ಗಣೇಶ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ “ಚಮಕ್’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ. ಚಿತ್ರ ಒಂದು ವಾರ ಮುಗಿಸಿ, ಯಶಸ್ವಿಯಾಗಿ ಎರಡನೇ ವಾರದ ಪ್ರದರ್ಶನ ಕಾಣುತ್ತಿದೆ. ಇನ್ನು ಚಿತ್ರ ನೋಡಿ ಖುಷಿಯಾಗಿರುವ ಅಭಿಮಾನಿಗಳು, ಹಗಲು-ರಾತ್ರಿ ಎನ್ನದೆ ಟ್ವೀಟ್ ಮಾಡುತ್ತಿದ್ದಾರಂತೆ. ಇದೆಲ್ಲದರಿಂದ ಗಣೇಶ್‌ಗೂ ಸಹಜವಾಗಿಯೇ ಖುಷಿಯಾಗಿದೆ. ಅದಕ್ಕಿಂತ ಖುಷಿಯಾಗಿರುವ ಮಗಳು ಚಾರಿತ್ರ್ಯಗೆ ಸಿಗುತ್ತಿರುವ ಪ್ರತಿಕ್ರಿಯೆ.
“ಚಿತ್ರ ಬಿಡುಗಡೆಯಾದಾಗ ಚಾರಿತ್ರ್ಯ ಮಂಗಳೂರಿನಲ್ಲಿ ಇದ್ದಳು. ಅಲ್ಲೇ ಅವಳು ಚಿತ್ರ ನೋಡಿದಳು. ಚಿತ್ರ ನೋಡಿ ಬಂದವರೆಲ್ಲರೂ, “ಆಲ್ ದಿ ಬೆಸ್ಟ್’ ಅಂತ ಹೇಳಿದರು ಅಂತ ಫೋನ್ ಮಾಡಿದ್ದಳು. ಸರಿ, ನಾಳೆಯಿಂದ ಸ್ಕೂಲ್ ಅಂತ ನೆನಪಿಸಿದೆ. ಮೊದಲು ಅವರ ಶಿಕ್ಷಣ ಮುಗಿಯಲಿ. ಆ ನಂತರ ಸಿನಿಮಾ. ಒಂದು ಖುಷಿಯೇನೆಂದರೆ, ನನ್ನ “ಮುಂಗಾರು ಮಳೆ’ ಡಿಸೆಂಬರ್ 29ಕ್ಕೆ ಬಿಡುಗಡೆಯಾಗಿತ್ತು.
ಅವಳು ಮೊದಲ ಬಾರಿಗೆ ಅಭಿನಯಿಸಿದ “ಚಮಕ್’ ಸಹ ಅದೇ ದಿನ ಬಿಡುಗಡೆಯಾಗಿತ್ತು. ನನ್ನ ಮಗನ ಚಿತ್ರವೂ ಡಿಸೆಂಬರ್ 29ಕ್ಕೇ ಬಿಡುಗಡೆಯಾಗುತ್ತದೇನೋ ನೋಡಬೇಕು’ ಎಂದು ನಗುತ್ತಾರೆ ಗಣೇಶ್. ಸರಿ ಮುಂದೇನು? “ಆರೆಂಜ್’ ಎಂಬ ಉತ್ತರ ಅವರಿಂದ ಬರುತ್ತದೆ. ಪ್ರಶಾಂತ್ ರಾಜ್ ನಿರ್ದೇಶನದ “ಆರೆಂಜ್’ ಚಿತ್ರವನ್ನು ಅವರು ಕಳೆದ ವರ್ಷವೇ ಒಪ್ಪಿಕೊಂಡಿದ್ದರು. ಫೆಬ್ರವರಿ ಮೊದಲ ವಾರದಿಂದ ಚಿತ್ರ ಪ್ರಾರಂಭವಾಗಲಿದೆಯಂತೆ.
ಸರಿ, ಜಗ್ಗೇಶ್ ಜೊತೆಗಿನ ಸಿನಿಮಾ ಯಾವಾಗ ಎಂದರೆ, ಅದಕ್ಕಿನ್ನೂ ಸ್ವಲ್ಪ ಸಮಯವಿದೆ ಎನ್ನುತ್ತಾರೆ ಗಣೇಶ್. “ನಾನು ಜಗ್ಗೇಶ್ ಅವರ ಅಭಿಮಾನಿ. ಬಿಟ್ಟೂ ಬಿಡದೆ ಅವರ ಸಿನಿಮಾಗಳನ್ನ ನೋಡುತ್ತಿದ್ದೆ. “ಬೇಡ ಕೃಷ್ಣ ರಂಗಿನಾಟ’ ಚಿತ್ರ ಎಲ್ಲೂ ಸಿಗಲಿಲ್ಲ ಅಂತ ನಾಗ ಚಿತ್ರಮಂದಿರಕ್ಕೆ ಹೋಗಿ ನೋಡಿ ಬಂದಿದ್ದೆ. ಅದ್ಭುತ ಟೈಮಿಂಗ್ ಇರುವ ನಟ ಅವರು. ಈಗಷ್ಟೇ ಒಂದು ಹಂತದ ಮಾತುಕತೆ ಮುಗಿದಿದೆ. ಮುಂದೆ ನೋಡಬೇಕು. ಇನ್ನು ವಿಜಯ್ ಜೊತೆಗೆ ಚಿತ್ರ ಇನ್ನೂ ಸಮಯವಿದೆ’ ಎನ್ನುತ್ತಾರೆ ಗಣೇಶ್.
