ಉಡುಪಿ: ಗಣೇಶೋತ್ಸವದ ಪ್ರಯುಕ್ತ ಸಮಾಜಕ್ಕೆ ಹೊಸದನ್ನು ಕೊಡಬೇಕೆನ್ನುವ ನೆಲೆಯಲ್ಲಿ ಮಣಿಪಾಲ ಸ್ಯಾಂಡ್ ಹಾರ್ಟ್ ಕಲಾವಿದರಾದ ಶ್ರೀನಾಥ ಮಣಿಪಾಲ, ವೆಂಕಿ ಪಲಿಮಾರು, ರವಿ ಹಿರೆಬೆಟ್ಟು ಅವರು 21 ರಾಷ್ಟ್ರಗಳ ಕೃತಕ ನೋಟುಗಳನ್ನು ಬಳಸಿಕೊಂಡು ಸಾಯಿರಾಧಾ ಮೋಟಾರ್ನ ಸಹಯೋಗದಲ್ಲಿ ಸುಮಾರು 12 ಅಡಿ ಎತ್ತರದ ಅತ್ಯಾಕರ್ಷಕ ಗಣೇಶನ ಮೂರ್ತಿ ನಿರ್ಮಿಸಿ ಜನರನ್ನು ಸೆಳೆಯುತ್ತಿದ್ದಾರೆ.
ಕೃತಕ ನೋಟು ಬಳಕೆ
ಕಲಾಕೃತಿಯಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಚೀನಾ, ಅಫ್ಘಾನಿಸ್ಥಾನ್, ಬೂತಾನ್, ಬಹರೇನ್, ಯುಎಇ, ಅಮೆರಿಕ, ಇಸ್ರೇಲ್ ಸೇರಿದಂತೆ ವಿವಿಧ ರಾಷ್ಟ್ರಗಳ ನೋಟುಗಳ ಸುಮಾರು 1,000 ಕೃತಕ ನೋಟುಗಳನ್ನು ಪೇಪರ್‌ನಿಂದ ನಿರ್ಮಿಸಲಾದ ಮೂರ್ತಿಗೆ ಸುಂದರವಾಗಿ ಪೋಣಿಸಲಾಗಿದೆ. ಭಾರತದ 2,000 ರೂ., 500 ರೂ., 100 ರೂ., 50 ರೂ., 10 ರೂ., ಕೃತಕ ನೋಟುಗಳನ್ನು ಹೆಚ್ಚಾಗಿ ಬಳಸಲಾಗಿದೆ.
ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶಈ ಕಲಾಕೃತಿಯು ನಗರದ ವಿದ್ಯಾಸಮುದ್ರ ಮಾರ್ಗದಲ್ಲಿರುವ ಸಾಯಿರಾಧಾ ಮೋಟಾರ್ ನಲ್ಲಿ ಆ. 31ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಗಣೇಶ ಚತುರ್ಥಿಯ ಅಂಗವಾಗಿ ಈ ವಿಶೇಷ ಗಣಪತಿ ಮೂರ್ತಿಯ ಸಾರ್ವಜನಿಕ ವೀಕ್ಷಣೆಗೆ ಮುಂದಿನ 10 ದಿನಗಳ ಕಾಲ ಅವಕಾಶ ಕಲ್ಪಿಸಲಾಗಿದೆ.
ಇಲ್ಲಿಯವರೆಗೆ ಪೇಪರ್ ಕಪ್, ಹ್ಯಾಂಡ್‌ಮೇಡ್ ಪೇಪರ್, ಗುಡಿ ಕೈಗಾರಿಕೆಯ ವಸ್ತುಗಳು, ಬಿಸ್ಕೇಟ್, ಧಾನ್ಯಗಳನ್ನು ಬಳಸಿ ಗಣೇಶನ ಕಲಾಕೃತಿ ರಚಿಸಲಾಗಿದ್ದು, ಇದೇ ಮೊದಲ ಬಾರಿ ಬಗೆಬಗೆಯ ಕೃತಕ ನೋಟುಗಳನ್ನು ಬಳಸಿಕೊಂಡು ಗಣೇಶನ ವಿಗ್ರಹ ರಚಿಸಲಾಗಿದೆ ಎಂದು ಮಣಿಪಾಲ ಸ್ಯಾಂಡ್ ಹಾರ್ಟ್ ಕಲಾವಿದ ಶ್ರೀನಾಥ ಮಣಿಪಾಲ ತಿಳಿಸಿದರು.