Advertisement

ಗೋಮಯದಲ್ಲಿ ತಯಾರಾಯಿತು ಗೌರಿ ಗಣೇಶ ಮೂರ್ತಿ : ಪರಿಸರ ಸ್ನೇಹಿ ಗಣಪನಿಗೆ ಹೆಚ್ಚಾಯ್ತು ಬೇಡಿಕೆ

10:26 AM Sep 09, 2021 | Team Udayavani |

ಅಕ್ಷಯ್. ವಿ. ವಿಜಯಪುರ

Advertisement

ವಿಜಯಪುರ : ರಾಸಾಯನಿಕ ಬಳಸದೆ, ಬಣ್ಣ ಹಚ್ಚದೆ ಕೇವಲ ಜೇಡಿ ಮಣ್ಣಿನಲ್ಲೇ ಮಾಡುವ ಗಣಪನ ಮೂರ್ತಿಯನ್ನು ಪರಿಸರ ಸ್ನೇಹಿ ಎನ್ನಲಾಗುತ್ತಿತ್ತು. ಆದರೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಗೋಮಯದಲ್ಲಿ ಅಂದರೆ ಹಸುವಿನ ಸಗಣಿಯಲ್ಲಿ ಗಣಪನ ಮೂರ್ತಿ ತಯಾರಿಸಿ ಮತ್ತೆ ಗಣಪ ನೀರಿನಲ್ಲಿ ಕರಗಿದ ಮೇಲೆಯೂ ಫಲವತ್ತಾದ ಗೊಬ್ಬರವಾಗುತ್ತದೆ. ಗಿಡಗಳು ಹಚ್ಚಹಸಿರಾಗಿ ಬೆಳೆಯುತ್ತದೆ ಎನ್ನುವುದಾದರೆ ಇದಕ್ಕಿಂತ ಪರಿಸರ ಸ್ನೇಹಿ ಗಣಪ ಮತ್ತಾವುದಿದೆ ?

ವಿಜಯಪುರದ ಗಿರ್ ಗೋಶಾಲೆಯಲ್ಲಿ ಇಂತಹ ಪರಿಸರ ಸ್ನೇಹಿ ಗೋಮಯ ಗಣಪ ತಯಾರಾಗಿದ್ದಾರೆ. ಜೊತೆಗೆ ಪುಟ್ಟ ಗೌರಿಯೂ ಇದ್ದಾಳೆ.

ವಿಜಯಪುರದ ಸಿಂಹದ ಮನೆ ಖ್ಯಾತಿಯ ಬಾಲಕೃಷ್ಣಪ್ಪನವರ ಕುಟುಂಬ ವ್ಯಾಪರಸ್ಥರಾಗಿದ್ದವರು. ನಂತರದ ದಿನಗಳಲ್ಲಿ ಇವರ ಪುತ್ರ ದಿನೇಶ್ ಪ್ರಪ್ರಥಮ ಬಾರಿಗೆ ವಿಜಯಪುರದಲ್ಲಿ ಗಿರ್ ಗೋಶಾಲೆ ಆರಂಭಿಸಿ, ಸಾವಯವ ಕೃಷಿ ಆರಂಭಿಸಿ ಪಟ್ಟಣದ ಜನತೆಗೆ ಆರೋಗ್ಯದ ಕಾಳಜಿ ಬೆಳೆಸುವಲ್ಲಿ ಕುಟುಂಬದವರೆಲ್ಲ ಸಹಕರಿಸಿದರು. ಇವರು ಸಾಕಿದ ಗಿರ್ ತಳಿ  ಮತ್ತು ಹಳ್ಳಿಕಾರ್ ತಳಿ ನೋಡಲು ಎಲ್ಲರಿಗೂ ಆಸಕ್ತಿ.

