Advertisement

ಬದುಕು ಕಟ್ಟಿಕೊಟ್ಟ ಗಣೇಶ ತಯಾರಿಕೆ ವೃತ್ತಿ

12:32 PM Aug 29, 2022 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿ ಹಲವರಿಗೆ ಆಶ್ರಯ ಕಲ್ಪಿಸಿರುವುದರ ಜೊತೆಗೆ ಹೊರ ರಾಜ್ಯದವರಿಗೂ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿ ಆಗಿದೆ.

Advertisement

ಅಂತಹ ಕುಟುಂಬಗಳಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸಲೆಂದೇ ಪಶ್ಚಿಮ ಬಂಗಾಳದ ಕೋಲ್ಕತಾದಿಂದ ಬಂದ ಮದಲ್‌ ಪಾಲ್‌ ಕುಟುಂಬ ಕೂಡ ಒಂದು. 30 ವರ್ಷಗಳ ಹಿಂದೆ ನಗರಕ್ಕೆ ವಲಸೆ ಬಂದ ಈ ಕುಟುಂಬ ಇದೀಗ ಹೆಬ್ಬಾಳದ ಸಮೀಪದ ಬ್ಯಾಟರಾಯನಪುರದಲ್ಲಿ ಆಶ್ರಯಿಸಿದ್ದು ಸಾಂಪ್ರದಾಯಿಕ ಮಣ್ಣಿನ ಮೂರ್ತಿ ತಯಾರಿಕೆಯನ್ನು ವೃತ್ತಿಯಾಗಿಸಿ ಕೊಂಡು ಬದುಕು ಕಟ್ಟಿಕೊಂಡಿದೆ. ಪಾಲ್‌ ಕುಟುಂಬದಲ್ಲಿ 7 ಮಂದಿ ಇದ್ದಾರೆ.  ಅವರೆಲ್ಲರೂ ಗೌರಿಗಣೇಶ ಮೂರ್ತಿ ತಯಾರಿಸುವುದರ ಜತೆಗೆ ಮೂರ್ತಿಗಳಿಗೆ ಬಣ್ಣದ ಜೀವಕಳೆ ನೀಡುವುದರಲ್ಲಿ ಕೂಡ ಸಿದ್ಧಹಸ್ತರಾಗಿದ್ದಾರೆ.

ತಂದೆ, ಮಕ್ಕಳು ಜತೆಗೂಡಿ ಸಂಪ್ರದಾಯ ಬದ್ದ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ. ವರ್ಷವಿಡೀ ಗಣಪನ ವಿಗ್ರಹಗಳನ್ನೇ ಮಾರಾಟ ಮಾಡಿ ಬದುಕು ರೂಪಿಸಿಕೊಂಡಿದ್ದಾರೆ. ಕೋವಿಡ್‌ ಮೊದಲು 500 ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಲಾಗಿತ್ತು. ಕೋವಿಡ್‌ ನಂತರ ಕೇವಲ 40ರಿಂದ 50 ಮೂರ್ತಿಗಳನ್ನು ಮಾತ್ರ ಮಾರಾಟವಾಗಿತ್ತು. ಹೀಗಾಗಿ ಬದುಕು ಆರ್ಥಿಕ ದುಸ್ಥಿತಿಗೆ ಬಂದು ತಲುಪಿತ್ತು. ಆದರೆ, ಇದೀಗ ಎಲ್ಲೆಲ್ಲೂ ಗೌರಿ ಗಣೇಶನ ಹಬ್ಬದ ಕಳೆ ಕಳೆಕಟ್ಟಿರುವ ಹಿನ್ನೆಲೆಯಲ್ಲಿ ಆ ದುಗುಡ ಇಲ್ಲ ಎನ್ನುತ್ತಾರೆ ಪೌಲ್‌ ಕುಟುಂಬಸ್ಥರು.

