Advertisement

ಕರಾವಳಿಯಾದ್ಯಂತ ಇಂದು ಭಕ್ತಿ ಸಡಗರದ ಗಣೇಶ ಚತುರ್ಥಿ

01:40 AM Aug 22, 2020 | mahesh |

ಮಂಗಳೂರು: ಕರಾವಳಿಯಾದ್ಯಂತ ಶನಿವಾರ ಭಕ್ತಿ ಸಡಗರದೊಂದಿಗೆ ಶ್ರೀ ಗಣೇಶ ಚತುರ್ಥಿ ಆಚರಣೆಗೆ ಸರ್ವ ಸಿದ್ಧತೆ ನಡೆದಿದೆ. ಕೊರೊನಾನಿಂದಾಗಿ ರಾಜ್ಯ ಸರಕಾರ ಬಿಗು ನಿಲುವನ್ನು ಸಡಿಲಿಸಿ ಕೆಲವು ನಿರ್ಬಂಧಗಳೊಂದಿಗೆ ಆಚರಣೆಗೆ ಅವಕಾಶ ನೀಡಿರುವುದರಿಂದ ಜನರಲ್ಲಿ ಲವಲವಿಕೆ ಮೂಡಿದ್ದು ಸರಳವಾಗಿ ಗಣೇಶೋತ್ಸವ ಆಚರಣೆ ನಡೆಯಲಿದೆ. ಆದರೆ ಕೊನೆಯ ಕ್ಷಣದ ಅನುಮತಿಯಿಂದಾಗಿ ಈ ವರ್ಷ ಕರಾವಳಿಯಲ್ಲಿ ಗಣೇಶೋತ್ಸವಗಳ ಸಂಖ್ಯೆ ಕಡಿಮೆ ಆಗಿದೆ.

Advertisement

ಉಭಯ ಜಿಲ್ಲೆಗಳ ಬಹುತೇಕ ಗಣೇಶೋತ್ಸವಗಳು ಸಭಾಭವನ, ಭಜನಾ ಮಂದಿರ, ಶಾಲಾ ಕಾಲೇಜುಗಳ ಸಭಾಂಗಣದಲ್ಲಿ ನಡೆಯಲಿವೆ. ಜತೆಗೆ, ಬಹುತೇಕ ಮನೆಗಳಲ್ಲಿ ಕುಟುಂಬ ಸದಸ್ಯರ ಜತೆಗೆ ಚೌತಿಯನ್ನು ಆಚರಿಸಲಾಗುತ್ತದೆ. ಗಣಪತಿ ದೇವಾಲಯ ಸೇರಿದಂತೆ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ವಿಶೇಷ ಪೂಜೆಯ ಮೂಲಕ ಗಣೇಶೋತ್ಸವ ಆಚರಣೆ ಸರಳವಾಗಿ ನೆರವೇರಲಿದೆ.

ಉಭಯ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ 5 ದಿನಗಳವರೆಗೆ ಗಣೇಶೋತ್ಸವ ಸಂಭ್ರಮ ನಡೆಯುತ್ತಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಒಂದೇ ದಿನಕ್ಕೆ ಸೀಮಿತಗೊಂಡಿದೆ. ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿ ಷ್ಠಾಪಿಸುವವರು ಗಣೇಶ ಮೂರ್ತಿಯನ್ನು ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ತಮ್ಮ ಮನೆಯೊಳಗೆ ಎರಡು ಅಡಿ ಮೀರದಂತೆ ಪ್ರತಿಷ್ಠಾಪಿಸುವಂತೆ ಈಗಾಗಲೇ ಜಿಲ್ಲಾಡಳಿತ ಸೂಚಿಸಿದೆ. ಗಣಪತಿ ಪ್ರತಿಷ್ಠಾಪನೆ ಮಾಡಿದ ಸ್ಥಳಗಳಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸಬೇಕಿದೆ. ಒಮ್ಮೆಲೆ 20ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾಧಿಗಳಿಗೆ ಅನುವು ಮಾಡಬೇಕಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ/ಸಂಗೀತ/ನೃತ್ಯ ಇನ್ನಿತರ ಯಾವುದೇ ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ಇಲ್ಲ.

ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸಬೇಕಿದೆ. ಸರಕಾರಿ/ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಅತೀ ಸಮೀಪವಾಗುವ ಮಾರ್ಗಗಳನ್ನು ಬಳಸಿಕೊಂಡು ಮೊಬೈಲ್‌ ಟ್ಯಾಂಕ್‌ಗಳಲ್ಲಿ ಅಥವಾ ಕೃತಕ ವಿಸರ್ಜನ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬೇಕಿದೆ.

ಆರ್ಥಿಕ ಚಟುವಟಿಕೆ ಚೇತರಿಕೆ
ಮಂಗಳೂರು/ಉಡುಪಿ: ಕೋವಿಡ್ ಸಂಕಷ್ಟದ ಕಾರಣ ದಿಂದ ಈ ಬಾರಿ ನಾಗರ ಪಂಚಮಿ, ಶ್ರೀ ಕೃಷ್ಣಾಷ್ಟಮಿಯ ಸಾರ್ವಜನಿಕ ಆಚರಣೆ ಸಾಧ್ಯವಾಗಿರಲಿಲ್ಲ. ಆದರೆ, ಕೆಲವು ನಿಯಮಾವಳಿ ಮೂಲಕ ಚೌತಿ ಆಚರಣೆಗೆ ಸರಕಾರ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಕರಾವಳಿಯ ಆರ್ಥಿಕ ಚಟುವಟಿಕೆ ಕೊಂಚ ಚೇತರಿಕೆ ಕಂಡಿರುವುದು ಆಶಾದಾಯಕ ಬೆಳವಣಿಗೆ.

