ಭಟ್ಕಳ: ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ಗಣೇಶ ಚತುರ್ಥಿ ಹಬ್ಬದ ನಿಮಿತ್ತ ಮುಂಜಾಗ್ರತಾ ಕ್ರಮವಾಗಿ ಸಹಾಯಕ ಆಯುಕ್ತ ಸಾಜಿದ್ ಅಹಮ್ಮದ್ ಮುಲ್ಲಾ ಅಧ್ಯಕ್ಷತೆಯಲ್ಲಿ ಶಾಂತಿ ಸಮಿತಿ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಶಾಂತಿ ಸಮಿತಿ ಸಭೆಯನ್ನು ಕೇವಲ ಜನತೆಗೆ ನಂಬಿಕೆ ಬರಲು ನಡೆಸುವುದು. ಇವುಗಳು ಅನಿವಾರ್ಯವಲ್ಲ. ಇಂತಹ ಸಾರ್ವಜನಿಕ ಕಾರ್ಯಕ್ರಮ ಮಾಡುವ ಪೂರ್ವದಲ್ಲಿ ಪರಿಶೀಲನೆ ಮಾಡಲು ಸಭೆ ಅವಶ್ಯಕ. ಜಿಲ್ಲಾಡಳಿತದಿಂದ ಸಾರ್ವಜನಿಕವಾಗಿ ಹಬ್ಬದ ಆಚರಣೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಭಟ್ಕಳದ ತಂಜೀಂ ಸಂಸ್ಥೆ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಹಬ್ಬಗಳ ಆಚರಣೆ ಖುಷಿ ನೀಡುತ್ತದೆ. ಅಂತಹ ಸಮಯದಲ್ಲಿ ಯಾರೇ ಸ್ವಲ್ಪ ಅಡಚಣೆ ಮಾಡಿದರೂ ಅಲ್ಲಿ ಪೊಲೀಸರು ಕಾರ್ಯಾಚರಣೆ ಬೇಡಾ. ಅಂತಹ ಸಂದರ್ಭದಲ್ಲಿ ಸಮಿತಿಯವರೇ ಅವರನ್ನು ನಿಯಂತ್ರಿಸುವುದು ಉತ್ತಮ. ಜನತೆ ಸಂಯಮ ಕಳೆದುಕೊಳ್ಳದೇ ಶಾಂತಿಯಿಂದ ಹಬ್ಬ ಆಚರಿಸುವಂತಾಗಲಿ ಎಂದೂ ಹಾರೈಸಿದರು.
ನಾಮಧಾರಿ ಸಮಾಜದ ಅಧ್ಯಕ್ಷ ಎಂ.ಆರ್. ನಾಯ್ಕ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಕೂಡಿ ಬಾಳಬೇಕಾಗಿದೆ. ಪ್ರತಿಯೊಂದು ಹಬ್ಬವನ್ನು ನಾವು ಶಾಂತಿ, ಸೌಹಾರ್ದತೆಯಿಂದ ಆಚರಿಸಿಕೊಂಡು ಬರಬೇಕು ಎಂದರು ಕರೆ ನೀಡಿದರು. ಡಿವೈಎಸ್‌ಪಿ ವೆಲೆಂಟೈನ್ ಡಿಸೋಜ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಮಂಟಪಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಗಣೇಶ ವಿಸರ್ಜನೆಯ ವೇಳೆಯಲ್ಲಿಯೂ ಮುಂಜಾಗ್ರತಾ ಕ್ರಮವನ್ನು ವಹಿಸಿ ಯಾವುದೇ ಅನಾಹುತಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಮಿತಿ ಸದಸ್ಯರು ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ತಂಜೀಂ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಮುಂತಾದವರು ಮಾತನಾಡಿದರು. ತಹಶೀಲ್ದಾರ್ ವಿ.ಎನ್. ಬಾಡಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಐ ಕೆ. ಎಲ್. ಗಣೇಶ ಸ್ವಾಗತಿಸಿದರು. ಗ್ರಾಮೀಣ ಠಾಣೆ ಸಿಬ್ಬಂದಿ ರಮೇಶ ನಿರೂಪಿಸಿದರು. ನಗರ ಸಬ್ ಇನ್‌ಸ್ಪೆಕ್ಟರ್ ಕುಸುಮಾಧರ ವಂದಿಸಿದರು.