Advertisement

ಗಣೇಶ್‌ ಹೊಸ ಚಿತ್ರ 99

11:15 AM Dec 05, 2018 | |

ನಟ ಗಣೇಶ್‌ ಅವರ ಹೊಸ “ಆರೆಂಜ್‌’ ಚಿತ್ರ ಬಿಡುಗಡೆಯ ಹಂತದಲ್ಲಿದ್ದು, ಇದೇ ಶುಕ್ರವಾರ ಚಿತ್ರ ತೆರೆಕಾಣುತ್ತಿದೆ. “ಆರೆಂಜ್‌’ ಬಿಡುಗಡೆಯಾಗುತ್ತಿದ್ದಂತೆ ಗಣೇಶ್‌ ಅವರ ಹೊಸ ಚಿತ್ರವೊಂದು ಸೆಟ್ಟೇರಲಿದೆ! ಹೌದು, ಗಣೇಶ್‌ ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಡಿಸೆಂಬರ್‌ 7 ರಂದು ಈ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಪ್ರೀತಂ ಗುಬ್ಬಿ ಈ ಚಿತ್ರದ ನಿರ್ದೇಶಕರು.

Advertisement

ಪ್ರೀತಂ ಗುಬ್ಬಿ ಹಾಗೂ ಗಣೇಶ್‌ ಕಾಂಬಿನೇಶನ್‌ನಲ್ಲಿ ಈಗಾಗಲೇ ಎರಡು ಸಿನಿಮಾಗಳು ಬಂದಿವೆ. ಈಗ ಮೂರನೇ ಸಿನಿಮಾಕ್ಕೆ ಈ ಜೋಡಿ ಅಣಿಯಾಗಿದೆ. ಈ ಚಿತ್ರವನ್ನು ರಾಮು ಅವರು ನಿರ್ಮಿಸುತ್ತಿದ್ದು, ಚಿತ್ರ ಅದ್ಧೂರಿ ಬಜೆಟ್‌ನಲ್ಲಿ ತಯಾರಾಗಲಿದೆ.  ಅಂದಹಾಗೆ, ಈ ಚಿತ್ರಕ್ಕೆ “99′ ಎಂದು ಹೆಸರಿಡಲಾಗಿದೆ. ಎಲ್ಲಾ ಓಕೆ, ಚಿತ್ರಕ್ಕೆ “99′ ಎಂದು ಹೆಸರಿಡಲು ಕಾರಣವೇನು ಎಂದು ನೀವು ಕೇಳಬಹುದು.

ಇದು ತಮಿಳಿನ “96′ ಚಿತ್ರದ ರೀಮೇಕ್‌ ಆಗಿದ್ದು, ಅಲ್ಲಿನ 96 ಅನ್ನು ಇಲ್ಲಿ 99 ಮಾಡಲಾಗಿದೆ. ವಿಜಯ್‌ ಸೇತುಪತಿ ಹಾಗೂ ತ್ರಿಶಾ ನಟಿಸಿರುವ ತಮಿಳು ಚಿತ್ರ “96′ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಹೊಸ ಬಗೆಯ ಕಥೆಯೊಂದಿಗೆ ಈ ಚಿತ್ರ ಗಮನ ಸೆಳೆಯುವ ಮೂಲಕ ಪ್ರೇಕ್ಷಕರನ್ನು ರಂಜಿಸಿತ್ತು. ಸಿನಿಮಾ ಹಿಟ್‌ಲಿಸ್ಟ್‌ ಸೇರುತ್ತಿದ್ದಂತೆ ಕನ್ನಡದ ರೀಮೇಕ್‌ ರೈಟ್ಸ್‌ ಅನ್ನು ನಿರ್ಮಾಪಕ ರಾಮು ಪಡೆದಿದ್ದಾರೆ.

ಅದರಂತೆ ಈಗ ಗಣೇಶ್‌ ಅವರಿಗೆ ಸಿನಿಮಾ ಮಾಡುತ್ತಿದ್ದಾರೆ. ಮೂಲ ಚಿತ್ರದ ಕಥೆಯನ್ನು ಉಳಿಸಿಕೊಂಡು ಉಳಿದಂತೆ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂಬುದು ಚಿತ್ರತಂಡದ ಮಾತು. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ, ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ. 

Advertisement

Udayavani is now on Telegram. Click here to join our channel and stay updated with the latest news.

Next