Advertisement

ಗಣೇಶೋತ್ಸವ: ತಡವಾದರೂ ಸ್ವಾಗತಾರ್ಹ ನಿರ್ಧಾರ

08:04 PM Sep 05, 2021 | Team Udayavani |

ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ರವಿವಾರ ರಾಜ್ಯ ಸರಕಾರ ಷರತ್ತುಗಳೊಂದಿಗೆ ಆಚರಿಸಲು ನಿರ್ಧಾರ ತಳೆದಿದೆ. ಗಣೇಶೋತ್ಸವ ಕುರಿತು ತ್ವರಿತ ನಿರ್ಧಾರ ತಳೆಯಬೇಕೆಂದು “ಉದಯವಾಣಿ’ ಬಹು ಹಿಂದೆಯೇ ಪ್ರತಿಪಾದಿಸಿತ್ತು. ಇನ್ನೇನು ನಾಲ್ಕೈದು ದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬ ಬರುತ್ತಿದೆ. ಈಗಲಾದರೂ ಮಾರ್ಗಸೂಚಿಗಳನ್ನು ಹೊರಡಿಸಿರುವುದು ಸ್ವಾಗತಾರ್ಹ. ಇಲ್ಲವಾದರೆ ಈಗಾಗಲೇ ಕಾದು ಕುಳಿತ ಗಣೇಶೋತ್ಸವ ಸಮಿತಿಯವರು ಸೂಕ್ತ ನಿರ್ಧಾರ ತಳೆಯಲಾಗದೆ ಭಕ್ತರಿಗೂ, ಸಮಿತಿಯವರಿಗೂ ತೊಂದರೆಯಾಗುತ್ತಿತ್ತು.

Advertisement

ಮನರಂಜನೆ, ಡಿಜೆಗಳಿಗೆ ಅವಕಾಶಗಳಿಲ್ಲದಿರುವುದು, ಸಣ್ಣ ಪೆಂಡಾಲುಗಳ ಸ್ಥಾಪನೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾ.ಪಂ.ಗಳಿಂದ ಅನುಮತಿ ಪಡೆಯ ಬೇಕಿರುವುದೇ ಮೊದಲಾದ ಮಾರ್ಗದರ್ಶಿ ಸೂತ್ರಗಳನ್ನು ಸರಕಾರ ಹೊರಡಿಸಿದೆ.

ಕೊರೊನಾ ಪಾಸಿಟಿವ್‌ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ಶೇ.2ಕ್ಕಿಂತ ಕಡಿಮೆ ಇದ್ದರೂ ಗಡಿ ಜಿಲ್ಲೆಗಳ ಸಾಲಿಗೆ ಸೇರಿಸಿ ಉಡುಪಿ ಜಿಲ್ಲೆಯಲ್ಲಿಯೂ ವಾರಾಂತ್ಯ ಕರ್ಫ್ಯೂವನ್ನು ಹೇರಲಾಯಿತು. ಎರಡು ದಿನ ಜನರು ಇದನ್ನು ಮನಸ್ಸಿಲ್ಲದ ಮನಸ್ಸಿನಿಂದ ಪಾಲಿಸಿದರು ಎನ್ನುವುದು ಕಂಡುಬಂದ ಲೋಕಸತ್ಯ. ಈಗಾಗಲೇ ಶೇ.80ರಷ್ಟು ಜನರು ಕೋವಿಡ್‌ 19 ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಇದನ್ನು ಎರಡು ವಾರಗಳಲ್ಲಿ ಶೇ.100ಕ್ಕೇರಿಸುವ ಗುರಿಯನ್ನೂ ಹೊಂದಲಾಗಿದೆ. ಹೀಗಿರುವಾಗ ಒಮ್ಮೆಲೆ ವಾರಾಂತ್ಯ ಕರ್ಫ್ಯೂವನ್ನು ಹೇರಿರುವುದು ಸಾರ್ವಜನಿಕರನ್ನು ಒಂದು ರೀತಿಯಲ್ಲಿ ಗೊಂದಲದಲ್ಲಿ ದೂಡಿದಂತಾಗಿತ್ತು. ಕೇರಳದಿಂದ ಬರುವವರು ಕೊರೊನಾ ಹೊತ್ತುಕೊಂಡು ಬರುವುದಕ್ಕೆ ಪ್ರತಿಬಂಧಕವಾಗಿ ಕೇರಳದಿಂದ ಬರುವವರನ್ನು ತಡೆಯುವುದು, ಸೂಕ್ತ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸುವುದು ಜಾಣತನದ ಮಾರ್ಗವೇ ವಿನಾ ವಾರಾಂತ್ಯ ಕರ್ಫ್ಯೂ ಹೇರುವಿಕೆ ಅಲ್ಲ.

