Advertisement

Ganesh Chaturthi 2023: ಭಗವಾನ್‌ ಶ್ರೀಗಣೇಶ-ಒಂದು ತಾತ್ವಿಕ ಚಿಂತನೆ

04:40 PM Sep 18, 2023 | Team Udayavani |

ಇನ್ನು ಕೆಲವು ದಿನಗಳಲ್ಲೇ “ಗಣಪತಿ ಬಪ್ಪ ಮೋರಿಯಾ’ ಎಂಬ ಘೋಷಣೆ ಭಾರತದಾದ್ಯಂತ ಅಬಾಲ ವೃದ್ಧರಿಂದ ಝೇಂಕರಿಸುತ್ತಿರುತ್ತದೆ. ಭಾದ್ರಪದ ಮಾಸದ, ಶುಕ್ಲ ಪಕ್ಷದ ಚತುರ್ಥಿಯಂದು ಸೆ.19, 2023ರಂದು ಶ್ರೀಗಣೇಶ ಚತುರ್ಥಿಯನ್ನು ನಾವೆಲ್ಲ ಭಕ್ತಿ-ಶ್ರದ್ಧೆಗಳಿಂದ ಆಚರಿಸುತ್ತೇವೆ. ಭಕ್ತರು ಅವನನ್ನು ವಿಘ್ನೇಶ, ವಿದ್ಯಾಧಿಪತಿ, ಗಣೇಶ, ಲಂಬೋದರ, ಹೇರಂಬ,
ಗಣೇಶ, ಮುಂತಾದ ಹೆಸರುಗಳಿಂದ ಭಕ್ತಿ-ಶ್ರದ್ಧೆಗಳಿಂದ ಅರ್ಚಿಸುತ್ತಾರೆ.

Advertisement

ಆದರೆ ಕೆಲವರು ಗಣೇಶನ ರೂಪವನ್ನು ಅಪಹಾಸ್ಯ ಮಾಡುತ್ತಾರೆ. ಆನೆ ಮುಖ, ದೊಡ್ಡ ಹೊಟ್ಟೆ, ಇಲಿಯಂತಹ ಸಣ್ಣವಾಹನವನ್ನು ಹೊಂದಿಡುವವನು, ಹೊಟ್ಟೆಬಾಕ, ಹೀಗೆ ಗಣೇಶನ ಕುರಿತು ಅಪಹಾಸ್ಯ ಮಾಡುವುದೂ ಉಂಟು. ಇಂಥವರೆಲ್ಲ ನಿಮ್ಮ ದೇವರುಗಳು ಎಂದು ಹಿಂದೂ ದೇವ-ದೇವಿಯರನ್ನು ಟೀಕಿಸುತ್ತಿರುತ್ತಾರೆ. ಆದರೆ ಗಣೇಶನ ಮೂರ್ತಿಯ ಸ್ವರೂಪದ ಹಿಂದೆ ಇರುವ ಗಹನವಾದ ತತ್ತ್ವವನ್ನು ತಿಳಿದ ಜ್ಞಾನಿಗಳು ಹೀಗೆ ಹೇಳುವುದಿಲ್ಲ. ಅವರ ಟೀಕೆಗಳಿಗೆ ಅಜ್ಞಾನವೇ
ಮುಖ್ಯ ಕಾರಣ.

ದೊಡ್ಡ ತಲೆ – ನಾವು ಭಗವಾನ್‌ ಶ್ರೀಗಣೇಶನ ಪವಿತ್ರ ಮೂರ್ತಿಯನ್ನು ನೋಡಿದಾಗ, ಶ್ರೀಗಣೇಶನ ತಲೆ ದೊಡ್ಡದು ಎಂದು ನಮಗೆ ಅನ್ನಿಸುತ್ತದೆ. ದೊಡ್ಡ ತಲೆಯು, ನಾವು ಉನ್ನತವಾಗಿ ಆಲೋಚಿಸಬೇಕು. ಉತ್ಕೃಷ್ಟವಾದ ಚಿಂತನೆಗಳನ್ನು ಹೊಂದಿರಬೇಕು. ಇದೇ ಯಶಸ್ಸಿನ ರಹಸ್ಯ ಎಂದು ನಮಗೆ ಸೂಚಿಸುತ್ತದೆ.

