“ಇದು ನನ್ನ ಆಕಸ್ಮಿಕ ಎಂಟ್ರಿ. ಈ ಅವಕಾಶ, ಎನರ್ಜಿ ಎಲ್ಲವೂ ನನ್ನ ಅಣ್ಣನಿಂದಲೇ ಬಂದಿದೆ. ಈ ಎಲ್ಲಾ ಕ್ರೆಡಿಟ್ ನನ್ನ ಅಣ್ಣನಿಗೇ ಸಲ್ಲಬೇಕು …’
– ಹೀಗೆ ಹೇಳಿದ್ದು ಯುವ ನಟ ಸೂರಜ್ ಕೃಷ್ಣ. ಸೂರಜ್ ಕೃಷ್ಣ ಈಗಷ್ಟೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ಅಂದಹಾಗೆ, ಸೂರಜ್ ಕೃಷ್ಣ ಬೇರ್ಯಾರೂ ಅಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಹೋದರ. ಹೌದು, ಈಗಾಗಲೇ ಗಣೇಶ್ ಅವರ ಮೊದಲ ಸಹೋದರ ಮಹೇಶ್ ಸಿನಿಮಾರಂಗಕ್ಕೆ ಬಂದಾಗಿದೆ. ಈಗ ಅವರ ಎರಡನೇ ಸಹೋದರ ಸೂರಜ್ ಕೃಷ್ಣ ಅವರ ಸರದಿ. ಸೂರಜ್ ಕೃಷ್ಣ “ನಾನೇ ರಾಜ’ ಚಿತ್ರದ ಮೂಲಕ ಹೀರೋ ಆಗಿ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ನಿರ್ದೇಶಕ ಶ್ರೀನಿವಾಸ್ ಶಿವಾರ, ಈ ಕುರಿತು ಹೇಳಿಕೊಳ್ಳಲೆಂದೇ ಪತ್ರಕರ್ತರ ಮುಂದೆ ತಮ್ಮ ತಂಡ ಕಟ್ಟಿಕೊಂಡು ಬಂದಿದ್ದರು. ಅಂದು ಹಿರಿಯ ನಿರ್ದೇಶಕ ಭಾರ್ಗವ ಅವರು ಚಿತ್ರದ ಫಸ್ಟ್‌ಲುಕ್ ಹಾಗು ಟ್ರೇಲರ್‌ಗೆ ಚಾಲನೆ ನೀಡಿ ಶುಭಹಾರೈಸಿದರು. ಆ ಬಳಿಕ ಚಿತ್ರತಂಡ ಮಾತುಕತೆಗೆ ಮುಂದಾಯಿತು.
ಮಾತಿಗಿಳಿದ ಸೂರಜ್‌ಕೃಷ್ಣ ಹೇಳಿದ್ದಿಷ್ಟು. “ಇದು ನನ್ನ ಮೊದಲ ಚಿತ್ರ. “ನಾನೇ ರಾಜ’ ಶೀರ್ಷಿಕೆ ಮಾತ್ರ. ಇಲ್ಲಿ ನಿರ್ಮಾಪಕ, ನಿರ್ದೇಶಕರೇ ರಾಜರು. ಮೊದಲ ಬಾರಿ ತೆರೆ ಮೇಲೆ ಬರುತ್ತಿದ್ದೇನೆ. ಏನಾದರೂ ತಪ್ಪಿದ್ದರೆ, ತಿದ್ದಿ ಹೇಳಿ, ನನ್ನನ್ನೂ ಬೆಳೆಸಿ. ನಾನಿಲ್ಲಿ ಹಳ್ಳಿ ಹುಡುಗನ ಪಾತ್ರ ಮಾಡಿದ್ದೇನೆ. ಅಜ್ಜಿಯ ಮುದ್ದಿನ ಮೊಮ್ಮಗ, ಗೆಳೆಯರಿಗೆ ಅಚ್ಚುಮೆಚ್ಚು. ಒಂಥರಾ ಮನೆಗೆ ಮಾರಿ, ಊರಿಗೆ ಉಪಕಾರಿ ಎಂಬಂತಹ ಪಾತ್ರ’ ಎಂದರು ಸೂರಜ್‌ಕೃಷ್ಣ.
ನಿರ್ದೇಶಕ ಶ್ರೀನಿವಾಸ್ ಶಿವಾರ ಅವರಿಗೆ ಇದು ಮೂರನೇ ಚಿತ್ರ. ಅವರು ಮಾಡಿಕೊಂಡ ಕಥೆಗೆ ಹೊಸ ಮುಖ ಬೇಕಿತ್ತಂತೆ. ಹುಡುಕಾಟದಲ್ಲಿದ್ದ ಅವರಿಗೆ ಸಿಕ್ಕಿದ್ದು ಸೂರಜ್‌ಕೃಷ್ಣ. ಆ ಬಗ್ಗೆ ಹೇಳುವ ಅವರು,”ಇದೊಂದು ಪಕ್ಕಾ ರಗಡ್ ಸಿನಿಮಾ. ಇಲ್ಲಿ ಮನರಂಜನೆ ಜೊತೆಗೆ ಪ್ರೀತಿ, ಗೀತಿ ಇತ್ಯಾದಿ ವಿಷಯಗಳಿವೆ. ಹೀರೋ ಇಲ್ಲಿ ಯಾರೇ ಸಹಾಯ ಕೇಳಿದರೂ ಸಮಯ ನೋಡದೆ, ಯಾವ ಅಪಾಯವನ್ನೂ ಲೆಕ್ಕಿಸದೆ ಅವರ ಸಮಸ್ಯೆಗೆ ಸ್ಪಂದಿಸುವ ಗುಣದವನು. ನಾಯಕಿಯೊಬ್ಬಳ ಸಮಸ್ಯೆಗೆ ಸ್ಪಂದಿಸಲು ಹೋದಾಗ, ಕಷ್ಟಕ್ಕೆ ಸಿಲುಕಿಕೊಳ್ಳುತ್ತಾನೆ. ಆಮೇಲೆ ಹೇಗೆ ಹೊರಬರುತ್ತಾನೆ ಅನ್ನೋದು ಕಥೆ. ಬನ್ನೂರು, ಮದ್ದೂರು ಇತರೆಡೆ ಚಿತ್ರೀಕರಿಸಲಾಗಿದೆ. ಮಂಡ್ಯ ಭಾಷೆ ಚಿತ್ರದ ಮತ್ತೂಂದು ಹೈಲೈಟ್. ಸೂರಜ್ ಕೃಷ್ಣ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆ್ಯಕ್ಷನ್‌ನಲ್ಲಿ ಕಾಲಿಗೆ ಪೆಟ್ಟು ಬಿದ್ದಿದ್ದರೂ, ಲೆಕ್ಕಿಸದೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಇದೊಂದು ಹೊಸಬಗೆಯ ಚಿತ್ರ. ನಿಮ್ಮೆಲ್ಲರ ಸಹಕಾರ ಬೇಕು’ ಅಂದರು ನಿರ್ದೇಶಕರು.
ನಿರ್ಮಾಪಕ ಎಲ್. ಆನಂದ್ ಅವರಿಗೆ ಇದು ಮೊದಲ ಸಿನಿಮಾ. ನಾಯಕಿ ಸೋನಿಕ ಗೌಡ ಅವರಿಗೂ ಇದು ಮೊದಲ ಚಿತ್ರ. ಅವರಿಗೆ ಸಿನಿಮಾ ಚಿತ್ರೀಕರಣ ಎರಡು ದಿನ ಇದ್ದಾಗ ಅವಕಾಶ ಸಿಕ್ಕಿತಂತೆ. ಹೀರೋ ಹೈಟ್ ಇದ್ದುದರಿಂದ ಅವರಿಗೆ ಮ್ಯಾಚ್ ಮಾಡಿಕೊಳ್ಳಲು ಸಾಕಷ್ಟು ತಂತ್ರ ರೂಪಿಸಿದ್ದನ್ನು ಹೇಳಿಕೊಂಡರು. ಇಲ್ಲಿ ಬಹುತೇಕ ಅನುಭವಿ ಕಲಾವಿದರ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆ ಅಂದರು ಸೋನಿಕ.
ಚಿತ್ರಕ್ಕೆ ವಿನೋದ್ ಭಾರತಿ ಛಾಯಾಗ್ರಹಣವಿದೆ. ಸಿ.ಎಂ.ಮಹೇಂದ್ರ ಸಂಗೀತ ನೀಡಿದ್ದಾರೆ. ಉಳಿದಂತೆ ಡ್ಯಾನಿ ಕುಟ್ಟಪ್ಪ, ಕುರಿ ಪ್ರತಾಪ್, ಮಾಲತಿಶ್ರೀ ಇತರರು ನಟಿಸಿದ್ದಾರೆ.