Advertisement

ಶುಕ್ರವಾರ ಮಂಗಳೂರು-ಉಡುಪಿ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಯಿತು. ಅದರಲ್ಲಿಯೂ ಹೂವಿನ ವ್ಯಾಪಾರ ಭರ್ಜರಿಯಾಗಿತ್ತು. ಮಂಗಳೂರಿನಲ್ಲಿ ಹಳದಿ ಸೇವಂತಿಗೆ ಗುಚ್ಚಿಗೆ 1500 ರೂ., ಬಿಳಿ ಸೇವಂತಿಗೆ 1500, ಜಾಜಿ 400, ಜೀನಿಯಾ 1500, ಕಾಕಡ 700, ಮಲ್ಲಿಗೆ ಭಟ್ಕಳ 240, ಮಲ್ಲಿಗೆ ಉಡುಪಿ 600, ಗೊಂಡೆ 400ರ ದರದಲ್ಲಿತ್ತು.

ಅಂಗಡಿ, ಮಾರುಕಟ್ಟೆಯಲ್ಲೂ ಕಬ್ಬು ವ್ಯಾಪಾರವೂ ಜೋರಾಗಿತ್ತು. ಮೂಲಗಳ ಪ್ರಕಾರ, ನಗರದಲ್ಲಿ ಸುಮಾರು 150ರಿಂದ 200 ಟನ್‌ನಷ್ಟು ಕಬ್ಬು ಮಾರಾಟವಾಗಿದೆ. ಉಳಿದಂತೆ ಸ್ಥಳೀಯ ಹಾಗೂ ಹೊರ ಜಿಲ್ಲೆಯ ತರಕಾರಿ ಮಾರಾಟ ಕೂಡ ಭರ್ಜರಿಯಾಗಿತ್ತು.

ಚಿಗುರೊಡೆದ ವ್ಯಾಪಾರ
ಉಡುಪಿ ಜಿಲ್ಲೆಯಲ್ಲೂ ವ್ಯಾಪಾರ ಮತ್ತೆ ಚಿಗುರೊಡೆಯಲು ಆರಂಭಿಸಿದೆ. ಜಿಲ್ಲೆಯ ವಿವಿಧೆಡೆ ಹೂ, ಕಬ್ಬು, ತರಕಾರಿ, ಹಣ್ಣು-ಹಂಪಲುಗಳ ವ್ಯಾಪಾರ ಜೋರಾಗಿತ್ತು. ಕಬ್ಬು ಪ್ರತಿಯೊಂದಕ್ಕೆ 50 ರಿಂದ 70 ರೂ.ನಂತೆ ಮಾರಾಟವಾಗಿದೆ. ಚೌತಿಯ ಮೂಡೆ ಮಾಡುವ ಕೊಟ್ಟೆಯು 100ಗಳಿಗೆ 6 ರಿಂದ 7 ಮಾರಾಟವಾಯಿತು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿಯ ವ್ಯಾಪಾರ ವಿರಳವಾಗಿತ್ತು.

ನೆಮ್ಮದಿಯೇ ಎಲ್ಲರ ಅಭಿಲಾಷೆ
ಬದುಕಿನಲ್ಲಿ ಅನೇಕ ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ. ಅವುಗಳನ್ನು ನಿಭಾಯಿಸುವ ತಂತ್ರವೇ ಜೀವನಾನುಭವ. ಧಾರ್ಮಿಕ ಚಿಂತನೆ ಹಾಗೂ ಲೌಕಿಕ ಶಿಕ್ಷಣಗಳು ಈ ಯಶಸ್ವಿ ಜೀವನಕ್ಕೆ ಮಾರ್ಗ ದರ್ಶಕ. ಹುಟ್ಟು ಆಕಸ್ಮಿಕ ಅಂತ್ಯ ನಿಶ್ಚಿತ. ವ್ಯಕ್ತಿ ಜೀವನ ನೆಮ್ಮದಿಯಾಗಿರಬೇಕು ಅನ್ನುವುದೇ ಎಲ್ಲರ ಅಭಿಲಾಷೆ. ಕೋವಿಡ್ ಎಲ್ಲಿ ಇರುತ್ತದೆಯೋ, ಅವಿತುಕೊಂಡಿರುತ್ತದೆಯೋ, ಪ್ರತ್ಯಕ್ಷವಾಗುತ್ತದೆಯೋ ತಿಳಿಯದು. ಆದರೆ ಈ ಗಂಡಾಂತರವನ್ನು ದಾಟಲೇಬೇಕು. ಇದೀಗ ಕೊರೊನಾದಿಂದ ಹೊರಬಂದವರ ಸಂಖ್ಯೆ ಹೆಚ್ಚುತ್ತಿದೆ. ಕೆಲಕಾಲದ ಎಚ್ಚರಿಕೆ ವಹಿಸಿದರೆ ಕೊರೊನಾ ಮಾಯಾವಿಯನ್ನು ಗೆಲ್ಲಬಹುದು. ವಿಘ್ನವಿನಾಶಕನಾದ ಶ್ರೀ ಮಹಾಗಣಪತಿಯನ್ನು ಪ್ರಾರ್ಥಿಸಿ ಮುಂದಿನ ದಿನಗಳು ನೆಮ್ಮದಿಯಿಂದ ಸಾಗುವಂತಾಗಲಿ ಎಂದು ಹಾರೈಸುತ್ತೇನೆ.
-ಡಾ| ಡಿ. ವೀರೇಂದ್ರ ಹೆಗ್ಗಡೆ,  ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next