ಬೆಂಗಳೂರು: ಗೌರಿ-ಗಣೇಶ ಹಬ್ಬ ಸೇರಿದಂತೆ ಸಾಲು ಸಾಲು ರಜೆಗಳು ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಿವಿಧೆಡೆ ತೆರಳಲು ಸಜ್ಜಾಗಿರುವ ಪ್ರಯಾಣಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಆಗಸ್ಟ್ 25ರಂದು ಗಣೇಶ ಚತುರ್ಥಿ ಇದ್ದು, 24ರಂದು ಸಂಜೆಯೇ ಹಬ್ಬಕ್ಕೆ ಜನ ಊರುಗಳಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರೈಲು, ಸರ್ಕಾರಿ ಬಸ್‌ಗಳಂತೂ ಈಗಾಗಲೇ ಭರ್ತಿ ಆಗಿವೆ. ಖಾಸಗಿ ಬಸ್‌ಗಳು ಲಭ್ಯ ಇವೆ. ಆದರೆ, ಪ್ರಯಾಣ ದರ ಎರಡರಿಂದ ಮೂರುಪಟ್ಟು ಹೆಚ್ಚಾಗಿದೆ. ಇದರಿಂದ ಈ ಬಾರಿಯ ಗಣೇಶನ ಹಬ್ಬ ಭಕ್ತರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ.
ಹೆಚ್ಚುವರಿ ಬೋಗಿ: ಬಹುತೇಕ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗಿದೆ. ಕೆಎಸ್‌ಆರ್‌ಟಿಸಿಯಿಂದ 800-1000 ಹೆಚ್ಚುವರಿ ಬಸ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಹಬ್ಬ ಈ ಬಾರಿ ಶುಕ್ರವಾರ ಇದ್ದು, ಶನಿವಾರ ಮತ್ತು ಭಾನುವಾರ ವಾರಾಂತ್ಯದ ರಜೆ. ಅಂದರೆ ಒಟ್ಟಿಗೆ ಮೂರು ದಿನಗಳು ರಜೆ ಇದೆ. ಆದ್ದರಿಂದ ವಾರದ ಹಿಂದೆಯೇ ಎಲ್ಲ ಸೀಟುಗಳು ಈಗಾಗಲೇ ಬುಕಿಂಗ್ ಆಗಿವೆ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಖಾಸಗಿ ಟ್ರಾವೆಲ್ ಏಜೆನ್ಸಿಗಳು ಬೇಕಾಬಿಟ್ಟಿ ದರ ನಿಗದಿಪಡಿಸಿವೆ.
ಸಾಮಾನ್ಯವಾಗಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಸ್ ಟಿಕೆಟ್ ಒಂದರ ದರ ಕನಿಷ್ಠ 600ರಿಂದ ಗರಿಷ್ಠ 1 ಸಾವಿರ ರೂ. ಇರುತ್ತದೆ. ಆದರೆ, ಈಗ ಖಾಸಗಿ ಬಸ್ ಸಂಸ್ತೆಗಳು ಒಂದು ಟಿಕೆಟ್‌ಗೆ 1,200 ರೂ.ನಿಂದ 3000 ರೂ.ವರೆಗೆ ದರ ನಿಗದಿ ಮಾಡಿವೆ. ಅದೇ ರೀತಿ, ಬೆಂಗಳೂರಿನಿಂದ ವಿಜಯಪುರಕ್ಕೆ 1,100ರಿಂದ 1,800 ರೂ., ಮುಂಬೈ 1,200ರಿಂದ 2,500 ರೂ., ಚೆನ್ನೈ 800ರಿಂದ 1,500 ರೂ.ವರೆಗೂ ಪ್ರಯಾಣ ದರ ನಿಗದಿಪಡಿಸಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಪ್ರಯಾಣ ದರ ತುಸು ಹೆಚ್ಚಿದೆ. ಇದಕ್ಕೆ ಪ್ರಮುಖವಾಗಿ ತಮಿಳುನಾಡು, ಕೇರಳ, ಗೋವಾ ರಾಜ್ಯಗಳ ವಾಹನ ಪ್ರವೇಶ ತೆರಿಗೆ (ಎಂಟ್ರಿ ಟ್ಯಾಕ್ಸ್) ಏರಿಕೆಯಾಗಿದೆ. ನಗರವೂ ಸೇರಿದಂತೆ ದೇಶಾದ್ಯಂತ ಟೋಲ್ ದರ ಹೆಚ್ಚಳವಾಗಿದೆ. ಟೋಲ್‌ಗೂ ಹಬ್ಬಕ್ಕೂ ಸಂಬಂಧ ಇಲ್ಲದಿರಬಹುದು. ಆದರೆ, ಇವು ಹಬ್ಬಗಳ ಆಸುಪಾಸಿನಲ್ಲೇ ಪರಿಷ್ಕರಣೆಗೊಂಡಿದ್ದರಿಂದ ಸಹಜವಾಗಿಯೇ ಇದರ ಬಿಸಿ ಪ್ರಯಾಣಿಕರಿಗೆ ತಟ್ಟುವ ಸಾಧ್ಯತೆ ಇದೆ ಎಂದು ಖಾಸಗಿ ವಾಹನಗಳ ಮಾಲಿಕರ ಸಂಘದ ಜಂಟಿ ಕಾರ್ಯದರ್ಶಿ ಕೆ.ಎನ್. ರಮೇಶ್ ತಿಳಿಸುತ್ತಾರೆ.
