ಬೆಂಗಳೂರು: ನಗರದಲ್ಲಿ ಮೋದಕ ಪ್ರಿಯ ಗಣಪನನ್ನು ಬರಮಾಡಿಕೊಳ್ಳಲು ಜನ ಸಜ್ಜಾಗಿದ್ದಾರೆ. ಇದಕ್ಕಾಗಿಯೇ ಶುಕ್ರವಾರ ವಿವಿಧೆಡೆ ಜನರು ಖರೀದಿ ಪ್ರಕ್ರಿಯಲ್ಲಿ ತೊಡಗಿದ್ದು ಕಂಡು ಬಂತು.
ನಗರದ ಅಲ್ಲಲ್ಲಿ ತಲೆ ಎತ್ತಿರುವ ಮಾರುಕಟ್ಟೆಯಲ್ಲೂ ವ್ಯಾಪಾರ ಜೋರಾಗಿ ನಡೆಯಿತು. ಗೌರಿ, ಗಣೇಶ ಮೂರ್ತಿಗಳು,ಬಾಳೆಕಂದು, ಪೂಜೆಗೆ ಬೇಕಾದ ವಸ್ತುಗಳನ್ನು ಜನರು ಖರೀದಿಸಿದರು. ಕೋವಿಡ್ ಹಿನ್ನೆಲೆ ಕೆ.ಆರ್ ಮಾರುಕಟ್ಟೆ ಬಂದ್ ಆಗಿದ್ದು ಆ ಹಿನ್ನೆಲೆಯಲ್ಲಿ ಬೆಂಗಳೂರು ಅಕ್ಕಪಕ್ಕದ ಹಳ್ಳಿಗಳಿಂದ ತಂದುರಸ್ತೆಯಂಚುಗಳಲ್ಲಿ ಹೂವು ಹಣ್ಣು ಮಾರಾಟ ಮಾಡಿದರು. ಕೋವಿಡ್‌ನಿಂದ ಈ ಹಿಂದೆ ಗಣೇಶೋತ್ಸವಕ್ಕೆ ನಿಷೇಧ ಹೇರಲಾಗಿದೆ ಎಂದಾಗ ಮೂರ್ತಿ ತಯಾರಕರು ಆತಂಕ ಗೊಂಡಿದ್ದರು. ಆದರೆ ಹಬ್ಬಕ್ಕೆ ಐದಾರು ದಿನ ಬಾಕಿ ಇರುವಾಗ ಸಾರ್ವಜನಿಕ ಗಣೇಶೋತ್ಸವಕ್ಕೆ ಸರಕಾರ ಅವಕಾಶ ನೀಡಿದ ಹಿನ್ನೆಲೆಯಲ್ಲಿಮೂರ್ತಿಗಳು ಭರದಿಂದ ಮಾರಾಟವಾಗುತ್ತಿವೆ. ಜಯನಗರ, ಜೆ,ಪಿ.ನಗರ, ಆರ್.ವಿ.ರಸ್ತೆ, ಬಸವನಗುಡಿ, ಮಲ್ಲೇಶ್ವರ ಸೇರಿದಂತೆ 150 ರೂ.ನಿಂದ 25 ಲಕ್ಷದವರೆಗಿನ ಮೂರ್ತಿಗಳು ಕೂಡ ಮಾರಾಟಕ್ಕಿವೆ. ಪರಿಸರಪ್ರಿಯ ಗಣಪತಿ ಖರೀದಿ ಜೋರಾಗಿತ್ತು. ಕೆಲವು ಕಂಪನಿಗಳು ಗಣೇಶ ಮೂರ್ತಿಗಳನ್ನು ಉಡುಗೊರೆ ನೀಡುವ ಸಲುವಾಗಿ ಮೂರ್ತಿ ತಯಾರಕರಿಂದ ಬಲ್ಕ್ ಆಗಿ ಖರೀದಿಸಿವೆ ಎಂದು ವಿಗ್ರಹ ತಯಾರಕ ಮೂರ್ತಿ ಹೇಳಿದರು.