ಅಗಲವಾದ ಕಿವಿಗಳು – ನಾಯಕನಾಗ ಬೇಕಾದರೆ, ಒಳ್ಳೆಯ ವಾಗ್ಮಿಯಾಗಬೇಕಾದರೆ ವಿಚಾರ ಗಳನ್ನು ಹೆಚ್ಚು ಹೆಚ್ಚು ಕೇಳಬೇಕು ಎಂಬ ಸಂಗತಿ ಸರ್ವವಿದಿತ. ಈ ಅಂಶವನ್ನು ಗಣೇಶನ ಅಗಲವಾದ, ದೊಡ್ಡ ಕಿವಿಗಳು ಸೂಚಿಸುತ್ತವೆ. ಸಣ್ಣ ಕಣ್ಣುಗಳು – ದೊಡ್ಡ ತಲೆ, ಅಗಲವಾದ ಕಿವಿ ಗಣೇಶನಿಗೆ. ಆದರೆ ಶ್ರೀಗಣೇಶನ ಕಣ್ಣುಗಳು ಗಾತ್ರದಲ್ಲಿ ಸಣ್ಣದಾಗಿವೆ. ಸಣ್ಣ ಕಣ್ಣುಗಳು ತೀಕ್ಷ್ಣದಾಯಕವಾಗಿದ್ದು, ತೀಕ್ಷ್ಣಮತಿಯನ್ನು ಹಾಗೂ ಏಕಾಗ್ರತೆಯನ್ನು ಪ್ರತಿಬಿಂಬಿಸುತ್ತದೆ. ನಾವು ಜಗತ್ತಿನ ರಹಸ್ಯವನ್ನು ಅರಿಯಬೇಕಾದರೆ, ಜ್ಞಾನವಂತರಾಗಬೇಕಾದರೆ ಏಕಾಗ್ರತೆ ಹಾಗೂ ತೀಕ್ಷ್ಣ ದೃಷ್ಟಿ ಅತ್ಯಗತ್ಯ.

ಇನ್ನು ಶ್ರೀಗಣೇಶನ ಸೊಂಡಿಲು. ಸೊಂಡಿಲು ದಕ್ಷತೆ, ಸಾಮರ್ಥ್ಯ, ಕಾರ್ಯಪಟುತ್ವ, ಹೊಂದಾ ಣಿಕೆಯ ಸ್ವಭಾವ ಹಾಗೂ ಸಂದರ್ಭಕ್ಕನುಸಾರವಾಗಿ ತನ್ನನ್ನು ಅಳವಡಿಸಿಕೊಳ್ಳುವಂತಹ ಸ್ವಭಾವದ ಪ್ರತೀಕ. ಬಾಯಿ – ಶ್ರೀಗಣೇಶನ ಬಾಯಿ ಸಣ್ಣದು. ಕಡಿಮೆ ಅಥವಾ ಎಷ್ಟು ಆವಶ್ಯಕವೋ ಅಷ್ಟೇ ಮಾತನಾಡಬೇಕು. ಅದರಿಂದ ನಮ್ಮ ಮಾತುಗಳಿಗೆ ತೂಕವಿರುತ್ತದೆ. “ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು’ ಎಂಬ ಮಾತಿನಂತೆ ಅನಾವಶ್ಯಕ ಮಾತುಗಳು ಆಡುವುದರಿಂದ ಇನ್ನಿಲ್ಲದ ಸಮಸ್ಯೆಗಳನ್ನು ನಾವು ಅನೇಕ ಬಾರಿ ಸ್ವಾಗತಿಸುತ್ತೇವೆ. ಆದ್ದರಿಂದ ಅವಶ್ಯವಿದ್ದಷ್ಟು ಮಾತನಾಡಿದಾಗ ನಮ್ಮ ವ್ಯಕ್ತಿತ್ವಕ್ಕೆ ತೂಕ, ಬೆಲೆ ಹೆಚ್ಚಾಗುತ್ತದೆ.

Advertisement

ಏಕದಂತ – ಶ್ರೀಗಣೇಶನು ಏಕದಂತನು. ಒಂದೇ ದಂತ. ಇನ್ನೊಂದು ದಂತದ ಭಾಗ ಮುರಿದಿರುವುದನ್ನು ನಾವು ಚಿತ್ರಗಳಲ್ಲಿ ಕಾಣಬಹುದು. ಇದರಿಂದ ಒಳ್ಳೆಯದನ್ನು ಇಟ್ಟುಕೊಂಡು ಕೆಟ್ಟದ್ದನ್ನು ತ್ಯಜಿಸಿಬಿಡಬೇಕು ಎಂದು. ಅಬ್ಟಾ! ಶ್ರೀಗಣೇಶನ ಮಾರ್ತಿಯಲ್ಲಿ ಎಂತಹ ಅರ್ಥಗಳು ಅಡಗಿವೆ ಅಲ್ಲವೇ! ಇನ್ನು ನಾಲ್ಕು ಕೈಗಳಲ್ಲಿ ಅಂಕುಶ, ಪಾಶ, ಅಭಯ ಮುದ್ರೆ ಹಾಗೂ
ಮೋದಕ ಅಥವಾ ಪದ್ಮವನ್ನು ಧರಿಸಿದ್ದಾನೆ. ಮಾನವನಿಗೆ ಎರಡು ಕೈಗಳು. ಅನೇಕ ದೇವರುಗಳಿಗೆ ನಾಲ್ಕು, ಎಂಟು, ಹತ್ತು ಕೈಗಳಿರುವುದನ್ನು ನಾವು ನೋಡುತ್ತಿರುತ್ತೇವೆ. ಭಗವಂತ ಅಗಾಧ ಶಕ್ತಿಯುಳ್ಳವನು ಎಂಬ ವಿಷಯ ಇದರಿಂದ ನಮಗೆ ತಿಳಿಯುತ್ತದೆ.

