Advertisement

ಸರ್ಕಾರದ ಕೈಯಲ್ಲಿ ಗಣೇಶ ತಯಾರಕರ ಬದುಕು

03:19 PM Sep 02, 2021 | Team Udayavani |

ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವ ಕುರಿತು ಸರ್ಕಾರ ಈವರೆಗೂ ಯಾವುದೇ ಸ್ವಷ್ಟ ನಿರ್ಧಾರ ತೆಗೆದುಕೊಳ್ಳದ ಕಾರಣ ಗೌರಿ ಹಾಗೂ ಗಣೇಶ ಮೂರ್ತಿ ತಯಾರಕರು ಹಾಗೂ ಮಾರಾಟಗಾರರಲ್ಲಿ ಆತಂಕ ಮೂಡಿದೆ.

Advertisement

ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಕುರಿತು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಸೆ.5 ರಂದು ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ. ಹೀಗಾಗಿ, ಸರ್ಕಾರ ಗಣೇಶೋತ್ಸವಕ್ಕೆ ಅವಕಾಶ ನೀಡುತ್ತೋ, ಇಲ್ಲವೋ ಎಂಬ ಗೊಂದಲದ ಜತೆಗೆ ತಮ್ಮ ವ್ಯಾಪಾರ ವಹಿವಾಟಿನ ಚಿಂತೆ ಅವರನ್ನು ಕಾಡುತ್ತಿದೆ.

ಗೌರಿಗಣೇಶ ಹಬ್ಬಕ್ಕಾಗಿಯೇ ಈಗಾಗಲೇ ಮಾರುಕಟ್ಟೆಗೆ ವಿವಿಧ ಶೈಲಿಯ ಮೂರ್ತಿಗಳ ಆಗಮನವಾಗಿದೆ. ಲಾಲಾಬಾಗ್‌, ವಿವಿಪುರಂ, ಜಯನಗರ, ಕೆ.ಆರ್‌ ಮಾರುಕಟ್ಟೆ ಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳಿಗೆ ಹಾಕಿ ಮಾರಾಟಕ್ಕೆ ಸಜ್ಜಾಗುತ್ತಿದ್ದಾರೆ. ಆದರೆ ಸರ್ಕಾರ ಹಬ್ಬದ ಬಗ್ಗೆ ಇನ್ನೂ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳುವುದು ತಡವಾಗಿದ್ದರಿಂದ ಇದರ ಪರಿಣಾಮ ವ್ಯಾಪಾರದ ಮೇಲೆ ಬೀಳಬಹುದಾ ಎಂಬ ಆತಂಕ ಎದುರಾಗಿದೆ. ಈ ಹಿಂದೆ ಗೌರಿಗಣೇಶ ಹಬ್ಬ ಬರುವ ಒಂದೆರಡು ತಿಂಗಳ ಹಿಂದೆಯೇ ಜನರು ನಮಗೆ ಇಷ್ಟೇ ಅಡಿಯ ಗಣಪತಿ ಬೇಕು ಎಂದು ಬೇಡಿಕೆಯಿಟ್ಟು ಕಾಯ್ದಿರಿಸುತ್ತಿದ್ದರು. ಆದರೆ, ಆ ಪರಿಸ್ಥಿತಿ ಈಗ ಇಲ್ಲ. ಜನರೂ ಸಹ ಸರ್ಕಾರದ ನಿರ್ಧಾರದ ಮೇಲೆ ಆಚರಣೆಯ ಬಗ್ಗೆ ಅವಲಂಬಿತರಾಗಿದ್ದಾರೆ ಎಂದು ಮಾವಳ್ಳಿ ಗೌರಿಗಣೇಶ ಮೂರ್ತಿಯ ವ್ಯಾಪಾರಿ ಪ್ರದೀಪ್‌ ತಿಳಿಸಿದರು.

ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಯಾವುದೇ ರೀತಿಯ ವ್ಯಾಪಾರ ಇರಲಿಲ್ಲ. ಈ ವರ್ಷ ಹಬ್ಬದ ಆಚರಣೆಗೆ ಸರ್ಕಾರ ಅವಕಾಶ ನೀಡಬಹುದು ಎಂಬ ನಿರೀಕ್ಷೆ ಇದೆ. ಹಬ್ಬ ಆಚರಣೆಗೆ ಸರ್ಕಾರ ಅವಕಾಶ ನೀಡಿದರೆ ಮೂರ್ತಿ ತಯಾರಕರು ಉಳಿಯುತ್ತಾರೆ. ಇಲ್ಲದಿದ್ದರೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ ಎಂದರು.

