Advertisement

ಪ್ರಣವ ಸ್ವರೂಪಂ ವಕ್ರತುಂಡಂ

10:06 PM Aug 21, 2020 | mahesh |

 

Advertisement

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭಾ| ನಿರ್ವಿಘ್ನಂ ಕುರು ಮೇ ದೇವಾ. . . .ಎಂದು ಎಲ್ಲ ಕಾರ್ಯಗಳ ಆರಂಭದಲ್ಲಿ ಗಣಪತಿ ಪ್ರಾರ್ಥನೆ ಸಾಮಾನ್ಯ. “ಶ್ರೀಗಣಾಧಿಪತಯೇ ನಮಃ’ ಎಂದು ಬರೆಯುವುದರ ಮೂಲಕ ವಿದ್ಯಾರಂಭ. ವಿವಾಹ, ಗೃಹಾರಂಭ ಇತರ ಎಲ್ಲ ಮಂಗಳ ಕಾರ್ಯಗಳಲ್ಲೂ ನಿರ್ವಿಘ್ನತೆಯನ್ನು ಬಯಸುತ್ತಾರೆ. ಕರ್ಮಾಂಗಗಳು ಆರಂಭಗೊಳ್ಳುವುದು ಗಣಪತಿ ಪ್ರಾರ್ಥನೆಯಿಂದಲೇ.

ನಮ್ಮ ಎಲ್ಲ ಮಂತ್ರಗಳ ಆರಂಭವೂ ಓಂಕಾರದಿಂದಲೇ. ಕರ್ಮಾಂಗಗಳ ಮೊದಲೂ ಗಣಪತಿಯ ಪೂಜೆ, ಮಂತ್ರೋಚ್ಛಾರಣೆಯಲ್ಲೂ ಮೊದಲಿಗೆ ಓಂಕಾರ. ಓಂಕಾರ ಗಣಪತಿಯ ಶಬ್ಧರೂಪ. ಸಂಸ್ಕೃತದ ಓಂಕಾರ ಲಿಪಿಯೂ ಗಣಪತಿಯನ್ನೇ ಹೋಲುತ್ತದೆ. ಓಂಕಾರವೇ ಪ್ರಣವ ಸ್ವರೂಪ. ಅವನೇ ನಮ್ಮ ಗಣಪ. ಕೃತ, ತ್ರೇತಾ, ದ್ವಾಪರದಲ್ಲೂ ಪೂಜಿತ ಗಣಪ ಕಲಿಯುಗದಲ್ಲಿ ಮೂಲತಃ ವೇದಮಂತ್ರ ಉಪನಿಷತ್ತುಗಳ ಮಂತ್ರಾನುಸರಣೆಯೊಂದಿಗೆ ಜಪ, ಹೋಮ, ಅಭಿಷೇಕ ಇತ್ಯಾದಿ ಸಾಧನಾ ಮಾರ್ಗದಲ್ಲಿ ಆರಾಧಿಸಲ್ಪಡುತ್ತಿದ್ದಾನೆ.

ಭಾದ್ರಪದ ಶುಕ್ಲ ಚತುರ್ಥಿ ಗಣೇಶ ಚತುರ್ಥಿ. ವಿಶ್ವದೆಲ್ಲೆಡೆ ಆಚರಿಸಲ್ಪಡುವ ವಿಶ್ವವ್ಯಾಪೀ ಗಣಪನಿಗೆ ಅಂದು ವಿಶೇಷ ಉತ್ಸವ. ದೇವಾಲಯ ಗರ್ಭಗುಡಿಗೆ ಸೀಮಿತವಾಗಿದ್ದ ಗಣಪ ಅಂದು ತನ್ನ ಭಕ್ತರು ಕರೆದಲ್ಲಿಗೆ ಬಂದು ಕೂರುತ್ತಾನೆ. ಶುಲಭದಲಿ ಅತಿ ಶುಲಭನು ನಮ್ಮ ಗಣಪ. ರೇಖೆಗಳನ್ನು ಬರೆದು ಆಹ್ವಾನಿಸಿದರೂ ಬರುವನು ಆತ.

