ನಟ ಗಣೇಶ್‌ಗೆ ನಿರ್ದೇಶಕ ಸುನಿ “ಸಖತ್ ‘ ಚಿತ್ರ ಮಾಡುತ್ತಿರೋದು ಗೊತ್ತೇ ಇದೆ. ಆ ಚಿತ್ರ ಇನ್ನು ಬಿಡುಗಡೆಯಾಗದೇ ಇರುವಾಗಲೇ ಇಬ್ಬರ ಕಾಂಬಿನೇಷನ್‌ನಲ್ಲಿ ಮತ್ತೂಂದು ಚಿತ್ರ ಶುರುವಾಗುತ್ತಿದೆ ಅನ್ನೋದೇ ವಿಶೇಷ. ಹೌದು, ಗಣೇಶ್‌ಗಾಗಿ ಸುನಿ ಹೊಸ ಚಿತ್ರ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ “ದಿ ಸ್ಟೋರಿ ಆಫ್ ರಾಯಗಢ ‘ ಎಂದು ನಾಮಕರಣ ಮಾಡಿದ್ದಾರೆ. ಈ ಹಿಂದೆ ಸುನಿ ಮತ್ತು ಗಣೇಶ್ ಕಾಂಬಿನೇಷನ್‌ನಲ್ಲಿ “ಚಮಕ್ ‘ ಮೂಡಿಬಂದಿತ್ತು. ಅದಾದ ನಂತರ ಅವರು “ಸಖತ್ ‘ಚಿತ್ರ ಶುರುಮಾಡಿದರು ಈಗ “ದಿ ಸ್ಟೋರಿ ಆಫ್ ರಾಯಗಢ ‘ ಚಿತ್ರಕ್ಕೆ ಕೈ ಹಾಕಿದ್ದಾರೆ.
ಇದು ಗಣೇಶ್ ಮತ್ತು ಸುನಿ ಇಬ್ಬರಿಗೂ ವಿಭಿನ್ನ ಸಿನಿಮಾ ಎನ್ನಬಹುದು. ಹಿಂದೆ ಇಬ್ಬರೂ ಕೂಡ ರೊಮ್ಯಾಂಟಿಕ್ ಹಾಗೂ ಕಾಮಿಡಿ ಸಿನಿಮಾಗಳನ್ನೇ ಹೆಚ್ಚಾಗಿ ಕೊಟ್ಟವರು. ಆ ಮಧ್ಯೆ ಇದೀಗ ಅವರು ಹೊಸ ಜಾನರ್ ಕಥೆ ಹಿಡಿದು ಬರುತ್ತಿದ್ದಾರೆ. “ದಿ ಸ್ಟೋರಿ ಆಫ್ ರಾಯಗಢ ‘ ಶೀರ್ಷಿಕೆ ಕೇಳಿದೊಡನೆ ಇದೊಂದು ಪಕ್ಕಾ ರಾ ಕಥೆ ಎನ್ನಬಹುದು. ಇದೊಂದು 1999ರಲ್ಲಿ ನಡೆದಂತಹ ನೈಜ ಘಟನೆ ಇಟ್ಟುಕೊಂಡು ಕಾಲ್ಪನಿಕವಾಗಿಯೇ ಕಥೆ ಹೆಣೆದು ಸಿನಿಮಾ ಮಾಡಲಾಗುತ್ತಿದೆ.
ಸದ್ಯಕ್ಕೆ ಒಂದಷ್ಟು ಬರಹಗಾರರ ತಂಡ ಕೆಲಸ ಮಾಡುತ್ತಿದೆ. ಗಣೇಶ್ ಇಲ್ಲಿ ಪಕ್ಕಾ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಯಾಕ್ ಹ್ಯೂಮರ್ ಶೇಡ್ ಇಲ್ಲಿರಲಿದೆ ಎಂಬುದು ನಿರ್ದೇಶಕರ ಮಾತು. ಶೀರ್ಷಿಕೆ ಹೇಳುವಂತೆ ಇದೊಂದು ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ಸಾಗಲಿದೆ ಸಂಭಾಷಣೆ ಕೂಡ ಅಲ್ಲಿನದ್ದೇ ಇರಲಿದೆ. ಗಣೇಶ್‌ಗೆ ಇದು ಹೊಸ ರೀತಿಯ ಸಿನಿಮಾ ಆಗಲಿದೆ. ಅಂದಹಾಗೆ, ಲಾಕ್‌ಡೌನ್ ಮೊದಲೇ ಲೊಕೇಷನ್ ನೋಡಲಾಗಿತ್ತು. ಈಗ ಎಲ್ಲವೂ ಸರಿಯಾದ ಮೇಲೆ ಇನ್ನೊಂದು ಸಲ ಲೊಕೇಷನ್ ನೋಡಿ ಆಮೇಲೆ ಚಿತ್ರೀಕರಣಕ್ಕೆ ಅಣಿಯಾಗಲಿದ್ದೇವೆ.
ಗಣೇಶ್ ಇಲ್ಲಿ ತಮ್ಮ ಮ್ಯಾನರಿಸಂ ಬದಲಿಸಿಕೊಳ್ಳುತ್ತಿದ್ದಾರೆ. ಗಡ್ಡ ಬಿಟ್ಟು, ವಿಶಿಷ್ಠ ವಾಕಿಂಗ್ ಶೈಲಿ ಇರಲಿದೆ. ಹಾಗಂತ ಈ ಚಿತ್ರ ಈಗಲೇ ಶುರುವಾಗುವುದಿಲ್ಲ. ಇದಕ್ಕಿನ್ನೂ ಬಹಳಷ್ಟು ಸಮಯವಿದೆ. ರಾಯಗಢ ಎಂಬ ಕಾಲ್ಪನಿಕ ಊರಲ್ಲಿ ಇಡೀ ಸಿನಿಮಾ ನಡೆಯಲಿದೆ. ಸದ್ಯಕ್ಕೆ “ಸಖತ್ ‘ 15 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ನಂತರ “ಅವತಾರ ಪುರುಷ ‘ ಚಿತ್ರದ ಹಾಡು, ಫೈಟ್ಸ್ ಬಾಕಿ ಇದೆ ನಂತರದ ದಿನಗಳಲ್ಲಿ ಈ ಚಿತ್ರಕ್ಕೆ ಕೈ ಹಾಕುವುದಾಗಿ ಹೇಳುತ್ತಾರೆ ಅವರು.