಿಡಿಯದಂತೆ 2 ರಿಂದ 3 ನಿಮಿಷ ನೋಡಿಕೊಳ್ಳಬೇಕು. ನಂತರ ಅದಕ್ಕೆ ಕೇಸರಿ ಬೆರೆಸಿಕೊಳ್ಳಬೇಕು. ಸುಮಾರು 3 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಸಿ ಮಾಡಿಕೊಳ್ಳಬೇಕು. ಈಗ ಬಾಳೆಹಣ್ಣೆನ ಹಲ್ವಾ ಹಬ್ಬಕ್ಕೆ ಸಿದ್ಧ.

ತೆಂಗಿನಕಾಯಿ ಲಡ್ಡು
ಬೇಕಾಗುವ ಸಾಮಗ್ರಿ
ತೆಂಗಿನ ತುರಿ: ಒಂದೂವರೆ ಕಪ್‌
ತುಪ್ಪ: ಒಂದು ಚಮಚ
ಏಲಕ್ಕಿ ಹುಡಿ: ಅರ್ಧಚಮಚ
ಕಂಡೆನ್ಸ್‌ಡ್‌ ಹಾಲು: ಮುಕ್ಕಾಲು ಕಪ್‌
ಕೊಬ್ಬರಿ ತುರಿ: ಅರ್ಧ ಕಪ್‌
ಗೋಡಂಬಿ, ದ್ರಾಕ್ಷಿ: ಸ್ವಲ್ಪ

ಮಾಡುವ ವಿಧಾನ
ಮೊದಲು ಒಂದು ಪ್ಯಾನ್‌ಗೆ ತುಪ್ಪ ಹಾಕಿ ಅದು ಬಿಸಿಯಾಗುವಾಗ ಅದಕ್ಕೆ ತೆಂಗಿನ ತುರಿಯನ್ನು ಹಾಕಿ ಹುರಿದಕೊಳ್ಳಬೇಕು. ಅನಂತರ ಅದಕ್ಕೆ ಹಾಲು ಸೇರಿಸಿ ಚೆನ್ನಾಗಿ ಕುದಿಸಿ ಏಲಕ್ಕಿ ಹುಡಿಯನ್ನು ಸೇರಿಸಬೇಕು. ಹಾಲು ಕುದಿದು ತಳ ಬಿಡುತ್ತಾ ಬಂದು ಗಟ್ಟಿಯಾಗುತ್ತಾ ಬಂದಾಗ ಕೆಳಗಿಳಿಸಬೇಕು, ಬಿಸಿ ಆರಿದ ಮೇಲೆ ಉಂಡೆ ಕಟ್ಟಬೇಕು. ಅದರ ಮಧ್ಯಕ್ಕೆ ಗೋಡಂಬಿ ದ್ರಾಕ್ಷಿಯನ್ನು ಹಾಕಿ ಕೊಬ್ಬರಿ ತುರಿಯಲ್ಲಿ ಉರುಳಿಸಿದರೆ ತೆಂಗಿನಕಾಯಿ ಲಡ್ಡು ಸವಿಯಲು ಸಿದ್ಧ.

(ಸಂಗ್ರಹ)
 ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next