Advertisement

ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ನಿಷೇಧ

01:59 PM Aug 18, 2020 | Suhan S |

ಮಂಡ್ಯ: ಕೋವಿಡ್‌-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗೌರಿ-ಗಣೇಶ ಹಬ್ಬ ಹಾಗೂ ಮೊಹರಂ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲು ಅವಕಾಶ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗೌರಿ-ಗಣೇಶ ಪ್ರತಿಷ್ಠಾಪನೆಗೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.21, 22ರಂದು ನಡೆಯಲಿರುವ ಗೌರಿ-ಗಣೇಶ ಹಬ್ಬಕ್ಕೆ ಪಿಒಪಿ ಹಾಗೂ ರಾಸಾಯನಿಕ ಬಣ್ಣದಿಂದ ಮಾಡಿದ ಗಣೇಶ ಮಾರಾಟ ಮತ್ತು ಪ್ರತಿಷ್ಠಾಪನೆಗೆ ನಿರ್ಬಂಧಿಸಲಾಗಿದೆ. ಜಿಲ್ಲೆಯ ಗಡಿಯಲ್ಲಿ ಪಿಒಪಿ ಹಾಗೂ ರಾಸಾಯನಿಕ ಬಣ್ಣದ ಗಣೇಶಕ್ಕೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅರಿಶಿಣ ಪರಿಸರ ಸ್ನೇಹಿ ಗೌರಿ-ಗಣೇಶ ಮೂರ್ತಿಗಳನ್ನು ಬಳಸಬೇಕು ಎಂದು ಮನವಿ ಮಾಡಿದರು.

ಕೆರೆ, ಕಟ್ಟೆ, ಕಲ್ಯಾಣಿಗಳಲ್ಲಿ ವಿಸರ್ಜನೆಗೆ ನಿಷೇಧ: ಸಾರ್ವಜನಿಕ ಸ್ಥಳ, ಮೈದಾನ, ಗಲ್ಲಿ, ರಸ್ತೆಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧಿಸಿದ್ದು, ದೇವಸ್ಥಾನ ಹಾಗೂ ತಮ್ಮ ಮನೆಗಳಲ್ಲೇ ಅರಿಶಿಣ ಗಣೇಶಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲು ಅವಕಾಶವಿದೆ. ಹಬ್ಬ ಆಚರಣೆ ಮಾಡುವ ವೇಳೆ ಮಾಸ್ಕ್, ಸ್ಯಾನಿಟೈಸರ್‌ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಗೌರಿ-ಗಣೇಶ ವಿಸರ್ಜನೆಗೆ ಕೆರೆ, ಕಟ್ಟೆ, ಬಾವಿ ಮತ್ತು ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡದಂತೆ ನಿಷೇಧಿಸಿದೆ ಎಂದು ತಿಳಿಸಿದರು.

ಸರಳವಾಗಿ ಹಬ್ಬ ಆಚರಿಸಿ: ತಮ್ಮ ಮನೆಯ ಆವರಣದಲ್ಲಿಯೇ ವಿಸರ್ಜನೆ ಮಾಡಬೇಕು. ನಿಯಮ ಉಲ್ಲಂಘಿಸಿದರೆ ಜಲ ಮೂಲಗಳ ತಡೆ ಮತ್ತು ನಿಯಂತ್ರಣ ಕಾಯ್ದೆ 1974ರ ಕಾಲಂ 45ರ ಅನ್ವಯ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು. ಮೆರವಣಿಗೆ, ಡಿಜೆ ಸೌಂಡ್ಸ್ ಬಳಕೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಪೂರ್ಣ ನಿರ್ಬಂಧಿಸಲಾಗಿದೆ.ಆದ್ದರಿಂದ ಸಾರ್ವಜನಿಕರು ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಸರಳವಾಗಿ ಹಬ್ಬ ಆಚರಣೆ ಮಾಡಬೇಕು ಎಂದು ಹೇಳಿದರು.

ಯೋಜನಾ ನಿರ್ದೇಶಕ ಟಿ.ಎನ್‌. ನರಸಿಂಹಮೂರ್ತಿ, ವಾರ್ತಾಧಿಕಾರಿ ಟಿ.ಕೆ. ಹರೀಶ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next