ಹುಣಸೂರು: ಗಣೇಶ ಹಬ್ಬದ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ದಕ್ಷಿಣ ವಲಯದ ಐ.ಜಿ.ಪಿ. ಪ್ರವೀಣ್ ಮಧುಕರ್ ಪವಾರ್ ಸೂಚಿಸಿದರು.
ಹುಣಸೂರು ಡಿವೈಎಸ್‌ಪಿ ಕಚೇರಿಗೆ ಭೇಟಿ ನೀಡಿದ್ದ ಅವರು ಉಪವಿಭಾಗ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಗಣೇಶೋತ್ಸವದ ಕುರಿತು ಮಾಹಿತಿ ಪಡೆದುಕೊಂಡ ಅವರು ನಿಯಮಾನುಸಾರ ಕಟ್ಟು ನಿಟ್ಟಿನ ಕ್ರಮ ವಹಿಸಬೇಕು. ಯಾವುದೇ ಘಟನೆಗಳಿಗೆ ಆಸ್ಪದ ಕೊಡದಂತೆ ಎಚ್ಚರ ವಹಿಸಬೇಕೆಂದರು.
ಅಪರಾಧ ಪ್ರಕರಣಗಳ ಪ್ರಗತಿ ಪರಿಶೀಲನೆ ನಡೆಸಿದ ಐಜಿಪಿಯವರು ಹುಣಸೂರು, ಎಚ್.ಡಿ. ಕೋಟೆ ತಾಲೂಕುಗಳು ಕೇರಳ ಗಡಿಯಂಚಿನಲ್ಲಿದ್ದು, ಎಚ್ಚರ ವಹಿಸಬೇಕು. ಇನ್ನು ಬಾಕಿ ಉಳಿದ ಹಳೇ ಪ್ರಕರಣ ಪತ್ತೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ತಾಕೀತು ಮಾಡಿದರು.
ಸಭೆಯಲ್ಲಿ ಎಸ್.ಪಿ. ಚೇತನ್.ಆರ್, ಅಡಿಷನಲ್ ಎಸ್.ಪಿ.ನಂದಿನಿ, ಡಿವೈಎಸ್‌ಪಿ ರವಿಪ್ರಸಾದ್ ಸೇರಿದಂತೆ ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ತಾಲೂಕಿನ ವಿವಿಧ ಠಾಣೆಗಳ ಇನ್ಸ್ಪೆಕ್ಟರ್, ಎಸ್.ಐ.ಗಳು ಹಾಜರಿದ್ದರು.
ಸಿಬ್ಬಂದಿಗಳ ಸಮಸ್ಯೆ ಆಲಿಸಿದ ಐಜಿಪಿ: ಸಭೆಗೂ ಮುನ್ನ ಐಜಿಪಿಯವರಿಗೆ ಡಿವೈಎಸ್‌ಪಿ ರವಿಪ್ರಸಾದ್ ನೇತೃತ್ವದ ತಂಡ ಗೌರವ ರಕ್ಷೆ ನೀಡಿದರು. ನಂತರ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಎಸ್.ಐ.ಗಳ ಕುರಿತು ಅವರ ಆರೋಗ್ಯ,ಕುಟುಂಬ ಹಾಗೂ ಠಾಣೆಗಳ ಮೇಲಿನ ಒತ್ತಡ ಹಾಗೂ ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡರು.