Advertisement

ಗಣೇಶ್‌ ತಮ್ಮನ ಸಿನಿಪ್ರವೇಶ

09:19 AM Sep 12, 2019 | Lakshmi GovindaRaju |

ಕನ್ನಡದಲ್ಲಿ ಈಗಾಗಲೇ ಅನೇಕ ಸ್ಟಾರ್‌ ನಟರ ಸಹೋದರರು ಸಿನಿಮಾ ರಂಗಕ್ಕೆ ಎಂಟ್ರಿಯಾಗಿರುವುದು ಗೊತ್ತೇ ಇದೆ. ನಿರ್ದೇಶನ, ನಿರ್ಮಾಣ ಮತ್ತು ನಟನೆ ಸೇರಿದಂತೆ ಹಲವು ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ಗುರುತಿಸಿಕೊಂಡಿರುವುದೂ ಉಂಟು. ಆ ಸಾಲಿಗೆ ಈಗ ನಟ ಗಣೇಶ್‌ ಅವರ ಮತ್ತೂಬ್ಬ ಸಹೋದರ ಕೂಡ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಗಣೇಶ್‌ ಅವರ ಮೊದಲ ತಮ್ಮ ಮಹೇಶ್‌ ಹೀರೋ ಆಗಿ ಕಾಣಿಸಿಕೊಂಡಿದ್ದಾಗಿದೆ.

Advertisement

ಈಗ ಎರಡನೇ ತಮ್ಮನ ಸರದಿ. ಹೌದು, ಗಣೇಶ್‌ ಅವರ ಮತ್ತೊಬ್ಬ ಸಹೋದರ ಉಮೇಶ್‌ ಈಗ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟಿರುವ ಉಮೇಶ್‌, ತಮ್ಮ ಹೆಸರನ್ನು ಸೂರಜ್‌ ಕೃಷ್ಣ ಎಂದು ಬದಲಿಸಿಕೊಂಡು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅಷ್ಟಕ್ಕೂ ಸೂರಜ್‌ ಕೃಷ್ಣ ಅವರು ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಚಿತ್ರದ ಹೆಸರು “ನಾನೇ ರಾಜ’. ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.

ಹಾಗೆ ನೋಡಿದರೆ, ಸೂರಜ್‌ಕೃಷ್ಣ ಅವರಿಗೆ ಸಿನಿಮಾ ಆಕಸ್ಮಿಕ ಎಂಟ್ರಿ. ಅವರು ನಾನು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತೇನೆ ಎಂಬ ಯಾವ ಕನಸನ್ನೂ ಸೂರಜ್‌ ಕೃಷ್ಣ ಕಂಡಿರಲಿಲ್ಲ. ಮಾನವ ಸಂಪನ್ಮೂಲ ವಿಷಯದಲ್ಲಿ ಮಾಸ್ಟರ್‌ ಪದವಿ ಪಡೆದಿರುವ ಸೂರಜ್‌ಗೌಡ ಅವರಿಗೆ “ನಾನೇ ರಾಜ’ ಚಿತ್ರ ಅಪರೂಪದ ಅವಕಾಶ. ಸಿಕ್ಕ ಅವಕಾಶವನ್ನು ಮಿಸ್‌ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ, ಹೀರೋ ಆಗುವ ಮನಸು ಮಾಡಿದ್ದಾರೆ.

ಹಾಗಂತ ಅವರು ಸುಮ್ಮನೆ ಕ್ಯಾಮೆರಾ ಮುಂದೆ ಬಂದು ನಿಂತಿಲ್ಲ. ಒಬ್ಬ ಹೀರೋಗೆ ಇರಬೇಕಾದ ಎಲ್ಲಾ ಅರ್ಹತೆ ಪಡೆದುಕೊಂಡೇ ಕ್ಯಾಮೆರಾ ಮುಂದೆ ಬಂದು ನಿಂತಿದ್ದಾರೆ. “ನಾನೇ ರಾಜ’ ಚಿತ್ರಕ್ಕೆ ಹೀರೋ ಆದ ಕುರಿತು ಹೇಳಿಕೊಳ್ಳುವ ಸೂರಜ್‌ ಕೃಷ್ಣ, “ಇದು ನನ್ನ ಮೊದಲ ಚಿತ್ರ. ತಪ್ಪಿದ್ದರೆ ಕ್ಷಮಿಸಿ, ತಿದ್ದಿ ಹೇಳಿ, ನನ್ನನ್ನೂ ಬೆಂಬಲಿಸಿ, ಬೆಳೆಸಿ. ನಾನೆಂದಿಗೂ ಹೀರೋ ಆಗಬೇಕು ಎಂದು ಕನಸು ಕಂಡಿದ್ದೇ ಇಲ್ಲ. ಇದೆಲ್ಲಾ ಆಕಸ್ಮಿಕವಾಗಿ ಬಂದಿದ್ದು.

ಬಂದಿದ್ದನ್ನು ಸ್ವೀಕರಿಸಿದ್ದೇನೆ. ನಾನು ಇಂದು ಹೀರೋ ಆಗೋಕೆ ಕಾರಣ ನನ್ನ ಅಣ್ಣ ಗೋಲ್ಡನ್‌ ಸ್ಟಾರ್‌ ಗಣೇಶ್‌. ಅವರ ಸ್ಪೂರ್ತಿ, ಎನರ್ಜಿ ಕಾರಣ. ನಾನು ಅವರನ್ನು ನೋಡಿಕೊಂಡೇ ಬೆಳೆದವನು. ಅವರೊಂದಿಗೆ ಅನೇಕ ಚಿತ್ರಗಳ ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ಸೂಕ್ಷ್ಮವಾಗಿಯೇ ಅವರನ್ನು ಗಮನಿಸುತ್ತಿದ್ದೆ. ಇಂದು ಸ್ವಲ್ಪ ನಟನೆ ಬಗ್ಗೆ ತಿಳಿದಿದ್ದರೆ ಅದು ಅಣ್ಣನಿಂದಲೇ. ಅಣ್ಣ ಮತ್ತು ಅತ್ತಿಗೆ ಇಬ್ಬರ ಆಶೀರ್ವಾದ ಪಡೆದಿದ್ದೇನೆ. ನನ್ನ ತಂದೆ, ತಾಯಿಯ ಆಶೀರ್ವಾದವೂ ಇದೆ.

Advertisement

ನನ್ನ ಇನ್ನೊಬ್ಬ ಸಹೋದರ ಮಹೇಶ್‌ ಅವರ ಸಹಕಾರ, ಪ್ರೋತಾಸಹವೂ ಇದೆ. ಇನ್ನು ಮುಂದೆ ನಿಮ್ಮಗಳ ಆಶೀರ್ವಾದ ಬೇಕು’ ಎಂಬುದು ಸೂರಜ್‌ ಕೃಷ್ಣ ಮಾತು. ಅಂದಹಾಗೆ, ಸೂರಜ್‌ ಕೃಷ್ಣ ಇಲ್ಲಿ ಹಳ್ಳಿ ಹುಡುಗನ ಪಾತ್ರ ನಿರ್ವಹಿಸಿದ್ದು, ಹಳ್ಳಿಯ ಜನರ ಸಮಸ್ಯೆ ಪರಿಹರಿಸುವ ಮತ್ತು ಕೆಲ ಸಮಸ್ಯೆಯಲ್ಲಿ ಸಿಲುಕಿಕೊಂಡು ಒದ್ದಾಡುವ ಹುಡುಗನ ಪಾತ್ರ ನಿರ್ವಹಿಸಿದ್ದಾರಂತೆ. ಈ ಚಿತ್ರವನ್ನು ಶ್ರೀನಿವಾಸ್‌ ಶಿವಾರ ನಿರ್ದೇಶಿಸಿದ್ದು, ಆನಂದ್‌ ನಿರ್ಮಾಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next