ಬೆಳಗಾವಿ: 11 ದಿನಗಳ ಕಾಲ ಪೂಜಿಸಿ ಆರಾಧಿಸಲ್ಪಟ್ಟ ಗಣಪನಿಗೆ ವಿದಾಯ ಹೇಳಲಾಯಿತು. ನಗರ ಸೇರಿದಂತೆ ಜಿಲ್ಲೆಯಾದ್ಯಂತ 11 ದಿನದ ಅನಂತ ಚತುರ್ದಶಿಯಂದು ಗಣೇಶನಿಗೆ ಅದ್ಧೂರಿಯಾಗಿ ಕಳುಹಿಸಿ ಕೊಡಲಾಯಿತು.
ನಗರದ ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆಗೆ ಮಂಗಳವಾರ ಸಂಜೆ 5:30ಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಗಣೇಶ ಮೂರ್ತಿಗೆ ಆರತಿ ಬೆಳಗಿ, ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಮೇಯರ್ ಸವಿತಾ ಕಾಂಬಳೆ, ಶಾಸಕರಾದ ಅಭಯ ಪಾಟೀಲ, ಆಸೀಫ (ರಾಜು) ಸೇಠ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಪಂ ಸಿಇಒ ರಾಹುಲ್ ಶಿಂಧೆ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಮಾಜಿ ಶಾಸಕರಾದ ಮಹಾಂತೇಶ ಕವಟಗಿಮಠ, ಅನಿಲ್ ಬೆನಕೆ, ಪದಾಧಿಕಾರಿಗಳಾದ ರಂಜಿತ ಪಾಟೀಲ, ವಿಕಾಸ ಕಲಘಟಗಿ, ವಿಜಯ ಜಾಧವ ಸೇರಿದಂತೆ ಇತರರು ಇದ್ದರು.
ಗಣ್ಯರು ಢೋಲ್ ತಾಷಾ ಬಾರಿಸಿದರು. ಶಾಸಕ ಅಭಯ ಪಾಟೀಲ ಟ್ರ್ಯಾಕ್ಟರ್ ಚಲಾಯಿಸಿದರು.
ಗಣಪತಿ ಬಪ್ಪಾ ಮೋರಯಾ, ಪುಡಚ್ಯಾ ವರ್ಷಿ ಲೌಕರ್ ಯಾ, ಮಂಗಲ ಮೂರ್ತಿ ಮೋರಯಾ ಎಂಬ ಘೋಷಣೆಗಳನ್ನು ಮೊಳಗಿಸಿ ಗಣೇಶ ಮುಂದಿನ ವರ್ಷ ಮತ್ತೆ ಬೇಗ ಬಾ ಎಂದು ಜೈಕಾರ ಹಾಕಿದರು.