ಅಲ್ಲಿಗೆ ಹೋದವರಿಗೆ ಮೊದಲು ದರ್ಶನವಾಗಿದ್ದು ಗಣೇಶ. ಸುತ್ತಲೂ ಬಣ್ಣ ಬಣ್ಣದ ಕಾಗದ, ಹಿಂದೆ, ಮುಂದೆ ಬಾವುಟಗಳು, ಎಲ್ಲೆಡೆ ಹರಡಿಕೊಂಡಿದ್ದ ಬಗೆ ಬಗೆಯ ಬಣ್ಣ. ಆ ವಾತಾವರಣ ಗಣೇಶ ಹಬ್ಬದಂತೆಯೇ ಪರಿವರ್ತನೆಗೊಂಡಿತ್ತು. ಹತ್ತಿರ ಹೋದಾಗ, ಡ್ಯಾನ್ಸ್ ಮಾಸ್ಟರ್ ಧನು, ನಾಯಕಿ ಮತ್ತು ನೃತ್ಯಕಲಾವಿದರಿಗೆ ಸ್ಟೆಪ್ ಹೇಳಿಕೊಡುತ್ತಿದ್ದರು. ಅದು “ಝಾನ್ಸಿ’ ಚಿತ್ರೀಕರಣದ ಸೆಟ್. ಅಲ್ಲಿಗೆ ಹೋದ ಸ್ವಲ್ಪ ಸಮಯದಲ್ಲೇ ಸಣ್ಣದ್ದೊಂದು ಬ್ರೇಕ್ ಕೊಟ್ಟರು ಡ್ಯಾನ್ಸ್ ಮಾಸ್ಟರ್. ನಂತರ ಚಿತ್ರತಂಡ ಮಾತಿಗೆ ಕುಳಿತುಕೊಂಡಿತು.
ಮೊದಲು ನಿರ್ದೇಶಕ ಗುರುಪ್ರಸಾದ್ ಮಾತು ಶುರು ಮಾಡಿದರು. “ಇದು ನಾಯಕಿಯನ್ನು ಪರಿಚಯಿಸುವ ಹಾಡು. ಗಣೇಶ ಉತ್ಸವ ನಡೆಯುವ ವೇಳೆ ನಾಯಕಿ ಬಂದು ಸ್ಟೆಪ್ ಹಾಕುವ ದೃಶ್ಯ ಕಳೆದ ಎರಡು ದಿನಗಳಿಂದ ಚಿತ್ರೀಕರಣವಾಗುತ್ತಿದೆ. ಇನ್ನೆರೆಡು ದಿನಗಳಲ್ಲಿ ಹಾಡು ಪೂರ್ಣಗೊಳ್ಳುತ್ತೆ. ಇದು ಬೆಂಗಳೂರಿನಲ್ಲಿ ನಡೆದ ಒಂದು ನೈಜ ಘಟನೆ ಇಟ್ಟುಕೊಂಡು ಮಾಡುತ್ತಿರುವ ಚಿತ್ರ.
ಬೆಂಗಳೂರಲ್ಲಿ ಹಿಂದೆ ಒಂದು ಬಾಂಬ್ ಪ್ರಕರಣ ನಡೆದಿತ್ತು. ಅದನ್ನೇ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೇನೆ. ಝಾನ್ಸಿ ಸ್ಲಂನಲ್ಲಿ ವಾಸಿಸುವ ಹುಡುಗಿ. ಪಕ್ಕಾ ಗಂಡುಬೀರಿ ಆಕೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಹುಡುಗಿ. ಇಲ್ಲಿ ಡ್ರಗ್ಸ್ ಮಾಫಿಯಾ ವಿಷಯವೂ ಇದೆ. ಕೆಲ ಪುಡಿರೌಡಿಗಳನ್ನು ಪುಡಿಗೊಳಿಸಿ, ಒಂದಷ್ಟು ಮಾಫಿಯಾದವರನ್ನು ಬಗ್ಗುಬಡಿಯೋ ಝಾನ್ಸಿ ಯಾರೆಂಬುದನ್ನು ಸಿನಿಮಾದಲ್ಲಿ ನೋಡಬೇಕು. ಇದೊಂದು ಪಕ್ಕಾ ಆ್ಯಕ್ಷನ್ ಇರುವ ಚಿತ್ರ’ ಎಂದು ಮಾಹಿತಿ ಕೊಟ್ಟರು ಗುರುಪ್ರಸಾದ್.
