Advertisement

ಗಣಪನ ರೂಪ ತಳೆದ ಎಲೆಕ್ಟ್ರಾನಿಕ್‌ ಬಿಡಿಭಾಗ

10:42 PM Aug 28, 2019 | mahesh |

ಪುತ್ತೂರು: ಉಪಯೋಗವಿಲ್ಲ ಎಂದು ಮೂಲೆಗೆ ಎಸೆದ ಎಲೆಕ್ಟ್ರಾನಿಕ್‌ ಬಿಡಿಭಾಗಗಳಲ್ಲೇ ಮಿನಿ ಗಣಪತಿ ವಿಗ್ರಹ ಸಿದ್ಧವಾಗಿ ನಿಂತಿದೆ.

Advertisement

15 ವರ್ಷಗಳಿಂದ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿರುವ ನಗರದ ಮೊಟ್ಟೆತ್ತಡ್ಕ ನಿವಾಸಿ ಚಿತ್ರಕಲಾ ಶಿಕ್ಷಕ ಪ್ರವೀಣ್‌ ವರ್ಣಕುಟೀರ ಅವರ ಕಲ್ಪನೆಯಲ್ಲಿ ಈ ಬಾರಿಯ ಚೌತಿ ಸಂಭ್ರಮಕ್ಕೆ ಮೂಡಿ ಬಂದ ವಿಶೇಷ ಗಣಪತಿ ವಿಗ್ರಹವಿದು.

ಎಲೆಕ್ಟ್ರಾನಿಕ್‌ ಬಿಡಿಭಾಗಗಳಲ್ಲಿ 12 ಗಣಪತಿ
ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ಮೂಲಕ ಈ ಗಣಪತಿ ವಿಗ್ರಹ ರಚಿಸಲಾಗಿದೆ. ಎಲೆಕ್ಟ್ರಾನಿಕ್‌ ಬಿಡಿ ಭಾಗಗಳಾದ ಐಸಿ, ಕಂಡೆನ್ಸರ್‌, ಕೆಪ್ಯಾಸಿಟರ್‌, ಕೂಲಿಂಗ್‌, ಅಲ್ಯುಮಿನಿಯಂ ಪ್ಲೇಟ್ ಬಳಸಿ ತಯಾರಿಸಲಾಗಿದೆ. ಎಲೆಕ್ಟ್ರಾನಿಕ್‌ ಬಿಡಿಭಾಗ ಉಪ ಯೋಗಿಸಿ 1ರಿಂದ 1.5 ಇಂಚಿನ 12 ಗಣಪತಿ ವಿಗ್ರಹ ರಚಿಸಲಾಗಿದೆ.

ಹದಿನೈದು ವರ್ಷಗಳಿಂದ ಜಾಗೃತಿ
ಪ್ರತೀ ವರ್ಷ ಗಣೇಶ ಚತುರ್ಥಿಯಂದು ಪರಿಸರ ಸ್ನೇಹಿ ಗಣಪತಿ ವಿಗ್ರಹ ತಯಾರಿಸುವ ಪುತ್ತೂರಿನ ಪ್ರವೀಣ್‌ ಅವರು ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ನಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಜತೆಗೆ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ಮೂಲಕ ಆಸಕ್ತರಿಗೆ ಕಲೆಯ ತರಬೇತಿ ನೀಡುತ್ತಿದ್ದಾರೆ. ಪರಿಸರ ಸ್ನೇಹಿ ನೆಲೆಯಲ್ಲಿ ಪ್ರತಿ ಬಾರಿ ವಿಶೇಷ ರೀತಿಯಲ್ಲಿ ಗಣಪತಿ ವಿಗ್ರಹ ತಯಾರಿಸುವ ಇವರು, ಈ ಬಾರಿ ಹಾಳಾದ ಎಲೆಕ್ಟ್ರಾನಿಕ್‌ ಬಿಡಿಭಾಗಗಳನ್ನು ಬಳಸಿ ಮಿನಿ ಗಣಪತಿ ತಯಾರಿ ಮಾಡಲು ಮುಂದಾಗಿದ್ದರು. ಕಡಿಮೆ ಖರ್ಚಿನಲ್ಲಿ, ಪರಿಸರಕ್ಕೆ ಹಾನಿ ಇಲ್ಲದೆ, ಉಪಯೋಗ ರಹಿತ ವಸ್ತುವಿಗೆ ರೂಪ ನೀಡಿ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.