ಗಣೇಶಾರಾಧನೆ
ಶಿಲ್ಪದಲ್ಲಿ ಗಣೇಶ ಮೂಡಿಬಂದದ್ದು ಗುಪ್ತರ ಕಾಲದ ಬಳಿಕ. ಕ್ರಿ.ಶ. 5ನೇ ಶತಮಾನದಿಂದ ಗಣೇಶನನ್ನು ಪ್ರತಿಮಾ ರೂಪದಲ್ಲಿ ಪೂಜಿಸುವ ಪರಂಪರೆ ಆರಂಭಗೊಂಡಿತು ಎನ್ನಬಹುದು. ಗಣಪತಿಯನ್ನೇ ಆರಾಧಿಸುವ ಗಾಣಪತ್ಯ ಪಂಥ ಆರು ವಿಭಿನ್ನ ಉಪಪಂಥವಾಗಿ ಬೆಳೆದು ಆರು ವಿವಿಧ ರೂಪದ ಗಣೇಶನನ್ನು ಪೂಜಿಸಿತು. ಮಹಾಗಣಪತಿ, ಹರಿದ್ರಾ ಗಣಪತಿ, ಉಚ್ಛಿಷ್ಠ ಗಣಪತಿ, ನವನೀತ ಗಣಪತಿ, ಸ್ವರ್ಣ ಗಣಪತಿ ಮತ್ತು ಸನಾತನ ಗಣಪತಿ. ಬ್ರಹ್ಮವೈವರ್ತ ಪುರಾಣದಲ್ಲಿ ಗಣಪತಿಯೇ ಮನುಷ್ಯ ರೂಪದಲ್ಲಿ ಕೃಷ್ಣನಾಗಿದ್ದ. ಶನಿಯು ಒಂದು ಮಗುವಿನೊಂದಿಗೆ ಅಲ್ಲಿಗೆ ಹೋದನು. ಆಗ ಮಗುವಿನ ಶಿರಸ್ಸು ಪ್ರತ್ಯೇಕಗೊಂಡು ಗೋಲೋಕಕ್ಕೆ ತೆರಳಿತು.

Advertisement

ಐರಾವತ ಆನೆಯ ಮರಿಯೊಂದು (ಪುತ್ರ ಎನ್ನುತ್ತದೆ ಬ್ರ.ವೈ.ಪುರಾಣ) ಕಾಡಿನಲ್ಲಿತ್ತು. ಅದರ ತಲೆಯನ್ನು ಮಗುವಿಗೆ ಜೋಡಿಸಲಾಯಿತು. (ಟಿ.ಎ. ಗೋಪೀನಾಥ್‌ ರಾವ್‌ ಎಲೆಮೆಂಟ್ಸ್‌ ಆಫ್ ಹಿಂದು ಇಕ್ನೋಗ್ರಾಫಿ) ಮೂಷಿಕ ವಾಹನವುಳ್ಳ ಪ್ರಾಚೀನ ಗಣೇಶ ವಿಗ್ರಹಗಳು ಉತ್ತರ ಭಾರತದಲ್ಲಿ ಕಂಡು ಬಂದರೂ, ದಕ್ಷಿಣ ಭಾರತದಲ್ಲಿ 12ನೇ ಶತಮಾನಕ್ಕಿಂತ ಮೊದಲು ಇರಲಿಲ್ಲ. ತುಳುನಾಡಿನಲ್ಲಿ ಗಣೇಶನ ಆರಾಧನೆ ಆರಂಭಗೊಂಡ ಕಾಲ ನಿರ್ಣಯವನ್ನು ನಿರ್ಧರಿಸುವುದು ತುಸು ಕಷ್ಟವಾದರೂ ಶಂಕರವಿಜಯ ತಿಳಿಸಿದಂತೆ ಗಾಣಪತ್ಯ ಪಂಥವು ತುಳುವರಲ್ಲಿ ಇತ್ತು.

ದೇವಾಲಯಗಳಲ್ಲಿ ಗಣಪತಿ
ನಮ್ಮ ದೇವಾಲಯಗಳಲ್ಲಿ ಬಹುತೇಕ ಗಣೇಶನನ್ನು ಪಾರ್ಶ್ವದೇವತೆಯಾಗಿ, ಪರಿವಾರ ದೇವತೆಯಾಗಿ ಅಥವಾ ಪ್ರಧಾನ ದೇವರಾಗಿಯೂ ಪೂಜಿಸುವುದನ್ನು ಕಾಣುತ್ತೇವೆ. ಗರ್ಭಗುಡಿ ದ್ವಾರದ ಪಕ್ಕದಲ್ಲಿಯೂ ಗಣಪನನ್ನು ಕಾಣುತ್ತೇವೆ. ತೀರ್ಥಮಂಟಪದ ಕಂಬಗಳಲ್ಲೂ ಗಣಪತಿಯ ಉಬ್ಬು ಚಿತ್ರಗಳಿವೆ. ಪ್ರಾಚೀನ ಪ್ರತಿಮಾ ದರ್ಶನದನ್ವಯ ಸುಮಾರು 4-5ನೇ ಶತಮಾನದ ಅವಧಿಯಲ್ಲೇ ಗಣೇಶನ ಚಿತ್ರಗಳು, ಬಿಂಬಗಳೂ ದೊರಕಿವೆ. ಕಾಬೂಲ್‌ನಲ್ಲಿ ಅವಶೇಷಗಳಡಿ ದೊರಕಿದ ಗಣೇಶ 4ನೇ ಶತಮಾನದ್ದು.