ಇನ್ನು ಪ್ರಯಾಣಿಕರ ಸಂಖ್ಯೆ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ವಾರದ ಹಿಂದಷ್ಟೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸಾಲು ರಜೆ ಬಂದವು. ಈಗ ಮತ್ತೆ ಜನ ಊರಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆ ಸ್ವಾತಂತ್ರೊತ್ಸವದ ವೇಳೆ ಸಾಲು ರಜೆಯಲ್ಲಿ ಖಾಸಗಿ ಟ್ರಾವೆಲ್ ಏಜೆನ್ಸಿಗಳಿಗೆ ನಷ್ಟ ಉಂಟಾಗಿದೆ. ಹೋಗುವಾಗ ಬಸ್‌ಗಳು ಭರ್ತಿಯಾಗಿದ್ದವು. ಆದರೆ, ವಾಪಸ್ ಬರುವಾಗ ಕೆಲವರು ಆಗಸ್ಟ್ 13ರ ರಾತ್ರಿ ಹಾಗೂ ಕೆಲವರು ಆಗಸ್ಟ್ 15ರ ರಾತ್ರಿ ಹಿಂತಿರುಗಿದರು. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬರಲಿಲ್ಲ. ಇದೆಲ್ಲವೂ ಹೆಚ್ಚುವರಿ ಖಾಸಗಿ ಬಸ್‌ಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಒಂದು ಸಾವಿರ ಹೆಚ್ಚುವರಿ ಬಸ್
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯು ಆಗಸ್ಟ್ 23ರಿಂದ 26ರವರೆಗೆ 800ರಿಂದ 1000 ಹೆಚ್ಚುವರಿ ಬಸ್‌ಗಳ ಸೇವೆ ಕಲ್ಪಿಸಿದೆ. ಈ ಬಸ್‌ಗಳು ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಕಾರ್ಯಾಚರಣೆ ಮಾಡಲಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ಪಾವಗಡ, ಹೊಸದುರ್ಗ ಮುಂತಾದ ಸ್ಥಳಗಳಿಗೆ ಶೇಷ ಕಾರ್ಯಾಚರಣೆ ಮಾಡಲಿವೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆಗೆ ಕಾರ್ಯಾಚರಣೆ ಮಾಡಲಿವೆ. ತಮಿಳುನಾಡು ಮತ್ತು ಆಂಧ್ರಪ್ರದೇಶ ಕಡೆಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ವಿಶೇಷ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ. ಇ-ಟಿಕೇಟ್ ಬುಕಿಂಗ್‌ಗೆ www.ksrtc.in ಸಂಪರ್ಕಿಸಬಹುದು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದರೆ ಶೇ. 5ರಷ್ಟು ಮತ್ತು ಹೋಗುವ-ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದರೆ, ಬರುವ ಪ್ರಯಾಣ ದರದಲ್ಲಿ ಶೇ. 10ರಷ್ಟು ರಿಯಾಯ್ತಿ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.