Advertisement
ವಂದಿಸುವುದಾದಿಯಲಿ ಗಣನಾಥನಾ ಎಂದು ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ಹಾಡುತ್ತ ಗಣಪನ ಶಕ್ತಿಯನ್ನು ಪರಿಚಯಿಸಿದ್ದು ನಮಗೆಲ್ಲಾ ಗೊತ್ತು. ಈ ಪ್ರಥಮಪೂಜಿಪ ಗಣಪನ ಜನನ ವೃತ್ತಾಂತವು ವಿಶೇಷವಾದುದು. ಪಾರ್ವತಿ ದೇವಿಯು ತನ್ನ ಬೇಸರದ ನಿವಾರಣೆಗೆಂದು ಮಣ್ಣಿನಿಂದ (ಅರಿಶಿನದಿಂದ ಎಂದೂ ಹೇಳಲಾಗುತ್ತದೆ) ಬಾಲಕನನ್ನು ರಚಿಸಿ, ಜೀವವನ್ನು ನೀಡಿ, ಸ್ನಾನಕ್ಕೆ ತೆರಳುತ್ತಾಳೆ.
Related Articles
Advertisement
ಗಣೇಶನ ರೂಪವೂ ವಿಶೇಷವಾಗಿಯೂ ಆಕರ್ಷಕವಾಗಿಯೂ ಇದೆ. ಆನೆಯ ಮೊಗ, ದೊಡ್ಡ ಹೊಟ್ಟೆ, ಸಣ್ಣ ಕೈಕಾಲುಗಳು, ಏಕದಂತ, ಅವನ ದೇಹಕ್ಕೆ ಸರಿಹೊಂದದ ಇಲಿ ಆತನ ವಾಹನ. ಹೊಟ್ಟೆಗೆ ಸುತ್ತಿಕೊಂಡ ಹಾವು. ಈ ರೂಪ ಎಲ್ಲರಿಗೂ ಪ್ರಿಯ. ಅಂತೆಯೇ ಗಣಪನ ಬಗೆಗಿನ ಸ್ವಾರಸ್ಯಕರವಾದ ಕತೆಗಳೂ ಚಂದ.
ಗಣಪನ ಸ್ವಾರಸ್ಯಕರ ಕಥೆಗಳು
ಒಮ್ಮೆ ಅತಿವೇಗದಲ್ಲಿ ಮೂರು ಲೋಕವನ್ನು ಯಾರು ಮೊದಲು ಸುತ್ತುವರು ಎಂಬ ಅಣ್ಣ ತಮ್ಮನ ಪಂಥದಲ್ಲಿ ಅಣ್ಣ ಸುಬ್ರಹ್ಮಣ್ಯ ತನ್ನ ವಾಹನ ನವಿಲನ್ನು ಏರಿ ಹೊರಟೇ ಬಿಟ್ಟಾಗ ಗಣಪ ತನ್ನ ವಾಹನದತ್ತ ನೋಡಿದ. ಈ ಇಲಿಯಿಂದ ಎಷ್ಟು ದೂರ ಹೊರಲು ಸಾಧ್ಯ ಎಂದುಕೊಂಡು ನಸುನಕ್ಕು ತನ್ನ ಅಪ್ಪ ಅಮ್ಮನಿಗೇ ಮೂರು ಸುತ್ತು ಬಂದು ಅವರೇ ಮುರೂ ಲೋಕ ಎಂಬುದನ್ನು ಅರುಹಿದ್ದ ಮತ್ತು ಗಣಪನೇ ಪಂಥದಲ್ಲಿ ಗೆದ್ದಿದ್ದ.
ಇನ್ನೊಮ್ಮೆ ರಾವಣನು ಶಿವನ ಆತ್ಮಲಿಂಗವನ್ನು ಕೊಂಡೊಯ್ದಾಗ ಅದನ್ನು ಅವನ ಕೈಯಿಂದ ತಪ್ಪಿಸುವ ಸಲುವಾಗಿ ಬಾಲಕನ ವೇಷ ಧರಿಸಿಕೊಂಡು ರಾವಣನ ಬಳಿ ಬಂದ. ಸಂಧ್ಯಾವಂದನೆಗೆ ಹೊರಟ ರಾವಣ ಆತ್ಮಲಿಂಗವನ್ನು ನೆಲಕ್ಕೆ ತಾಗಿಸಬಾರದಾಗಿಯೂ, ನಾನು ಬರುವತನಕ ಆತ್ಮಲಿಂಗದ ರಕ್ಷಣೆಯ ಜವಾಬ್ದಾರಿಯನ್ನು ಕೊಟ್ಟ. ನಾನು ಮೂರುಬಾರಿ ಕರೆಯುವ ಮೊದಲು ಬಾರದೇ ಇದ್ದಲ್ಲಿ ಈ ಶಿವಲಿಂಗವನ್ನು ನೆಲಕ್ಕೆ ಇಡುವೆ ಎಂದು ರಾವಣನನ್ನು ಎಚ್ಚರಿಸಿದ. ಆತ ಅತ್ತಕಡೆ ಹೋಗುತ್ತಿದ್ದಂತೆ ಮೂರು ಬಾರಿ ಕರೆದು, ನೆಲಕ್ಕೆ ಇಟ್ಟುಬಿಟ್ಟ. ರಾವಣನಿಂದ ಆಗಬಹುದಾಗಿದ್ದ ಅನಾಹುತ ತಪ್ಪಿಸಿದ. ಮತ್ತು ರಾವಣನ ಅಹಂಕಾರ ಇಳಿದು ಹೋಯಿತು.