ಬ್ರಹ್ಮಪುರಾಣ, ಬ್ರಹ್ಮಾಂಡ ಪುರಾಣ, ಗಣೇಶ ಮತ್ತು ಮುದ್ಗಲ ಪುರಾಣಗಳು ಗಣೇಶನ ಕುರಿತಾಗಿ ಇರುವ ನಾಲ್ಕು ಪ್ರಮುಖ ಗ್ರಂಥಗಳು. ಗಣಪತಿ ಅಥರ್ವಶೀರ್ಷವು 16-17ನೇ ಶತಮಾನದಲ್ಲಿ ರಚನೆಗೊಂಡವು.
ಅಜಂ ನಿರ್ವಿಕಲ್ಪಂ ನಿರಾಕಾರಂ ಏಕಂ
ನಿರಾನಂದಂ ಆನಂದಂ ಅದ್ವೈತಪೂರ್ಣಂ
ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ
ಪರಬ್ರಹ್ಮರೂಪಂ ಗಣೇಶಂ ಭಜೇಮ
ಎಂದು ಗಣೇಶನನ್ನು ಆದಿಶಂಕರರು ಸುಂದರವಾಗಿ ಸ್ತುತಿಸಿದ್ದಾರೆ.

ಅವನು ಜಗತ್ತಿಗೆ ಕಾರಣನು, ಅವನು ಜ್ಞಾನರೂಪಿ. ಅವನು ಗುಣಗಳ ಈಶ, ಗುಣೇಶ, ಅವನೇ ಗಣೇಶ. ಅವನು ಜಗದ್ವ್ಯಾಪಕನು, ವಿಶ್ವವಂದ್ಯನು, ಸುರೇಶನು, ಅವನು ಗುಣಾತೀತನು, ಚಿದಾನಂದರೂಪಿಯು, ಜ್ಞಾನಗಮ್ಯನು, ಚಿದಾಭಾಷಕನು, ಆಕಾಶರೂಪನು ಎಂದು ವರ್ಣಿಸಿದ್ದಾರೆ.

ದೈತ್ಯಹರನು ನಮ್ಮ ವಕ್ರತುಂಡನು!
ಗಣೇಶ ನಮ್ಮಲ್ಲೆರಲ್ಲೂ ಇದ್ದಾನೆ. ನಮ್ಮನ್ನು ನಿಯಂತ್ರಿಸುವವನೂ ಅವನೇ. ಮುದ್ಗಲ ಪುರಾಣವು ಸುಂದರವಾಗಿ ವರ್ಣಿಸುತ್ತದೆ. ವಕ್ರತುಂಡಾವತಾರವು ನಮ್ಮೊಳಡಗಿದ್ದ ಮತ್ಸರಾಸುರನನ್ನು ವಧಿಸಿದೆ. ಏಕದಂತನು ಮದಾಸುರನನ್ನು, ಮಹೋದರನು ಮೊಹಾಸುರನನ್ನು, ಗಜಾನನನು ಲೋಭಾಸುರನನ್ನು, ಲಂಬೋದರನು ಕ್ರೋದಾಸುರನನ್ನು, ಗಣೇಶನು ಕಾಮಾಸುರನನ್ನೂ, ವಿಘ್ನರಾಜ ಮಮತಾಸುರನನ್ನೂ, ಮಹಾಗಣೇಶನು ಅಭಿಮಾನಾಸುರನನ್ನೂ ವಧಿಸಿದನಂತೆ. ಅರಿಷಡ್ವರ್ಗಗಳನ್ನು ಮರ್ಧಿಸುವವನು ಗಣಪತಿ. ಅವನೇ ದೈತ್ಯಹರನು.

ಮೊಟ್ಟಮೊದಲ ಗಣಪತಿ ವಿಗ್ರಹ ಮತ್ತು
ಶ್ರೀ ಬಾವೂಸಾಹೇಬ್‌ ಲಕ್ಷ್ಮಣ್‌ ಜವಾಲೆ
ಮರಾಠ ಚಕ್ರವರ್ತಿ ಶಿವಾಜಿಯ ಕಾಲದಿಂದಲೂ ಗಣೇಶೋತ್ಸವವನ್ನು ಸಾರ್ವಜನಿಕ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ಆದರೆ ಸಾರ್ವಜನಿಕ ಗಣೇಶ ವಿಗ್ರಹವನ್ನು ಮೊಟ್ಟ ಮೊದಲು ಸ್ಥಾಪಿಸಿದ್ದು ಬಾವೂಸಾಹೇಬ್‌ ಲಕ್ಷ್ಮಣ್‌ ಜವಾಲೆ. ಬಾಲಗಂಗಾಧರ ತಿಲಕರು ಖಾಸಗಿಯಾಗಿ ಆಚರಿಸಲ್ಪಡುತ್ತಿದ್ದ ಉತ್ಸವವನ್ನು ಸಾರ್ವಜನಿಕವಾಗಿ, ಅದ್ಧೂರಿಯಿಂದ ಆಚರಿಸುವ ಪದ್ಧತಿಯನ್ನು ಆರಂಭಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next