ಸರಳ ಗಣೇಶ ಚತುರ್ಥಿ ಆಚರಣೆಗೆ ಮನವಿ : ನಗರದಲ್ಲಿ ಕೋಚಿಡ್ ಭೀತಿ ಇರುವ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕರು ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸುವಂತೆ ಬಿಬಿಎಂಪಿ ಕೋರಿದೆ. ಗಣೇಶ ಚತುರ್ಥಿ ವೇಳೆವಾರ್ಡ್‌ಗೆ ಒಂದೇ ಗಣೇಶಮೂರ್ತಿ ಪ್ರತಿಷ್ಠಾಪನೆ ಅನುಮತಿಗೆ ಏಕಗವಾಕ್ಷಿ ಪದ್ಧತಿ, ಗರಿಷ್ಠ ಮೂರು ದಿನಕ್ಕೆ ಗಣೇಶಮೂರ್ತಿ ವಿಸರ್ಜಿಸುವುದು ಸೇರಿದಂತೆ ಹಲವು ಷರತ್ತು ಹಾಗೂ ಕೆಲವು ನಿರ್ದಿಷ್ಟ ಸೂಚನೆಗಳನ್ನು ನೀಡಿದೆ. ಮೂರು ದಿನಗಳಿಗೆ ಅಷ್ಟೇ ಅವಕಾಶ: ಪಾಲಿಕೆಯ ಪ್ರತಿ ವಾರ್ಡ್‌ನಲ್ಲಿ ಗರಿಷ್ಠ 4 ಅಡಿ ಎತ್ತರದಒಂದು ಗಣೇಶಮೂರ್ತಿ ಪ್ರತಿಷ್ಠಾಪಿಸಬಹುದು. ಆದರೆ, ಆ.22ರಿಂದ 24ರ ವರೆಗೆ ಮಾತ್ರ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡಲಾಗುತ್ತದೆ. ಈ ಬಾರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಗಣೇಶಮೂರ್ತಿಗಳನ್ನು ಗರಿಷ್ಠ ಮೂರು ದಿನದ ಬಳಿಕ ವಿಸರ್ಜಿಸಬೇಕು. ಸಾರ್ವಜನಿಕರು ತಮ್ಮ ಮನೆಗಳಲ್ಲೇ ಪರಿಸರ ಸ್ನೇಹಿ ಗಣೇಶಮೂರ್ತಿ ಪ್ರತಿಷ್ಠಾಪಿಸಬೇಕು ಮತ್ತು ಮನೆಯಲ್ಲೇ ವಿಸರ್ಜಿಸಬೇಕು ಎಂದು ಪಾಲಿಕೆ ತಿಳಿಸಿದೆ.
ಸಂಚಾರಿ ವಾಹನದಲ್ಲೇ ವಿಸರ್ಜನೆ: ಸರ್ಕಾರವೂ ಈಗಾಗಲೇ ನಿರ್ದೇಶನನೀಡಿರುವಂತೆ ಈ ಬಾರಿ ಯಾವುದೇ ಮೆರವಣಿಗೆ ಅವಕಾಶವಿಲ್ಲ. ಸಾರ್ವ ಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಪಾಲಿಕೆ ನಿಯೋಜಿಸುವ ಸಂಚಾರಿ ವಾಹನದಲ್ಲಿಯೇ ವಿಸರ್ಜಿಸಬೇಕು ಎಂದು ಬಿಬಿಎಂಪಿ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಎಚ್ಚರಿಕೆ: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಹಲವು ಷರತ್ತುಗಳನ್ನು ವಿಧಿಸಿರುವ ಪಾಲಿಕೆ ಮಾರ್ಗಸೂಚಿ ಪಾಲನೆ ಹಾಗೂ ನಿಯಮಗಳನ್ನು ಉಲ್ಲಂಘನೆಮಾಡುವವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ತೆಗೆದುಕೊಳ್ಳವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಕೂರಿಸುವ ಗಣೇಶ ಮೂರ್ತಿಗಳನ್ನು ಮನೆಗಳಲ್ಲೇ ವಿಸರ್ಜನೆ ಮಾಡುವ ಮೂಲಕ ಸಹಕಾರ ನೀಡಬೇಕು. ಸರಳ ಹಾಗೂ ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸಿ, ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸಬೇಕು.
-ಎನ್.ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