Advertisement

ಜಗ್ಗೇಶ್ ಮನೆಯ ಗಣಪನಿಗಿದೆ 34 ವರ್ಷಗಳ ಇತಿಹಾಸ|ಈ ವಿನಾಯಕನ ವೈಶಿಷ್ಟ್ಯ ಏನು ಗೊತ್ತಾ ?  

06:57 PM Sep 10, 2021 | Team Udayavani |

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಜಗ್ಗೇಶ್ ಅವರ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.

Advertisement

ಜಗ್ಗೇಶ್ ಅವರ ಮನೆಯಲ್ಲಿರುವ ಗಣೇಶನ ಮೂರ್ತಿಗೆ ತನ್ನದೆಯಾದ ಮಹತ್ವ ಇದೆ. ಪ್ರತಿವರ್ಷ ಜಗ್ಗೇಶ್ ಅದೇ ಗಣೇಶನನ್ನು ಕೂರಿಸಿ ಪೂಜೆ ಮಾಡುತ್ತಾರೆ. ಆದರೆ, ಆ ಗಣೇಶನನ್ನು ವಿಸರ್ಜನೆ ಮಾಡುವುದಿಲ್ಲವಂತೆ. ಜಗ್ಗೇಶ್ ಮನೆಯಲ್ಲಿರುವ ಹಳೆಯ ಗಣೇಶನ ಮಹತ್ವನನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾವು ಕಷ್ಟದಲ್ಲಿದ್ದ ಸಮಯದಲ್ಲಿ ಕೊಂಡುಕೊಂಡ ಗಣೇಶನನ್ನು ಇಂದಿಗೂ ಆರಾಧನೆ ಮಾಡುವ ಬಗ್ಗೆ ಜಗ್ಗೇಶ್ ಅದರ ಮಹತ್ವವನ್ನು ಹೇಳಿದ್ದಾರೆ.

“ಈ ಗಣಪನಿಗೆ 34 ವರ್ಷ. 1987 ರಲ್ಲಿ ಬಿಡಿಗಾಸಿಲ್ಲದ ದಿನಗಳು. ರವಿಚಂದ್ರನ್ ರವರ ರಣಧೀರ ಚಿತ್ರೀಕರಣ ಸಮಯ. ಅವರ ಸಂಸ್ಥೆಯಲ್ಲಿ 500ರೂ. ಸಂಬಳ ಪಡೆದು ನಾನು ಪರಿಮಳ ಮಲ್ಲೇಶ್ವರ 10ನೆ ಕ್ರಾಸ್ ಜೀರಿಗೆ ವ್ಯಾಯಾಮ ಶಾಲೆ ಬಳಿ 20ರೂ. ಈ ಗಣಪನ ಕೊಂಡು ಮನೆಯಲ್ಲಿ ಇಟ್ಟು ಚಿತ್ರಿಕರಣಕ್ಕೆ 8ನೇ ಮೈಲಿ ಸ್ಟೋನ್ ಮೆಡೋ ಮನೆಗೆ ಓಡಿದೆ” ಎಂದು ಹೇಳಿದ್ದಾರೆ.

“ನನ್ನ ಗ್ರಹಚಾರಕ್ಕೆ ಅಂದು ಚಿತ್ರಿಕರಣ ರಾತ್ರಿ 2 ಘಂಟೆಗೆ ಮುಗಿಯಿತು. ಪಾಪ ಪರಿಮಳ ನನಗಾಗಿ ನಿದ್ರೆ ಮಾಡದೆ ಕಾಯುತ್ತಿದ್ದಳು. ಆಗ ಮನೆಗೆ ಬಂದು ಸ್ನಾನ ಮಾಡಿ ಗಣಪತಿ ವ್ರತ ಶುರುಮಾಡಿ ಬೆಳಗಿನ ಜಾವ 5ಕ್ಕೆ ಮುಗಿಸಿ ಗಣಪನಿಗೆ ಪ್ರಾರ್ಥಿಸಿದೆ. ಗಣಪ ಎಲ್ಲರೂ ಪೂಜೆ ನಂತರ ನಿನ್ನ ವಿಸರ್ಜನೆ ಮಾಡಿ ಬಿಡುತ್ತಾರೆ ನಾನು ಮಾತ್ರ ನಿನ್ನ ನನ್ನ ಕೊನೆ ಉಸಿರಿನವರೆಗೂ ಇಟ್ಟುಕೊಳ್ಳುವೆ ಎಂದು ಸಂಕಲ್ಪ ಮಾಡಿದೆ” ಎಂದು ಅಂದು ಮಾಡಿದ ಸಂಕಲ್ಪದ ಬಗ್ಗೆ ಬಹಿರಂಗ ಪಡಿಸಿದ್ದಾರೆ.

“ಅದರಂತೆ ಇಂದಿಗೂ ಈ ಗಣಪನೆ ನನ್ನ ಆತ್ಮೀಯ ಬಂಧು. ಇಂದು ಇವನಿಗೆ ಪೂಜೆ ಮಾಡುವಾಗ ನನ್ನ ಬೆಳವಣಿಗೆ ನೆನೆದು ಆಶ್ಚರ್ಯ ಅನುಭವ ಆಯಿತು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತು ಶ್ರದ್ಧಾವಾನ್ ಲಭತೆ ಜ್ಞಾನಂ. ಶ್ರದ್ಧೆ ಇದ್ದ ಜಾಗದಲ್ಲಿ ಸರ್ವ ಜ್ಞಾನ ನೀಡುವೆ ಎಂದು ಧನ್ಯೋಸ್ಮಿ. ಈ ಗಣಪನಿಗೆ ನನ್ನ ಹಿರಿಮಗ ಗುರುರಾಜನಿಗೆ ಒಂದೆ ವಯಸ್ಸು 34 ವರ್ಷಗಳು. ನಂಬಿಕೆಗೆ ಕೆಡುಕಿಲ್ಲಾ ಗೆದ್ದೆ ಗೆಲ್ಲುವ ಅದಕ್ಕೆ 4 ಬಾರಿ ತೀರ್ಪು ಎಂದರು ತಮಿಳು ಕವಿ ಭಾರತೀಯಾರ್. ಸರ್ವರಿಗು ಗಣಪನ ಹಬ್ಬದ ಶುಭಾಶಯ” ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

Advertisement

ಜಗ್ಗೇಶ್ ಅವರಿಗೆ ಅನೇಕರು ಕಾಮೆಂಟ್ ಮಾಡಿ 34 ವರ್ಷಗಳಾದರು ಏನು ಆಗಿಲ್ಲವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮಣ್ಣಿನ ಗಣಪತಿ ಇಷ್ಟು ವರ್ಷಗಳಾದರೂ ಏನು ಆಗಿಲ್ಲವಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗಕರಿಗೆ ಜಗ್ಗೇಶ್, “ತುಂಬಾ ಎಚ್ಚರದಿಂದ ಕಾಪಾಡಿರುವೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next