ಈಗ ಗಣಪತಿ ಹಬ್ಬದ ಸಂದರ್ಭದಲ್ಲಿ ದಿನೇಶ್ ಅವರ ಪತ್ನಿ ರಜನಿ, ಮಗ ಹರ್ಷಿತ್, ಪುತ್ರಿ ಅರ್ಪಿತ ಎಲ್ಲರೂ ಪರಿಸರ ಸ್ನೇಹಿ ಗಣಪನ ವಿಗ್ರಹ ಮಾಡಲು ಆಸಕ್ತಿ ತೋರಿಸಿ ಪಟ್ಟಣದ ಜನತೆಗೆ ಒಂದು ಹೊಸ ಪರಿಸರ ಸ್ನೇಹಿ ಗಣಪನ ವಿಗ್ರಹದ ಪರಿಚಯ ಮಾಡಿಸಿದರು.

Advertisement

ಇದನ್ನೂ ಓದಿ : ಪ್ರತಿಭಟನೆಯ ವರದಿ ಮಾಡಿದ ಪತ್ರಕರ್ತರ ಮೇಲೆ ತಾಲಿಬಾನಿಗಳ ಅಮಾನುಷ ಹಲ್ಲೆ

ನಂತರ ಪ್ರಥಮ ಪ್ರಯೋಗದಲ್ಲಿಯೇ ಕುಟುಂಬದ ಪ್ರಯತ್ನ ಯಶಸ್ವಿಯಾಯಿತು. ಸುಮಾರು ನೂರು ಗಣಪನ ವಿಗ್ರಹಗಳು ತಯಾರಾದವು. ಪಟ್ಟಣದಲ್ಲಿ ಮಾತ್ರವಲ್ಲದೆ ಬೆಂಗಳೂರು ಮತ್ತಿತರೆ ಕಡೆಗಳಿಂದಲು ಗೋಮಯ ಮೂರ್ತಿಗೆ ಬೇಡಿಕೆ ಹೆಚ್ಚಾಯ್ತು.  ಗಣಪನ ಮೂರ್ತಿ ನೀರಿನಲ್ಲಿ ಕರಗಿದ ಮೇಲೂ ಇದರಿಂದ ಮತ್ತಷ್ಟು ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದ್ದು, ಕುಂಡದ ಗಿಡಗಳು, ಟೆರೇಸ್ ಗಾರ್ಡನಿಂಗ್ ಗಿಡಗಳಿಗೆ ಈ ನೀರು ಹೆಚ್ಚು ಪ್ರಯೋಜನಕಾರಿ.  ಇದು ಉತ್ತಮ ಗೊಬ್ಬರವಾಗಿ ಗಿಡಗಳು ಹಚ್ಚಹಸುರಾಗಿ ಬೆಳೆಯಲು ಸಹಕಾರಿ ಎಂಬುದು ತಿಳಿದುಬಂದಿದೆ.