ಭಗವಾನ್‌ ಶ್ರೀಗಣೇಶನೂ ನಾಲ್ಕು ಕೈಗಳನ್ನು ಹೊಂದಿದ್ದು, ಒಂದು ಕೈಯಲ್ಲಿ ಅಂಕುಶ ಆಯುಧವನ್ನು ಧರಿಸಿದ್ದಾನೆ. ಶರಣಾಗತರಾದ ಭಕ್ತರ ಅಜ್ಞಾನ ಹಾಗೂ ಸಂಸಾರದ ಬಂಧನಗಳನ್ನು ಶ್ರೀಗಣೇಶನು ಶಮಾಡುತ್ತಾನೆ. ಇನ್ನೊಂದು ಕೈಯಲ್ಲಿ ಪಾಶ. ಇದು ಎಲ್ಲರನ್ನೂ ತನ್ನ ಕಡೆ ಸೆಳೆದುಕೊಳ್ಳುವ ಆಯಸ್ಕಾಂತೀಯ ಶಕ್ತಿಯನ್ನು ಭಗವಾನ್‌ ಶ್ರೀಗಣೇಶನು ಹೊಂದಿದ್ದು, ಸರ್ವಜೀವಿಗಳನ್ನು ತನ್ನ ಕಡೆ ಸೆಳೆದುಕೊಳ್ಳುವ ಪರಮಾತ್ಮನೇ ಆಗಿದ್ದಾನೆ.

ಅಭಯ ಹಸ್ತ – ಶರಣಾಗತರಾದ ಭಕ್ತರನ್ನು ಸರ್ವಕಾಲದಲ್ಲೂ, ಸರ್ವವಿಧದಿಂದಲೂ ತಾನು ರಕ್ಷಿಸುತ್ತೇನೆ ಎಂಬ ಅಭಯವನ್ನು ಅವನು ನೀಡುತ್ತಿದ್ದಾನೆ. ಕಮಲ ಹೂವು ಅಥವಾ ಮೋದಕ – ಕಮಲದ ಹೂವು ಮಾನವನ ವಿಕಾಸದ ದ್ಯೋತಕವಾಗಿದೆ. ಭಕ್ತಿಯನ್ನು ಪ್ರತಿಬಿಂಬಿಸುತ್ತದೆ. ಭಕ್ತಿಯಿಂದ ತಾನು ಸುಲಭವಾಗಿ ದೊರೆಯುತ್ತೇನೆ ಎಂದು. ಇನ್ನು ಕೆಲವು ಚಿತ್ರಗಳಲ್ಲಿ ಭಗವಾನ್‌ ಶ್ರೀಗಣೇಶನು ಮೋದಕವನ್ನು ಹಿಡಿದಿರುವುದನ್ನು ನಾವು ಕಾಣಬಹುದು. ಇಲ್ಲಿ ಮೋದಕವು ಸಾಧನಾ ಫಲ, ಮೋಕ್ಷಫಲವನ್ನು ಸೂಚಿಸುತ್ತದೆ. ನಮ್ಮ ಶ್ರಮಕ್ಕೆ ತಕ್ಕಂತೆ, ಸಾಧನೆ ಮಾಡಿದಾಗ ನಮಗೆ ಫಲಗಳನ್ನು ಅವನು ನೀಡುತ್ತಾನೆ.