ನಾಯಕಿ ಲಕ್ಷ್ಮೀ ರೈ ಅಂದು ಕಲರ್‌ಫುಲ್ ಆಗಿದ್ದರು. ಕಾರಣ, ಗಣೇಶ ಹಬ್ಬದ ಹಾಡಿಗೆ ಸ್ಟೆಪ್ ಹಾಕುತ್ತಿದ್ದರಿಂದ ಬಟ್ಟೆ ಮೇಲೆಲ್ಲಾ ಬಣ್ಣ ಹಚ್ಚಲಾಗಿತ್ತು.
ಹಾಗಾಗಿ ಕಲರ್‌ಫುಲ್ ಆಗಿದ್ದರು. ಮಾತಿಗಿಳಿದ ಲಕ್ಷ್ಮೀ ರೈ, “ಹಲವು ಚಿತ್ರಗಳಲ್ಲಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದೇನೆ. ಈಗ ಸ್ಲಂ ಹುಡುಗಿ ಅದರಲ್ಲೂ
ಪಕ್ಕಾ ಮಾಸ್ ಕಥೆಯಲ್ಲಿ ನಟಿಸುತ್ತಿದ್ದೇನೆ. ಇದೊಂದು ಹೊಸ ಬಗೆಯ ಚಿತ್ರ. ಆ್ಯಕ್ಷನ್ ಜಾಸ್ತಿ ಇದೆ. ಅದಕ್ಕೆ ತರಬೇತಿ ಪಡೆಯುತ್ತಿದ್ದೇನೆ. ಅಭಿನಯಕ್ಕೂ ಹೆಚ್ಚು ಒತ್ತು ಇದೆ. ನಾನು ಗಣೇಶನ ಭಕ್ತೆ. ಇಲ್ಲೂ ನನಗೆ ಗಣೇಶನ ಹಾಡಿಗಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ ಬೇಸಿಕಲಿ ನನಗೆ ಡ್ಯಾನ್ಸ್ ಇಷ್ಟ. ಒಳ್ಳೇ ಹಾಡು ಸಿಕ್ಕಿದೆ. ಅದಕ್ಕೆ ತಕ್ಕ ಸ್ಟೆಪ್ ಕೂಡ ಹಾಕಿಸಿದ್ದಾರೆ. ಇನ್ನು, ಚಿತ್ರದುದ್ದಕ್ಕೂ ಒಂದು ದುಷ್ಟಶಕ್ತಿಯ ವಿರುದಟಛಿ ಹೋರಾಡುವಂತಹ ಪಾತ್ರ
ನನ್ನದು. ಸಿನಿಮಾ ಈಗಷ್ಟೇ ಶುರುವಾಗಿದೆ. ಒಳ್ಳೆಯ ತಂಡ ಜೊತೆಗಿದೆ. ಇದು ನನ್ನ ಕೆರಿಯರ್‌ನಲ್ಲಿ ಬೇರೆ ರೀತಿಯ ಚಿತ್ರವಾಗಲಿದೆ ಅಂದರು ಲಕ್ಷ್ಮೀ ರೈ.
ಮುಂಬೈ ಮೂಲದ ರಾಜೇಶ್‌ಕುಮಾರ್ ಚಿತ್ರದ ನಿರ್ಮಾಪಕರು. ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಒಳ್ಳೆಯ ಕಥೆ ಇದ್ದರೆ, ಸೌತ್‌ನಲ್ಲೊಂದು ಚಿತ್ರ ಮಾಡುವ ಆಸೆ ನಿರ್ಮಾಪಕರಿಗಿತ್ತಂತೆ. ಆಗ ಸಿಕ್ಕಿದ್ದೇ “ಝಾನ್ಸಿ’ ಕಥೆ ಎಂಬುದು ರಾಜೇಶ್‌ಕುಮಾರ್ ಮಾತು. ಈ ಚಿತ್ರದ ಹಾಡಲ್ಲಿ ರವೀಂದ್ರ ಎಂಬ ಹೊಸ ಪ್ರತಿಭೆ ಕೂಡ ಕಾಣಿಸಿಕೊಂಡಿದೆ. ಎಲ್ಲರ ಮಾತುಕತೆ ಮುಗಿಯುತ್ತಿದ್ದಂತೆಯೇ, ಅತ್ತ ಡ್ಯಾನ್ಸ್ ಮಾಸ್ಟರ್ ಮೈಕ್‌ನಲ್ಲಿ “ಬಾಯ್ಸ ರೆಡಿ…’ ಅನ್ನುತ್ತಿದ್ದಂತೆಯೇ ಮತ್ತದೇ ಹಾಡು ಶುರುವಾಯ್ತು. ನಾಯಕಿ ಲಕ್ಷ್ಮೀ ರೈ ಕ್ಯಾಮೆರಾ ಮುಂದೆ ಹೋಗಿ ನಿಂತರು.
ವಿಜಯ್ ಭರಮಸಾಗರ