ಇದನ್ನೂ ಓದಿ:ಗ್ಯಾಸ್‌ ದರ 886 ರೂ…ಇದೇ ಮೋದಿ ಅಚ್ಚೇ ದಿನ್‌; ಸಿದ್ದರಾಮಯ್ಯ ವ್ಯಂಗ್ಯ

Advertisement

ಗೋದಾಮಿನಲ್ಲಿವೆ ಹಲವು ಮೂರ್ತಿಗಳು: ಕಳೆದ ವರ್ಷ 2 ಸಾವಿರಕ್ಕೂ ಅಧಿಕ ಮೂರ್ತಿಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ, ಅದರಲ್ಲಿ ಕೆಲವೇ
ಮೂರ್ತಿಗಳು ಮಾತ್ರ ಮಾರಾಟವಾಗಿದ್ದವು. ಅವುಗಳಿಗೆ ಮತ್ತೆ ಬಣ್ಣ ಹಾಕುವ ಕಾರ್ಯ ನಡೆದಿದೆ ಎಂದು ಗೋದಾಮಿನಲ್ಲಿದ್ದ ಕಳೆದ ವರ್ಷದ
ಮೂರ್ತಿಗಳನ್ನು ತೋರಿಸುತ್ತಾ ಮೂರ್ತಿ ತಯಾರಕ ತುಳಸಿರಾಮ್‌ ಹೇಳಿದರು. ಕಳೆದ ವರ್ಷ ಲಕ್ಷಾಂತರ ರೂ. ಬಂಡವಾಳ ಹಾಕಿದ್ದರೂ ಎಲ್ಲ ಹಣ ವಾಪಸ್‌ ಬರಲಿಲ್ಲ ಎಂದರು.

ವ್ಯಾಪಾರದ ಮೇಲೆ ಹೊಡೆತ: ಈಗಾಗಲೇ ಅರ್ಧ ಅಡಿಯಿಂದ ಹದಿನಾಲ್ಕು ಅಡಿ ವರೆಗಿನ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ. ಒಂದು ವೇಳೆ
ಸಣ್ಣ ಸಣ್ಣ ಮೂರ್ತಿಗಳನ್ನು ಕೂರಿಸಲು ಸರ್ಕಾರ ಅನುಮತಿ ನೀಡಿದರೆ ನಮ್ಮ ವ್ಯಾಪಾರದ ಮೇಲೆ ಹೊಡೆತ ಬೀಳಲಿದೆ ಎಂದು ಮೂರ್ತಿ ವ್ಯಾಪಾರಿಗಳು ಹೇಳುತ್ತಾರೆ

ಗಣೇಶ ಮೂರ್ತಿಗೆ ಆರ್ಡರ್‌ ಬರುತ್ತಿಲ್ಲ
ಬೀದಿ ಬದಿಯಲ್ಲಿ ಗಣೇಶ ಮೂರ್ತಿ ಕೂರಿಸುವರು ಹಬ್ಬದ ದಿನಗಳಲ್ಲಿ ಭಿನ್ನ ಭಿನ್ನ ಶೈಲಿಯ ಮೂರ್ತಿಗಳಿಗಾಗಿ ಆರ್ಡರ್‌ ಮಾಡುತ್ತಿದ್ದರು. ಆದರೆ ಅವರು ಈಗ ಮೂರ್ತಿಗೆ ಆರ್ಡರ್‌ ಮಾಡುತ್ತಿಲ್ಲ. ನಮ್ಮ ಬಳಿ ನಿರಂತರ ಮೂರ್ತಿ ಖರೀದಿಸುತ್ತಿದ್ದವರು ಈಗ ಸರ್ಕಾರದ ನಿರ್ಧಾರಕ್ಕೆ ಕಾಯುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರಕೈಗೊಳ್ಳಬೇಕು ಎಂದು ಮೂರ್ತಿ ತಯಾರಕ ಸಂತೋಷ ಮನವಿ ಮಾಡುತ್ತಾರೆ. ಈಗಾಗಲೇ ಗಣೇಶ ಮೂರ್ತಿ ವಿನ್ಯಾಸ ಪಡಿಸಲು ಕೋಲ್ಕತ್ತಾ, ಮುಂಬೈ ಸೇರಿದಂತೆ ವಿವಿಧಕಡೆಗಳಿಂದಕಾರ್ಮಿಕರು ಆಗಮಿಸಿದ್ದಾರೆ. ಆದರೆ
ಖರೀದಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ಕಲಾವಿದರ ಬದುಕು ಬೀದಿ ಪಾಲಾಗಲಿದೆ ಎಂದು ಅಳಲು ತೋಡಿಕೊಂಡರು

55 ವರ್ಷಗಳಿಂದ ನಾನು ಗೌರಿ-ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದೇನೆ. 2 ವರ್ಷಗಳಿಂದ ಅನುಭವಿಸಿದ ಪರಿಸ್ಥಿತಿ ಎಂದೂ ಕಂಡಿರಲಿಲ್ಲ. ಸರ್ಕಾರ ಈ ವರ್ಷ ಮೂರ್ತಿ ಮಾರಾಟಗಾರ ಮತ್ತು ತಯಾರಕರ ನೆರವಿಗೆ ಬರಬೇಕು.
ಈಶ್ವರ್‌, ಮಾವಳ್ಳಿಯ ಮಣ್ಣಿನ
ಮೂರ್ತಿ ವ್ಯಾಪಾರಿ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next