ಬೆಂಗಳೂರು: ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ ಈ ಬಾರಿ ಜೆಪಿ ನಗರದ ಪುಟ್ಟೇನಹಳ್ಳಿಯ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದ ಆಡಳಿತ ಮಂಡಳಿ, ಸುಮಾರು 30 ಅಡಿ ಎತ್ತರದ ಗಣಪನನ್ನು ಕಬ್ಬಿನ ಜೊಲ್ಲೆಯಿಂದ ನಿರ್ಮಿಸಿ ಹಲವರ ಪ್ರಶಂಸೆಗೆ ಪಾತ್ರವಾಗಿದೆ.
ಪರಿಸರ ಉಳಿವಿನ ಜತೆಗೆ ಜಲ ಮಾಲಿನ್ಯದ ಬಗ್ಗೆಯೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ದೃಷ್ಟಿಯಿಂದ ಕಬ್ಬಿನಿಂದ ಗಣಪತಿಯನ್ನು ವಿನ್ಯಾಸ ಮಾಡಲಾಗಿದೆ. ಸುಮಾರು 50 ಟನ್ ಕಬ್ಬನ್ನು ಗಣಪತಿ ನಿರ್ಮಿಸಲು ಬಳಕೆ ಮಾಡಿಕೊಳ್ಳಲಾಗಿದ್ದು, ಗಣಪನ ವಾಹನ ಮೂಷಕಕ್ಕೂ ಕಬ್ಬಿನ ಜೊಲ್ಲೆ ಬಳಸಲಾಗಿದೆ.
ಗಣಪನ ಅಲಂಕಾರಕ್ಕೆ ತಮಿಳುನಾಡಿನ ಕಬ್ಬುಗಳನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಉತ್ತರಪ್ರದೇಶ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಸುಮಾರು 50 ಮಂದಿ ವೃತ್ತಿಪರ ಕಾರ್ಮಿಕರು ಒಂದೂವರೆ ತಿಂಗಳಿನಿಂದ ಗಣಪತಿ ವಿನ್ಯಾಸದಲ್ಲಿ ನಿರತರಾಗಿ¨ªಾರೆ ಎಂದು ದೇವಸ್ಥಾನದ ಟ್ರಸ್ಟಿ ರಾಮ್ ಮೋಹನ ರಾಜ್ ತಿಳಿಸಿದ್ದಾರೆ.
ಕಬ್ಬು ಭಕ್ತರಿಗೆ: ಗುರುವಾರ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದ್ದು ,15 ದಿನ ಶ್ರೀಸತ್ಯ ಸಾಯಿ ಗಣಪತಿ ದೇವಸ್ಥಾನದ ಆವರಣದಲ್ಲಿ ಗಣಪನನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಗಣಪತಿ ದೇವಸ್ಥಾನದ ಒಳಾಂಗಣವನ್ನು ಕಬ್ಬಿನ ಜೊಲ್ಲೆ ಜತೆಗೆ ಬಿಲ್ವಪತ್ರೆ ಕಾಯಿ, ಹಾಗೂ ತೆಂಗಿನ ಕಾಯಿಗಳಿಂದ ಅಲಂಕೃತಗೊಳಿಸಲಾಗಿದ್ದು, ಸುಮಾರು 50 ಸಾವಿರ ಮಂದಿ ದೇವಸ್ಥಾನಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಗಣಪತಿ ಹಬ್ಬ ಮುಗಿದ ತಕ್ಷಣ ಅಲಂಕಾರಿಕ ಕಬ್ಬುಗಳನ್ನು ಭಕ್ತರಿಗೆ ಹಂಚಲಾಗುವುದು ಎಂದು ರಾಮ್‌ಮೋಹನ ರಾಜ್ ಹೇಳಿದ್ದಾರೆ.
4 ಸಾವಿರ ಕೆ.ಜಿ. ಬೃಹತ್‌ಲಾಡು: ಇದೇ ವೇಳೆ ಗಣೇಶ ಚತುರ್ಥಿ ಅಂಗವಾಗಿ ಸಿದ್ಧಪಡಿಸಲಾಗಿರುವ 4 ಸಾವಿರ ಕೆ.ಜಿ. ತೂಕದ ಬೃಹದಾಕಾರದ ಲಾಡನ್ನು ಮಂಗಳವಾರ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅನಾವರಣಗೊಳಿಸಲಾಯಿತು.
ಗೌರಿ -ಗಣೇಶ ಹಬ್ಬದ ವಿಶೇಷವಾಗಿ ದೇವಸ್ಥಾನದ ಆಡಳಿತ ಮಂಡಳಿ ಲಾಡನ್ನು ಸಿದ್ಧಪಡಿಸಿದ್ದು, ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುವುದು. ಲಾಡು ತಯಾರಿಸಲು 1000 ಕೆ.ಜಿ. ಕಡಲೆ ಹಿಟ್ಟು, 2000 ಕೆ.ಜಿ. ಸಕ್ಕರೆ, 700 ಕೆ.ಜಿ. ಸನ್ ಪ್ಯೂರ್‌ಎಣ್ಣೆ, 300 ಕೆ.ಜಿ. ತುಪ್ಪ, 50 ಕೆ.ಜಿ. ಗೋಡಂಬಿ, 50 ಕೆ.ಜಿ. ಒಣ ದ್ರಾಕ್ಷಿ, 5 ಕೆ.ಜಿ. ಏಲಕ್ಕಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ.