Advertisement

‘ಅವನನ್ನೇ ಇಲ್ಲಿ ಬಂದು ನಿಲ್ಲೋಕೆ ಹೇಳಿ ಸರ್..’: ಆಪ್ತ ಮಿತ್ರರ ನಡುವೆ ಅಂದು ನಡೆದಿದ್ದೇನು?

07:59 PM Jul 03, 2020 | Hari Prasad |

ಬೆಂಗಳೂರು: 2006ರಲ್ಲಿ ತೆರೆಕಂಡು ಚಿತ್ರರಂಗದಲ್ಲಿ ದಾಖಲೆಗಳ ಸರಮಾಲೆಯನ್ನೇ ಬರೆದಿದ್ದ ‘ಮುಂಗಾರು ಮಳೆ’ ಚಿತ್ರದ ಕುರಿತು ಯಾರಿಗೆ ಗೊತ್ತಿಲ್ಲ ಹೇಳಿ.

Advertisement

ಈ ಚಿತ್ರದ ಮೂಲಕ ಯೋಗರಾಜ್ ಭಟ್ ಎಂಬ ವಿಭಿನ್ನ ನಿರ್ದೇಶಕ, ಚಿತ್ರ ಸಾಹಿತಿ ಹಾಗೂ ಕ್ರಿಯೇಟರ್ ಸ್ಯಾಂಡಲ್ ವುಡ್ ಗೆ ದಕ್ಕಿದರೆ, ಕಿರುತೆರೆಯಲ್ಲಿ ಕಾಮಿಡಿ ಟೈಮ್ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದ ಗಣೇಶ್ ಎಂಬ ಚಿಗುರು ಮೀಸೆಯ ಹುಡುಗ ರಾತ್ರೋ ರಾತ್ರಿ ಹುಡುಗಿಯರ ಕಣ್ಮಣಿಯಾಗಿಬಿಟ್ಟಿದ್ದ ಮಾತ್ರವಲ್ಲದೇ ಮುಂಗಾರು ಮಳೆ ಗಣೇಶ್ ಅವರನ್ನು ‘ಗೋಲ್ಡನ್ ಸ್ಟಾರ್’ ಪಟ್ಟಕ್ಕೆ ಏರಿಸಿತ್ತು.

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಗಣೇಶ್ ಅವರನ್ನು ಸೂಪರ್ ಸ್ಟಾರ್ ಪಟ್ಟಕ್ಕೇರಿಸಿದ್ದ ‘ಮುಂಗಾರು ಮಳೆ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಡೆದಿದ್ದ ಸನ್ನಿವೇಶ ಒಂದನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತವಾಗಬಹುದೇನೋ?

ಮುಂಗಾರು ಮಳೆ ಚಿತ್ರದ ಹೈಲೈಟ್ ಅಂದ್ರೆ ಜೋಗ ಜಲಪಾತ. ನಿರ್ದೇಶಕ ಭಟ್ರು ವಿಶ್ವ ವಿಖ್ಯಾತ ಜೋಗ ಜಲಪಾತವನ್ನು ಕರುನಾಡಿಗೆ ಇನ್ನೊಂದು ಆ್ಯಂಗಲ್ ನಲ್ಲಿ ತೋರಿಸುವ ಸಾಹಸವನ್ನು ತಮ್ಮ ಈ ಚಿತ್ರದಲ್ಲಿ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಈ ಚಿತ್ರದ ಸಿನೆಮಟೋಗ್ರಾಫರ್ ಕೃಷ್ಣ ಅವರಂತೂ ಜೋಗದ ರುದ್ರ ಭೀಕರ ಸೌಂದರ್ಯವನ್ನು ತಮ್ಮ ಕೆಮರಾ ಕೈಚಳಕದಲ್ಲಿ ತೋರಿಸಿದ್ದ ರೀತಿಗಂತೂ ಚಿತ್ರ ರಸಿಕರು ಬೆರಗಾಗಿ ಹೋಗಿದ್ದರು.

ಈ ಸನ್ನಿವೇಶದ ಶೂಟಿಂಗ್ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ಮುಂಗಾರು ಮಳೆ ಕೃಷ್ಣ ಅವರು ತಮ್ಮ ಸಂದರ್ಶನ ಒಂದರಲ್ಲಿ ರಸವತ್ತಾಗಿ ವರ್ಣಿಸಿದ್ದಾರೆ.

Advertisement

ಜೋಗ ಜಲಪಾತವನ್ನು ಈ ಹಿಂದಿನ ಎಲ್ಲಾ ಚಿತ್ರಗಳಲ್ಲಿ ಅದರ ಎದುರು ಭಾಗದಿಂದಲೇ ತೋರಿಸಲಾಗಿತ್ತು. ಮತ್ತು ಅದು ಸಾಮಾನ್ಯವಾಗಿ ನಾವೆಲ್ಲರೂ ನೋಡುವ ಜೋಗ ಜಲಪಾತವೇ ಪರದೆಯ ಮೇಲೂ ಕಾಣಿಸುತ್ತಿತ್ತು.


ಆದರೆ ಈ ಚಿತ್ರದಲ್ಲಿ ಭಟ್ರು ಜೋಗದ ಇನ್ನೊಂದು ಭಾಗವನ್ನು ನಮಗೆಲ್ಲಾ ತೋರಿಸುವ ಪ್ರಯತ್ನದಲ್ಲಿ ಗೆದ್ದಿದ್ದರು. ಇದು ಜೋಗ ಜಲಪಾತದ ನಾಲ್ಕು ಕವಲುಗಳು ಎತ್ತರದಿಂದ ಧುಮುಕುವ ಬಹಳ ಅಪಾಯಕಾರಿ ಜಾಗವಾಗಿತ್ತು. ಇಲ್ಲಿಂದ ಜೋಗ ಜಲಪಾತವನ್ನು ಬರ್ಡ್ಸ್ ಪಾಯಿಂಟ್ ಆಫ್ ವ್ಯೂನಲ್ಲಿ ಚಿತ್ರೀಕರಿಸಿ ಪ್ರೇಕ್ಷಕರಿಗೆ ತೋರಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿತ್ತು.

ಇಲ್ಲಿ ಶೂಟಿಂಗ್ ಮಾಡುವುದು ಸುಲಭದ ಮಾತೇನಾಗಿರಲಿಲ್ಲ, ಶರಾವತಿ ನದಿ ಬಂಡೆಗಳ ಮೇಲೆ ಹರಿದು ಬಂಡೆಯ ತುದಿಯಿಂದ ಜಲಪಾತವಾಗಿ ಧುಮ್ಮಿಕ್ಕುವ ಜಾಗದಲ್ಲೇ ನಾಯಕ ಹಾಗೂ ನಾಯಕಿ ನಿಲ್ಲುವ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ಈ ತಮಾಷೆಯ ಘಟನೆ ನಡೆದಿತ್ತು ಎಂಬುದನ್ನು ಕೃಷ್ಣ ಅವರು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು.

ಈ ದೃಶ್ಯದ ಚಿತ್ರೀಕರಣ ಸಂದರ್ಭದಲ್ಲಿ ಪ್ರೀತಂ ಗುಬ್ಬಿ ಹಾಗೂ ನಾಯಕ ನಟ ಗಣೇಶ್ ನಡುವೆ ಸಣ್ಣದೊಂದು ಕಿತ್ತಾಟ ನಡೆದಿತ್ತು. ಬಂಡೆಯೊಂದರ ತುದಿಯಲ್ಲಿ ಗಣೇಶ್ ನಿಂತಿದ್ದಾರೆ, ಒಂದಷ್ಟು ದೂರದಲ್ಲಿ ನಿರ್ದೇಶಕರು, ಪ್ರೀತಂ ಸಹಿತ ಚಿತ್ರತಂಡ ಚಿತ್ರೀಕರಣಕ್ಕೆ ಸಿದ್ಧವಾಗಿ ನಿಂತಿತ್ತು.

ಈ ಸಂದರ್ಭದಲ್ಲಿ ಬಂಡೆಯ ತುದಿಯಲ್ಲಿ ಉಸಿರು ಬಿಗಿಹಿಡಿದು ನಿಂತಿದ್ದ ಗಣೇಶ್ ಅವರನ್ನು ನೋಡಿದ ಪ್ರೀತಂ ‘ಸರ್ ಎಮೋಷನ್ ಇಲ್ಲ ಅಂತ ಹೇಳಿ..’ ಎಂದು ಗಟ್ಟಿಯಾಗಿ ಗಣೇಶ್ ಗೆ ಕೇಳುವಂತೆ ಪಕ್ಕದಲ್ಲೇ ಕುಳಿತಿದ್ದ ಭಟ್ರಿಗೆ ಹೇಳುತ್ತಾರೆ!

ಇದಕ್ಕೆ ಕೌಂಟರ್ ಆಗಿ ಆ ತುದಿಯಲ್ಲಿದ್ದ ಗಣೇಶ್ ಅವರು ‘ಇಲ್ಲಿ ಬಂದು ನಿಂತ್ಕೊಳೋಕೆ ಹೇಳಿ ಸರ್ ಅವ್ನಿಗೆ, ಎಮೋಷನ್ ಅಲ್ಲ, ಏನೂ ಬರಲ್ಲ ಅಂತ ಹೇಳಿ..!’ ಅಂತ ಕಿರುಚುತ್ತಾರೆ.

ಈ ಇಬ್ಬರು ಕುಚುಕು ಗೆಳೆಯರ ಗಲಾಟೆಯನ್ನು ಭಟ್ರು, ಕೃಷ್ಣ ಅವರ ಸಹಿತ ಅಲ್ಲಿದ್ದವರಲ್ಲಾ ಎಂಜಾಯ್ ಮಾಡಿದ್ದರಂತೆ. ಆ ಅಪಾಯಕಾರಿ ಬಂಡೆಯ ತುದಿಯಲ್ಲಿ ಗಣೇಶ್ – ಪೂಜಾ ಗಾಂಧಿ ಸುಮಾರು ಎರಡು ಗಂಟೆಗಳ ಕಾಲ ನಿಂತಿದ್ದರು ಮತ್ತು ನಾವು ನಮಗೆ ಬೇಕಾದ ಶಾಟ್ಸ್ ಎಲ್ಲಾ ನೀಟಾಗಿ ಶೂಟ್ ಮಾಡಿಕೊಂಡೆವು ಎಂಬುದನ್ನು ಕೆಮರಾಮ್ಯಾನ್ ಕೃಷ್ಣ ಅವರು ನೆನಪಿಸಿಕೊಂಡಿದ್ದಾರೆ.

ಹೀಗೆ ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಇಂತಹ ಹಲವು ರಸವತ್ತಾದ ಘಟನೆಗಳು ನಡೆದಿರುವುದನ್ನು ಚಿತ್ರತಂಡದವರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇಂದು ಗೋಲ್ಡನ್ ಸ್ಟಾರ್ ಹುಟ್ಟುಹಬ್ಬವಾದ ಕಾರಣ ಈ ಒಂದು ಫನ್ನಿ ಘಟನೆ ಮತ್ತೆ ನೆನಪಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next