ಗಣಪತಿ ತಯಾರಕರಾದ ದಿನೇಶ್ ತಮ್ಮ  ಮೊದಲ ಪ್ರಯೋಗ ಮತ್ತು ಪ್ರಯತ್ನದ ಬಗ್ಗೆ ಮಾತನಾಡಿ, ಭಾರತ ದೇಶದ ತಳಿಯಾದ ದೇಸಿ ಹಸು ಗಿರ್ ತಳಿಯನ್ನು ಗುಜರಾತ್ ನಿಂದ ತಂದಿದ್ದು, ಇದರ ಜೊತೆ ಕರ್ನಾಟಕದ ಹಳ್ಳಿಕಾರ್ ತಳಿಯ ಹಸುವನ್ನು ನಮ್ಮ ಗೋಶಾಲೆಯಲ್ಲಿ ಸಾಕುತ್ತಿದ್ದೇವೆ. ದೇಶಿ ತಳಿ ಅಭಿವೃದ್ಧಿ, ಸಾವಯವ ಕೃಷಿಯನ್ನು ಉತ್ತೇಜಿಸುವುದು ನಮ್ಮ ಉದ್ದೇಶ. ಸಗಣಿ ಮತ್ತು ಗಂಜಲದಿಂದ ಅನೇಕ ಉತ್ಪನ್ನಗಳನ್ನು ತಯಾರಿಸಿದ್ದು, ದೇಸಿ ಹಸುವಿನ ಬೆರಣಿಗೆ ಬೇಡಿಕೆ ಇದೆ.  ಗಣಪತಿ ಹಬ್ಬದ ಈ ಸಂದರ್ಭದಲ್ಲಿ ಗೋಮಯದಿಂದ ( ಹಸುವಿನ ಸಗಣಿಯಿಂದ) ಗಣಪತಿ ಮೂರ್ತಿಯನ್ನು ತಯಾರಿಸಿದ್ದೇವೆ. ನನ್ನ ಮಗ ಹರ್ಷಿತ್ ಈ ವಿಷಯದಲ್ಲಿ ಬಹಳ ಆಸಕ್ತಿ ವಹಿಸಿ 3 ಡಿ ಎಫೆಕ್ಟ್ ನಲ್ಲಿ ಗಣಪನ ಮೂರ್ತಿಯ ಅಚ್ಚು ತಯಾರಿಸಿದ್ದು, 5 , 9,12 ಇಂಚಿನ ಗಣಪತಿ ಮತ್ತು ಪುಟ್ಟ ಗೌರಿಯ ವಿಗ್ರಹವನ್ನು ಸಹ ತಯಾರಿಸಿದ್ದೇವೆ. ಇದು ನಮ್ಮ ಪ್ರಥಮ ಪ್ರಯೋಗ ವಾದ್ದರಿಂದ ಕಡಿಮೆ ಸಂಖ್ಯೆಯಲ್ಲಿ ವಿಗ್ರಹಗಳನ್ನು ತಯಾರು ಮಾಡಿದ್ದು, ಜನ ವಿಗ್ರಹ ಕೊಳ್ಳಲು ಆಸಕ್ತಿ ತೋರಿಸಿ ಬಂದು ಖರೀದಿ ಮಾಡುತ್ತಿದ್ದಾರೆ.  ಮಧುಗಿರಿ ಸಮೀಪದ ಸುರಭಿ ಗೋಶಾಲೆಯವರು ಗೋಮಯದಲ್ಲಿ ಗಣಪತಿ ತಯಾರು ಮಾಡುವ ವಿಚಾರದಲ್ಲಿ ಸಹಕಾರ ನೀಡಿದರು. ಈ ವಿಗ್ರಹಗಳಿಗೆ ಹೊರಗಿನಿಂದ ಹೆಚ್ಚು ಬೇಡಿಕೆ ಇದ್ದು ಈ ಬಾರಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಇದು ಪರಿಸರ ಸ್ನೇಹಿ ಗಣಪನ ವಿಗ್ರಹವಾಗಿದ್ದು, ಸಗಣಿ, ಗಂಜಲ, ಮರದ ಗೋಂದು, ಮರಳನ್ನು ಬಳಸಿ ತಯಾರಿಸಿದ್ದೇವೆ.  ಯಾವುದೇ ರಾಸಾಯನಿಕ ಬಳಸಿಲ್ಲ. ಕೊನೆಯ ಅಲಂಕಾರಕ್ಕೆ ವಾಟರ್ ಪೇಯಿಂಟ್ ಮಾತ್ರ ಬಳಸಿದ್ದೇವೆ. ಮಣ್ಣಿನ ಗಣಪ ನಾಲ್ಕು ದಿನದಲ್ಲಿ ಕರಗಿದರೆ ಇದು ಎಂಟು ದಿನಗಳಲ್ಲಿ ಕರಗುತ್ತದೆ. ಮತ್ತೆ ಈ ನೀರನ್ನು ಗಿಡಗಳಿಗೆ ಬಳಸುವ ಮೂಲಕ ಪುನರ್ಬಳಕೆ ಮಾಡಬಹುದು.  10 ಲೀಟರ್ ನೀರಿನಲ್ಲಿ ಇದನ್ನು ಕರಗಿಸಿದರೆ ಇದನ್ನು 100 ಲೀಟರ್ ನೀರಿಗೆ ಸೇರಿಸಿ ಬಳಸಬಹುದಾಗಿದೆ. ಎರೆಹುಳು ಗೊಬ್ಬರವನ್ನು ಸಹ ಮಾಡಬಹುದು. ತಯಾರಿಕೆಯ ಸಮಯ ಹೆಚ್ಚು. ಒಂದು ಗಣಪನ ವಿಗ್ರಹ ಮಾಡಲು ಎರಡು ವರೆ ದಿನ ಆಗುತ್ತದೆ. ನಾವು ಈ ಬಾರಿ ನೂರು ವಿಗ್ರಹಗಳನ್ನು ಮಾತ್ರ ತಯಾರು ಮಾಡಿದ್ದು, ಸುಮಾರು 75 ವಿಗ್ರಹ ಮಾರಾಟವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