ತನ್ನ ಹೊಟ್ಟೆಯನ್ನು ನೋಡಿ ನಕ್ಕ ಚಂದ್ರನಿಗೆ ನನ್ನ ಹಬ್ಬದ ದಿನ ನಿನ್ನನ್ನು ಯಾರೂ ನೋಡಬಾರದು, ನೋಡಿದರೆ ಅವರಿಗೆ ಅಪವಾದ ಬರಲಿ ಎಂದು ಶಪಿಸಿದ್ದು, ಕೃಷ್ಣ ಚಂದ್ರನನ್ನು ನೋಡಿ ಅಪವಾದಕ್ಕೆ ಗುರಿಯಾಗದ ಕಥೆ ಇವತ್ತಿಗೂ ಜನರ ಬಾಯಲ್ಲಿದೆ. ಇನ್ನೊಂದು ವಿಶೇಷವಾದ ಕಥೆಯಂದರೆ ವ್ಯಾಸರು ಗಣಪತಿಯ ಕೈಯಿಂದ ಮಹಾಭಾರತವನ್ನು ಬರೆಸಿದ್ದು. ಗಣೇಶ ಹೇಳಿದ್ದ. “ನಾನು ಬರೆಯುದು ನಿಲ್ಲುವ ಮೊದಲೇ ಇನ್ನೊಂದು ಶ್ಲೋಕ ರಚಿಸಿಟ್ಟಿರಬೇಕು. ಅಡೆತಡೆಯಾದರೆ ನಾನು ಎದ್ದು ಹೊರಟು ಬೀಡುವೆ” ಎಂದಿದ್ದ. ವ್ಯಾಸರು ತಮ್ಮ ಚಾಣಕ್ಷತನವನ್ನು ಬಳಸಿ, ಅಂತಹ ಸಂದರ್ಭ ಬಂದಾಗಲೆಲ್ಲ ಕ್ಲಿಷ್ಟವಾದ ಪದಗಳನ್ನು ಬಳಸಿ ಶ್ಲೋಕ ರಚಿಸಿ ಬಿಡುತ್ತಿದ್ದರಂತೆ. ಹೀಗೆ ಗಣಪನ ಬಗ್ಗೆ ಹಲವಾರು ಕಥೆಗಳಿವೆ.
ಹಬ್ಬಗಳು ಕೇವಲ ಆಡಂಬರದ ಆಚರಣೆಯಲ್ಲ. ಹಬ್ಬಕ್ಕೆ ನಿಸರ್ಗದ ನಂಟಿದೆ. ಈ ಪ್ರಕೃತಿಯನ್ನು ಬಿಟ್ಟು ಮನಷ್ಯನೂ ಇಲ್ಲ; ಹಬ್ಬವೂ ಇಲ್ಲ. ಅಲ್ಲೊಂದು ಧರ್ಮದ ನಡೆಯಿದೆ. ಪ್ರತಿ ಹಬ್ಬದ ಹಿಂದೆ ನೀತಿಯನ್ನು ಹೇಳುವ ಕಥೆಗಳಿವೆ. ಬದುಕಿನ ಹಾದಿ ಇದೆ. ಇವು ಮೊದಲು ನಮ್ಮನ್ನು ಆವರಿಸಬೇಕು. ನಾವು ಅನುಸರಿಸಬೇಕು. ದೇವರು ನಮ್ಮ ಅಹಂಕಾರದ ಪ್ರತಿಬಿಂಬವಲ್ಲ. ನಮ್ಮೊಳಗಿನ ದೀಪ. ಅದು ಹದವಾಗಿ ಬೆಳಗಬೇಕು. ಬೆಂಕಿಯಾಗಿ ಉರಿಯಬಾರದು!
ವಿಷ್ಣು ಭಟ್ ಹೊಸ್ಮನೆ.