ಪರಿಸರಕ್ಕೆ ಧಕ್ಕೆ ಆಗದಂತೆ ಗಣಪತಿ ವಿಗ್ರಹ ರಚಿಸಬೇಕು ಎಂಬ ಕನಸು ಮೊಳಕೆಯೊಡೆದದ್ದು 9ನೇ ತರಗತಿಯಲ್ಲಿ. ತರಗತಿಯೊಳಗೆ ಕುಳಿತು ರಚಿಸಿದ ಅಕ್ಕಿ ಕಾಳಿನಲ್ಲಿ ಕೆತ್ತನೆ ಮಾಡಿದ ಗಣಪನೇ ಇವರ ಆಸಕ್ತಿಗೆ ಮುನ್ನುಡಿ ಬರೆಯಿತು. ಸಾಸಿವೆ ಕಾಳಿನ ರೇಖಾಚಿತ್ರ ಗಣಪ, ಬಿದಿರು ಗಣಪ, ಫ್ರೇಮ್‌, ಒಯಸಿಸ್‌ ಬ್ರಿಕ್ಸ್‌, 1 ಪೆನ್ಸಿಲ್ ಮೊನೆಯ ಗಣಪ, ಮಣ್ಣಿನಿಂದ ಮಾಡಿದ ಗಣಪ ಹಾಗೂ ನೂಲಿನಲ್ಲಿ ಗಣಪ, ಪೆನ್ನಿನ ರೀಫಿಲ್, ಐಸ್‌ ಕ್ಯಾಂಡ್‌ ಕಡ್ಡಿ, ಬೆಂಕಿ ಕಡ್ಡಿಯಲ್ಲಿ ಹೀಗೆ ನಾನಾ ಬಗೆಯ ಗಣಪ ಪ್ರಸಿದ್ಧಿ ಪಡೆದಿವೆ. ಆ ಸಾಲಿಗೆ ಎಲೆಕ್ಟ್ರಾನಿಕ್‌ ಬಿಡಿಭಾಗಗಳಲ್ಲಿ ತಯಾರಾದ ಗಣಪತಿ ಹೊಸ ಸೇರ್ಪಡೆ. ಕಲಾ ಪ್ರೀತಿ ಪಕ್ವಗೊಳ್ಳಲು ಶಾಲಾ ದಿನಗಳಲ್ಲಿ ಕಲಾ ಶಿಕ್ಷಕರಾಗಿದ್ದ ಎಂ.ಎಸ್‌. ಪುರುಷೋತ್ತಮ, ಅಲ್ಪಾಡಿ ರಾಮ ನಾಯ್ಕ ಮೊದ ಲಾದವರ ಪ್ರೋತ್ಸಾಹ ಕಾರಣ ಎಂದು ಸ್ಮರಿಸುತ್ತಾರೆ ಪ್ರವೀಣ್‌ ವರ್ಣಕುಟೀರ.

ಜಾಗೃತಿ ಉದ್ದೇಶಸೆ. 1ರಂದು ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ನನ್ನ ಗಣಪ ನೋಡ ಬನ್ನಿ ಬಹು ಆಯಾಮದ ಏಕ ವ್ಯಕ್ತಿ ಕರಕುಶಲ ಪ್ರದರ್ಶನಗೊಳ್ಳಲಿದೆ. ಪರಿಸರಸ್ನೇಹಿ ವಿಗ್ರಹ ತಯಾರಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿಯಂದು ಇಂತಹ ಹೊಸ ಪ್ರಯತ್ನದಲ್ಲಿ ನಿರತನಾಗುತ್ತಿದ್ದೇನೆ. ಈ ಬಾರಿ ಎಲೆಕ್ಟ್ರಾನಿಕ್‌ ಬಿಡಿಭಾಗದಲ್ಲೇ ಗಣಪತಿ ವಿಗ್ರಹ ರಚಿಸಿದ್ದೇನೆ.
– ಪ್ರವೀಣ್‌ ವರ್ಣಕುಟೀರ ಪರಿಸರ ಪ್ರೇಮಿ ಕಲಾವಿದ

ಬಹುಮುಖ ಪ್ರತಿಭೆಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಗಣಪನ ಸೃಷ್ಟಿಯಲ್ಲಿ ಪ್ರವೀಣ್‌ ಅವರು ಸಿದ್ಧಹಸ್ತರು. 15 ವರ್ಷಗಳಿಂದ ನಿರಂತರವಾಗಿ ಪ್ರಕೃತಿಪ್ರಿಯ ಗಣಪನ ತಯಾರಿಯಲ್ಲಿ ತೊಡಗಿಸಿಕೊಂಡಿರುವ ಪ್ರವೀಣ್‌ ಬಹುಮುಖ ಪ್ರತಿಭೆ. ಅವರು ತಯಾರಿಸಿರುವ ಗಣಪತಿ ವಿಗ್ರಹಗಳೇ ಅದಕ್ಕೆ ಸಾಕ್ಷಿ..
– ಅಲ್ಬಾಡಿ ರಾಮ ನಾಯ್ಕ ಉಪಾಧ್ಯಕ್ಷ, ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ
Advertisement

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next