ರಜನೀ ದಿನೇಶ್ ಮಾತನಾಡಿ,  ಗೋಮಯದಿಂದ ಗಣಪತಿ ಮಾಡುವ ಪ್ರಕ್ರಿಯೆ ಬಹಳ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸಗಣಿಯನ್ನು ಸ್ವಚ್ಛ ಮಾಡಿ, ಬೆರಣಿ ಮಾಡಿ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಮತ್ತೆ ಅದನ್ನು ನುಣ್ಣನೆಯ ಪುಡಿ ಮಾಡಬೇಕು. 90 ಭಾಗ ಸಗಣಿಯ ಪುಡಿಗೆ, 5 ಭಾಗ ಗೋಂದು ಐದು ಭಾಗ ಮರಳು ಸೇರಿಸಿ ಗಂಜಲ ಸೇರಿಸಿ ಚೆನ್ನಾಗಿ ಹದ ಮಾಡಬೇಕು. ಹದ ಮಾಡಿದಷ್ಟು ಗಣಪನ ಮೂರ್ತಿ ಚೆನ್ನಾಗಿ ತಯಾರು ಮಾಡಬಹುದು. ನಾವು ಪಿಒಪಿ ಗಣೇಶ, ಮಣ್ಣಿನ ಗಣೇಶ ಅಥವಾ ಯಾವುದೇ ಗಣೇಶ ಪ್ರತಿಷ್ಠಾಪನೆ ಮಾಡಿದರೂ ಸಂಪ್ರದಾಯ ಬದ್ಧವಾಗಿ ಸಗಣಿಯ ಬೆನಕ ಮಾಡಿ ಗರಿಕೆ ಇಟ್ಟು ಪೂಜಿಸುತ್ತೇವೆ. ಗೋಮಯಕ್ಕೆ ಅಷ್ಟು ಪ್ರಾಧ್ಯಾನತೆ ಇದೆ. ಪರಿಸರ ಸ್ನೇಹಿ ಗಣಪನ ಪೂಜೆ ನಮ್ಮೆಲ್ಲರ ಕರ್ತವ್ಯ ಮತ್ತು ಆದ್ಯತೆ ಯಾಗಿರಲಿ. ಗಣಪನ ಮೂರ್ತಿ ಕರಗಿದ ಮೇಲೆ ಪರಿಸರಕ್ಕೆ ಉತ್ತಮ ಗೊಬ್ಬರವೂ ಆಗುತ್ತದೆ. ಜನ ಈ ಪರಿಸರ ಸ್ನೇಹಿ ಗಣಪನ ಮೂರ್ತಿ ಕೊಳ್ಳಲು ಮುಂದೆ ಬಂದರೆ ನಮಗೆ ಅದೇ ಹೆಚ್ಚು ಪ್ರೋತ್ಸಾಹದಾಯಕ ಎಂದು ತಿಳಿಸಿದರು.

ಪರಿಸರ ಪ್ರೇಮಿಗಳು ಗೋಮಯ ಗಣಪನ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರೆ ಸಂಪ್ರದಾಯಸ್ಥ ಕುಟುಂಬಗಳು ಗೋಮಯದಿಂದ ತಯಾರಾದ ಮೂರ್ತಿಗಳನ್ನು ಅತ್ಯಂತ ಭಕ್ತಿಭಾವದಿಂದ ಮನೆಗೆ ಕೊಂಡೊಯ್ದರು.

ಇದನ್ನೂ ಓದಿ : ಡಾಬಾದಲ್ಲಿ ಊಟ ಮಾಡಿ ಬರುವಾಗ ಭೀಕರ ಅಪಘಾತ: ಬೆಳಗಾವಿಯ ಇಬ್ಬರು ಯುವಕರು ದುರ್ಮರಣ

Advertisement

Udayavani is now on Telegram. Click here to join our channel and stay updated with the latest news.

Next