ಎರಡು ವರ್ಷಗಳಿಂದ ಆಗಾಗ್ಗೆ ಲಾಕ್‌ಡೌನ್‌, ಸೀಲ್‌ಡೌನ್‌, ಕಂಟೈನ್ಮೆಂಟ್‌ ಝೋನ್‌ ಇತ್ಯಾದಿ ಪದಪುಂಜಗಳಿಂದ ಗಾಬರಿಗೊಳಗಾಗಿ ಆರ್ಥಿಕವಾಗಿ ದಿಕ್ಕೆಟ್ಟ ಜನರು ಇನ್ನೆಂತಹ ದಿನ ಬರುತ್ತದೆಯೋ ಎಂದು ಚಿಂತಿತರಾಗಿದ್ದಾರೆ. ಜನಪ್ರತಿನಿಧಿಗಳೂ ವಾರಾಂತ್ಯ ಕರ್ಫ್ಯೂವನ್ನು ವಿರೋಧಿಸಿದ್ದಾರೆ. ವರ್ತಕರ ಸಮುದಾಯವೂ ಇದನ್ನು ಪ್ರಬಲವಾಗಿ ವಿರೋಧಿಸಿದೆ.

ಮೂಲಗಳ ಪ್ರಕಾರ ಗಣೇಶ ಚತುರ್ಥಿ ಹಬ್ಬದ ಬಳಿಕ ವಾರಾಂತ್ಯ ಕರ್ಫ್ಯೂ ಕುರಿತು ನಿರ್ಧಾರ ತಳೆಯಬಹುದು ಎಂಬ ನಿರ್ಣಯಕ್ಕೆ ರಾಜ್ಯ ಸರಕಾರ ಬಂದಿದೆ. ಇದೇ ಶುಕ್ರವಾರ ಗಣೇಶ ಚತುರ್ಥಿ. ಈಗಿನ ಆದೇಶದ ಪ್ರಕಾರ ಮುಂದಿನ ಶನಿವಾರ-ರವಿವಾರ ವಾರಾಂತ್ಯದ ಕರ್ಫ್ಯೂ ಬರುತ್ತದೆ. ಗಣೇಶ ಚತುರ್ಥಿ ಹಬ್ಬವನ್ನು ಸಾರ್ವಜನಿಕವಾಗಿ ಗರಿಷ್ಠ ಐದು ದಿನಗಳೊಳಗೆ ಆಚರಿಸಬೇಕೆಂದು ಸರಕಾರ ಸೂಚಿಸಿದೆ. ಒಂದೆಡೆ ವಾರಾಂತ್ಯ ಕರ್ಫ್ಯೂ, ಇನ್ನೊಂದೆಡೆ ಗಣೇಶೋತ್ಸವ ಇರುವುದು ಸತಾರ್ಕಿಕವೆನಿಸುವುದಿಲ್ಲ. ಆದ್ದರಿಂದ ಗಣೇಶ ಚತುರ್ಥಿ ಹಬ್ಬದ ಒಳಗೆ ಕನಿಷ್ಠ ಉಡುಪಿ ಜಿಲ್ಲೆಯ ಮಟ್ಟಿಗಾದರೂ ವಾರಾಂತ್ಯ ಕರ್ಫ್ಯೂಗೆ ವಿನಾಯಿತಿ ಕೊಡುವುದು ಸೂಕ್ತ. ಇಲ್ಲವಾದರೆ ಹಬ್ಬ ಆಚರಿಸಬೇಕೋ? ಕರ್ಫ್ಯೂ ಆಚರಿಸಬೇಕೋ ಎಂಬ ಕುರಿತು ಮತ್ತೂಂದು ಗೊಂದಲ ಮೂಡಬಹುದು.

Advertisement

-ಸಂ

Advertisement

Udayavani is now on Telegram. Click here to join our channel and stay updated with the latest news.

Next