ಹೊಟ್ಟೆ ಗಣಪ – ಶ್ರೀಗಣೇಶನ ಹೊಟ್ಟೆ ಗುಡಾಣದಂತಿದೆ ಎಂದು ಹಲವರ ಅಭಿಮತ. ಇಡೀ ಬ್ರಹ್ಮಾಂಡವನ್ನೇ ಪರಬ್ರಹ್ಮ ಸ್ವರೂಪಿಯಾದ ಭಗವಾನ್‌ ಶ್ರೀಗಣೇಶನು ಧರಿಸಿದ್ದಾನೆ ಎಂಬ ಗೂಢಾರ್ಥ ಇದರಿಂದ ನಮಗೆ ತಿಳಿಯುತ್ತದೆ. ಒಳ್ಳೆಯದು, ಕೆಟ್ಟದ್ದು ಎಲ್ಲವನ್ನೂ ಸ್ವೀಕರಿಸುವ ಮನೋಭಾವನೆಯನ್ನು ನಾವು ಹೊಂದಿರಬೇಕು. ಅದರಿಂದ ನಾವು ಸಮಚಿತ್ತರಾಗಿರಬಹುದು ಎಂದು ಭಗವಂತನು ಈ ಮೂಲಕ ನಮಗೆ ತಿಳಿಸುತ್ತಿದ್ದಾನೆ. ಇನ್ನು ಹಾವು ಕುಂಡಲಿ ಶಕ್ತಿಯ ಪ್ರತೀಕ. ಕುಂಡಲಿ ಶಕ್ತಿ ಜಾಗೃತವಾದರೆ, ಸೃಷ್ಟಿಯ ರಹಸ್ಯವನ್ನು ಹಾಗೂ ನಮ್ಮ ಮೂಲವನ್ನು ನಾವು ಅರಿಯಬಹುದು. ಮೂಷಿಕ ವಾಹನ – ಇಷ್ಟು ದೊಡ್ಡ ಗಣೇಶನಿಗೆ, ಅಷ್ಟು ಸಣ್ಣ ಇಲಿ ವಾಹನ.

ಎಂತಹ ವಿಪರ್ಯಾಸ ಅಲ್ಲವೇ? ಇಲಿಯು ನಮ್ಮ ಆಸೆಗಳನ್ನು, ಚಂಚಲತೆಯನ್ನು ಸೂಚಿಸುತ್ತದೆ. ಆಸೆ ಸಣ್ಣದಾಗಿದ್ದರೂ, ಅದು ಅತ್ಯಂತ ಬಲಿಷ್ಠವಾಗಿದ್ದು, ಜನ್ಮಾಂತರಗಳನ್ನು ಉಂಟು ಮಾಡುತ್ತದೆ. ಅನೇಕ ರಾಜ-ಮಹಾರಾಜರುಗಳು ಆಸೆಯ ದಾಸರಾಗಿರುವುದನ್ನು ನಾವು ಇತಿಹಾಸದಲ್ಲಿ ನೋಡುತ್ತೇವೆ. ಆಸೆಯನ್ನು, ಮನಸ್ಸಿನ ನಿಗ್ರಹವನ್ನು ಹೊಂದಿದರೆ ಬುದ್ದು-ಬುದ್ಧನಾಗುತ್ತಾನೆ, ದಾಸನು-ಪ್ರಭುವಾಗುತ್ತಾನೆ. ಆಸೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯವಶ್ಯಕ. ಆದ್ದರಿಂದಲೇ ಭಗವಂತನು ಸಣ್ಣ ಇಲಿಯನ್ನು ತನ್ನ ವಾಹವನ್ನಾಗಿ ಮಾಡಿಕೊಂಡಿರುವುದು.

ಈ ಮೇಲಿನ ಒಂದೊಂದು ವಿಚಾರಕ್ಕೂ ನಾವು ಶ್ರೀಗಣೇಶನ ಜೀವನದಲ್ಲಿ ಅನೇಕ ಘಟನೆಗಳನ್ನು ಸ್ಮರಿಸಿಕೊಳ್ಳಬಹುದು. ಹೀಗೆ ನಮ್ಮ ಸನಾತನ ಧರ್ಮ ಒಂದು ಶ್ರೇಷ್ಠ ಧರ್ಮವಾಗಿದೆ. ಅದು ಅಂತರ್‌ ದೃಷ್ಟಿಯನ್ನು, ಒಳಗೂಡಾರ್ಥಗಳನ್ನು ಹೊಂದಿದೆ. ನಾವು ಅದನ್ನು ಸರಿಯಾಗಿ ತಿಳಿಯಬೇಕಷ್ಟೇ.

ಸ್ವಾಮಿ ಶಾಂತಿವ್ರತಾನಂದ,
ಅಧ್ಯಕ್ಷರು, ರಾಮಕೃಷ್ಣ ವೇದಾಂತ ಕೇಂದ್ರ, ಐರ್ಲೆಂಡ್‌

Advertisement

Udayavani is now on Telegram. Click here to join our channel and stay updated with the latest news.

Next