ಮೆಚ್ಚಿಕೊಂಡು ಮಾರ್ಕ್ಸ್ ಕೊಟ್ಟಿದ್ದಾರೆ: ಕಳೆದ ವರ್ಷ ಹೇಗಿತ್ತು ಎಂದರೆ, ಎಲ್ಲದರ ಮಿಶ್ರಣವಾಗಿತ್ತು ಎಂಬ ಉತ್ತರ ಅವರಿಂದ ಬರುತ್ತದೆ. “ತಂದೆಗೆ ಆರೋಗ್ಯ ಸರಿ ಇರಲಿಲ್ಲ. ಈಗ ಹುಷಾರಾಗಿದ್ದಾರೆ. ಶಿಲ್ಪ ಸಹ ಕಳೆದ ವರ್ಷ ಸಾಕಷ್ಟು ಕೆಲಸಗಳಲ್ಲಿ ತೊಡಗಸಿಕೊಂಡಿದ್ದರು. ಇನ್ನು ನನಗೆ ಕಳೆದ ವರ್ಷ ಒಂದಿಷ್ಟು ಬೇರೆ ತರಹದ ಪಾತ್ರಗಳನ್ನು ಮಾಡುವ ಅವಕಾಶ ಸಿಕ್ಕಿತ್ತು. “ಪಟಾಕಿ’ಯಲ್ಲಿ ಪೊಲೀಸ್ ಪಾತ್ರ ಮಾಡಿದ್ದೆ.
“ಚಮಕ್’ನಲ್ಲಿ ಡಾಕ್ಟರ್ ಆಗಿದ್ದೆ. ಚಿತ್ರದ ಗೆಲುವು, ಸೋಲಿನ ಜೊತೆಗೆ ಪ್ರಯೋಗ ಮಾಡುವುದು ಸಹ ಮುಖ್ಯ. ಒಂದು ಖುಷಿಯೆಂದರೆ, ನನ್ನ 32 ಚಿತ್ರಗಳಲ್ಲಿ ಜನ ಒಂದಿಷ್ಟು ಪ್ರಯೋಗಗಳನ್ನು ಮೆಚ್ಚಿಕೊಂಡು ಮಾರ್ಕ್ಸ್ ಕೊಟ್ಟಿದ್ದಾರೆ. ಅದರಿಂದ ಇನ್ನಷ್ಟು ಪ್ರಯತ್ನ ಮಾಡುವ ಉತ್ತೇಜನ ಸಿಕ್ಕಿದಂತಾಗುತ್ತದೆ’ ಎನ್ನುತ್ತಾರೆ ಗಣೇಶ್.
ದುಡ್ಡಿಗಾಗಿ ರಾಜಕೀಯ ಅಲ್ಲ: ಇನ್ನು ಶಿಲ್ಪ ಅವರು ಈ ವರ್ಷದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಗಣೇಶ್ ಪ್ರಚಾರ ಮಾಡುತ್ತಾರಾ ಎಂದರೆ ಖಂಡಿತಾ ಎಂಬ ಉತ್ತರ ಅವರಿಂದ ಬರುತ್ತದೆ. “ರಾಜರಾಜೇಶ್ವರಿ ನಗರದಲ್ಲಿ ಟಿಕೆಟ್ ಪ್ರಯತ್ನ ನಡೆಯುತ್ತಿದೆ. ನನಗೆ ಮುಂಚಿನಿಂದಲೂ ಸಿನಿಮಾ ಆಸೆ. ಆಕೆ ರಾಜಕೀಯ ಆಯ್ಕೆ ಮಾಡಿಕೊಂಡರು. ಶಿಲ್ಪ ಫೈರ್‌ಬ್ರಾಂಡ್ ತರಹ.
ನೇರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ನಮಗೆ ರಾಜಕೀಯದಿಂದ ದುಡ್ಡು ಬೇಡ. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ರಾಜಕೀಯ ಆಕೆಯ ಪ್ಯಾಷನ್. ಶಿಲ್ಪ ಸಹ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡು, ಹಲವು ಕೆಲಸಗಳು ಮಾಡುತ್ತಿದ್ದಾರೆ. ನನಗಿಂಥ ಹೆಚ್ಚು ಬಿಝಿಯಾಗಿದ್ದಾರೆ. ಆಕೆಗೆ ಟಿಕೆಟ್ ಸಿಕ್ಕರೆ, ಖಂಡಿತಾ ಪ್ರಚಾರ ಮಾಡುತ್ತೇನೆ’ ಎಂದು ಮಾತು ಮುಗಿಸುತ್ತಾರೆ ಗಣೇಶ್.