Advertisement

ಮೋದಿ ಸಂದೇಶ ತಲುಪಿಸಿದ ಗಣೇಶ

01:34 PM May 12, 2018 | |

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಒಂದು ಸಣ್ಣ ತಂಡದಲ್ಲಿರುವ ಓರ್ವ ಸದಸ್ಯ ಗಣೇಶ್‌ ಯಾಜಿ. ಆದರೆ, ಕಳೆದ ಒಂದು ವಾರದಮಟ್ಟಿಗೆ ಅವರ ದಿನಚರಿ ಆರಂಭವಾದದ್ದು ಪ್ರಧಾನಿ ನರೇಂದ್ರ ಮೋದಿ ಜತೆಗೆ. ಚುನಾವಣಾ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಸುತ್ತಿದ ಪ್ರಧಾನಿ ಜತೆಗೇ ಇದ್ದವರು ಗಣೇಶ್‌ ಯಾಜಿ. ಅಷ್ಟೇ ಅಲ್ಲ, ಪ್ರಧಾನಿಯು ಭಾಷಣಕ್ಕೆ ನಿಂತರೆ, ಪಕ್ಕದಲ್ಲೇ ನಿಂತು ಅವರೊಂದಿಗೆ ಯಾಜಿ ಕೂಡ ಮಾತು ಆರಂಭಿಸುತ್ತಿದ್ದರು. 

Advertisement

ಹಾಗಾಗಿ, ಕೇವಲ ಒಂದು ವಾರದಲ್ಲಿ ರಾಜ್ಯದ ಜನತೆಗೆ ಯಾಜಿ ಅವರದ್ದು ಪರಿಚಿತ ಮುಖ ಆಗಿಬಿಟ್ಟಿದೆ. ಹಾಗಂತಾ, ಗಣೇಶ್‌ ಯಾಜಿ ಪ್ರಧಾನಿ ಆಪ್ತರಲ್ಲ; ಆಪ್ತ ಸಹಾಯಕರೂ ಅಲ್ಲ. ಪ್ರಧಾನಿಯ ಹಿಂದಿ ಭಾಷಣವನ್ನು ಸುಲಲಿತವಾಗಿ ಕನ್ನಡದಲ್ಲಿ ಜನರಿಗೆ ತಲುಪಿಸಿದ ತರ್ಜುಮೆದಾರ.

ಕಳೆದ ಐದಾರು ದಿನಗಳಲ್ಲಿ ರಾಜ್ಯಾದ್ಯಂತ ನರೇಂದ್ರ ಮೋದಿ ಅವರು ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ, ಭಾಷಣ ಮಾಡಿದರು. ಅದರಲ್ಲಿ ಚಾಮರಾಜನಗರ, ಚಿತ್ರದುರ್ಗ, ತುಮಕೂರು, ವಿಜಯಪುರ, ಕೋಲಾರ ಸೇರಿ ಐದು ಕಡೆಗಳಲ್ಲಿ ನಡೆದ ಸುಮಾರು 21 ರ್ಯಾಲಿಗಳನ್ನು ಗಣೇಶ್‌ ಯಾಜಿ ಕನ್ನಡದಲ್ಲಿ ಭಾಷಾಂತರಿಸಿ ಪ್ರಧಾನಿ ಸಂದೇಶಗಳನ್ನು ಜನರಿಗೆ ತಲುಪಿಸಿದ್ದಾರೆ. 

ಹಿಂದಿಯಿಂದ ಕನ್ನಡಕ್ಕೆ ಭಾಷಾಂತರಿಸುವುದು ಸಮಸ್ಯೆ ಅಲ್ಲ. ಆದರೆ, ಜನಸಾಗರದ ಮುಂದೆ ಹಾಗೂ ಪ್ರಧಾನಿ ಪಕ್ಕದಲ್ಲಿ ನಿಂತು ಪ್ರಧಾನಿಯ ಭಾವನೆಗಳ ಸಮೇತ ಭಾಷಣದ ಸಾರವನ್ನು ತಲುಪಿಸುವುದು ದೊಡ್ಡ ಸವಾಲು ಆಗಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆ. ಯಾಕೆಂದರೆ, ಭಾಷಣದ ನಂತರ ಅದಕ್ಕೆ ವೈಯಕ್ತಿಕವಾಗಿ ಕೇಳಿಬಂದ ಮೆಚ್ಚುಗೆ ಮಾತುಗಳು, ದೂರವಾಣಿ ಕರೆಗಳು ಆ ಸಾರ್ಥಕತೆಯನ್ನು ಹೇಳುತ್ತಿದ್ದವು ಎಂದು ಗಣೇಶ್‌ ಯಾಜಿ ತಿಳಿಸುತ್ತಾರೆ. ‚

“ಪ್ರಧಾನಿಯೇ ಆತಂಕ ದೂರ ಮಾಡಿದ್ರು’: ಭಾಷಾಂತರ ನನಗೆ ಹೊಸದಲ್ಲ; 1983ರಲ್ಲಿ ಚಿತ್ರದುರ್ಗದಲ್ಲಿ ಫಾರುಕ್‌ ಅಬ್ದುಲ್ಲಾ ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಆದರೆ ಅದು ಆಕಸ್ಮಿಕವಾಗಿತ್ತು. ಇದಾದ ನಂತರ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ಭಾಷಣವನ್ನೂ ತರ್ಜುಮೆ ಮಾಡಿದ್ದೆ. ಆದರೆ, ಈ ಬಾರಿ ಪ್ರಧಾನಿಯ ಅದರಲ್ಲೂ ಚುನಾವಣಾ ಪ್ರಚಾರ ಭಾಷಣ ಮಾಡುವ ಅವಕಾಶ ಸಿಕ್ಕಿತು. ಇದೊಂದು ಅದ್ಭುತ ಅನುಭವ. ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ಮೋದಿ ಅವರು ಮೊದಲ ಭಾಷಣ ಆರಂಭಿಸಿದಾಗ ನನ್ನಲ್ಲಿ ಆತಂಕ ಮನೆ ಮಾಡಿತ್ತು. ಅದನ್ನು ಸ್ವತಃ ಪ್ರಧಾನಿ ದೂರ ಮಾಡಿದರು ಎಂದು ಯಾಜಿ
ಮೆಲುಕು ಹಾಕಿದರು. 

Advertisement

ಸಂತೇಮರಹಳ್ಳಿ ರ್ಯಾಲಿಯಲ್ಲಿ ನಾನು ಮೋದಿ ಅವರ ಪಕ್ಕದಲ್ಲೇ ಒಂದು ಹೆಜ್ಜೆ ಹಿಂದೆ ನಿಂತು ಮಾತು ಆರಂಭಿಸಿದೆ. ಆದರೆ, ಮೋದಿ ಅವರು ಭುಜದ ಮೇಲೆ ಕೈಹಾಕಿ ನನ್ನನ್ನು ಮುಂದೆ ಕರೆದುಕೊಂಡರು. ಆಗ, ಧೈರ್ಯಬಂತು. ಇದಾದ ನಂತರ ಎಲ್ಲೆಡೆ ಅನಾಯಾಸವಾಗಿ ಭಾಷಾಂತರ ಮಾಡಲು ಸುಲಭವಾಯಿತು ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next