ಸರ್ಕಾರ ಕೂಡ ಸಾರ್ವಜನಿಕ ಗಣೇಶೋತ್ಸವಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರು ಅಷ್ಟೇ ಅಲ್ಲ ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ರಾಮನಗರ, ಕೋಲಾರ ಮತ್ತಿತರ ಭಾಗಗಳಿಂದ ಗ್ರಾಹಕರು ಭಿನ್ನ ರೀತಿ ಗಣೇಶಮೂರ್ತಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಉತ್ತಮ ಮಾರಾಟವನ್ನು ಈ ಸಲ ನಿರೀಕ್ಷಿಸಲಾಗಿದೆ ಎಂದು ಕೋಲ್ಕತಾ ಮೂಲಕ ಮೂರ್ತಿ ತಯಾರಕ ಮದನ್‌ ಪೌಲ್‌ ಹೇಳುತ್ತಾರೆ.

ರಾಜಧಾನಿಯಲ್ಲಿ 30 ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿರುವುದರಿಂದ ಕಾಯಂ ಗ್ರಾಹಕರು ಇದ್ದಾರೆ. 2 ಅಡಿ ಎತ್ತರದ ಚಿಕ್ಕ ಮೂರ್ತಿಗಳಿಂದ ಹಿಡಿದು 6 ಅಡಿ ಎತ್ತರವುಳ್ಳ ಗಣೇಶ ಮೂರ್ತಿಗಳಿಗೆ ಗ್ರಾಹಕರು ಬೇಡಿಕೆ ಸಲ್ಲಿಸಿದ್ದಾರೆ. ಮನೆ ಬಾಗಿಲಿಗೆ ಬಂದು ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುತ್ತಾರೆ.

Advertisement

ಪರಿಸರ ಪ್ರೇಮಿ ಮೂರ್ತಿಗಳಿಗೆ ಆದ್ಯತೆ: ಕೋಲ್ಕತಾ ಮೂಲದ ಈ ಕುಟುಂಬ ಪರಿಸರ ಪ್ರೇಮಿ ಮೂರ್ತಿಗಳ ತಯಾರಿಕೆಗೆ ಆದ್ಯತೆ ನೀಡಿದೆ. ಕೋಲ್ಕತಾದಿಂದ ಪೂರೈಕೆ ಆಗಿರುವ ಮಣ್ಣು ಹಾಗೂ ಬಾಣಸವಾಡಿ ಕೆರೆಗಳಿಂದ ತಂದಿರುವ ಮಣ್ಣಿನ ಸಮಿಶ್ರಣಗಳಿಂದ ಮೂರ್ತಿ ವಿನ್ಯಾಸ ಪಡಿಸಲಾಗುತ್ತದೆ. ಜೇಡಿಮಣ್ಣಿನ ಮೂರ್ತಿಗಳಿಗೆ ಮುಂಬೈ ಗಣೇಶೋತ್ಸವದ ಟಚ್‌ ನೀಡಿ ಸೌಂದರ್ಯದ ಮೆರಗು ದ್ವಿಗುಣಗೊಳಿಸಲಾಗುತ್ತದೆ ಎಂದು ಮದಲ್‌ ಪಾಲ್‌ ತಿಳಿಸಿದ್ದಾರೆ.

ಕಳೆದ 20 ವರ್ಷಗಳಿಂದ ತಂದೆ ಜತೆ ನಾನೂ ಗಣಪನ ಮೂರ್ತಿ ವಿನ್ಯಾಸದಲ್ಲಿ ನಿರತನಾಗಿದ್ದೇನೆ. ಗಣೇಶನೊಂದಿಗೆ ವ್ಯಕ್ತಿಗಳ ಮೂರ್ತಿ ತಯಾರಿಸಲು ಬೇಡಿಕೆ ಬಂದಿವೆ. ದೇವರೊಂದಿಗೆ ವ್ಯಕ್ತಿಯ ಮೂರ್ತಿಯನ್ನು ನಿರ್ಮಿಸುವುದು ನಮ್ಮ ಸಂಪ್ರದಾಯವಲ್ಲ. ಹೀಗಾಗಿ ವಿವಿಧ ರೂಪದ ಗಣೇಶನನ್ನು ಮಾತ್ರ ತಯಾರಿಸಲಾಗಿದ್ದು, ಸುಮಾರು 800ಕ್ಕೂ ಹೆಚ್ಚು ಮೂರ್ತಿಗಳನ್ನು ಮಾಡಲಾಗಿದೆ. ಸಂದೀಪ್‌ ಪಾಲ್‌, ಗಣೇಶ ವಿಗ್ರಹ ತಯಾರಕರು

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next