Advertisement

ಗಣೇಶ್‌ 99 ಕನಸು

10:56 AM May 01, 2019 | Lakshmi GovindaRaju |

“99…’ ಸಕ್ಸಸ್‌ ಕಾಂಬಿನೇಷನ್‌ನ ಮತ್ತೂಂದು ಚಿತ್ರವಿದು. ಗಣೇಶ್‌ ಮತ್ತು ಭಾವನಾ ಈಗಾಗಲೇ “ರೊಮಿಯೋ’ ಎಂಬ ಯಶಸ್ಸಿನ ಚಿತ್ರ ಕೊಟ್ಟವರು. ನಿರ್ದೇಶಕ ಪ್ರೀತಂ ಗುಬ್ಬಿ ಮತ್ತು ಗಣೇಶ್‌ ಕಾಂಬಿನೇಷನ್‌ನಲ್ಲಿ “ಮಳೆಯಲಿ ಜೊತೆಯಲಿ’ ಕೂಡ ಯಶಸ್ಸು ಪಡೆದಿತ್ತು.

Advertisement

ಈಗ ಅದೇ ಸಕ್ಸಸ್‌ ಕಾಂಬಿನೇಷನ್‌ನಲ್ಲಿ “99′ ಬಿಡುಗಡೆಯಾಗುತ್ತಿದೆ. ಗಣೇಶ್‌ ಮತ್ತು ಭಾವನಾ ನಾಯಕ, ನಾಯಕಿಯಾಗಿರುವ ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶನ ಮಾಡಿದ್ದಾರೆ. ರಾಮು ನಿರ್ಮಾಪಕರು. “99′ ವಿಶೇಷವೆಂದರೆ, ಮೇ 1 ರಂದು ಬಿಡುಗಡೆಯಾಗುತ್ತಿದೆ. ಆ ಕುರಿತು ಗಣೇಶ್‌ ಜೊತೆ ಚಿಟ್‌ಚಾಟ್‌.

* “99′ ಬಿಡುಗಡೆ ಬಗ್ಗೆ?
“99′ ನನ್ನ ವೃತ್ತಿ ಜೀವನದಲ್ಲಿ ಬೇರೆ ತರಹದ ಚಿತ್ರ. ಅದರಲ್ಲೂ ಇಷ್ಟು ವರ್ಷಗಳಲ್ಲಿ ನನ್ನ ಅಭಿನಯದ ಯಾವ ಚಿತ್ರವೂ ಬುಧವಾರ ಬಿಡುಗಡೆಯಾಗಿರಲಿಲ್ಲ. “99′ ಮೇ. 1 ರ ಬುಧವಾರ ರಿಲೀಸ್‌ ಆಗುತ್ತಿದೆ ಎಂಬುದೇ ವಿಶೇಷ. ಅಂದು ಕಾರ್ಮಿಕರ ದಿನ. ಕಾರ್ಮಿಕರೆಲ್ಲರೂ ಸೇರಿ ಮಾಡಿದ ಚಿತ್ರ ಅಂದೇ ಪ್ರದರ್ಶನವಾಗುತ್ತಿರುವುದಕ್ಕೆ ಹೆಮ್ಮೆ ಇದೆ.

* ಸಿನಿಮಾ ಕುರಿತು ಹೇಳುವುದಾದರೆ?
ಇದು ರಿಯಲಿಸ್ಟಿಕ್‌ ಸಿನಿಮಾ. ಎಲ್ಲರ ಜೀವನದಲ್ಲೂ ಇದು ನಮ್ಮ ಕಥೆ ಎಂದೆನಿಸುವ ಚಿತ್ರ. ಇಲ್ಲಿ ಸ್ಟಾರ್‌ಡಮ್‌, ಭರ್ಜರಿ ಆ್ಯಕ್ಷನ್‌, ಇಂಟ್ರೊಡಕ್ಷನ್‌ ಹೊರತಾಗಿರುವ ಚಿತ್ರ. ನಿರ್ದೇಶಕ ಪ್ರೀತಂ ಬಹಳ ಸಲ ಹೇಳುತ್ತಲೇ ಇದ್ದ ಈ ಚಿತ್ರ ನೋಡು, ಚೆನ್ನಾಗಿದೆ ಮಾಡೋಣ ಅಂತ. ನಾನು ನೋಡಿದಾಗ ಅನಿಸಿದ್ದು, ಕಥೆ ಮತ್ತು ಪಾತ್ರ ಎಲ್ಲವೂ ವಿಶೇಷ ಎನಿಸಿತು. ಎಲ್ಲವೂ ನೈಜವಾಗಿಯೇ ಇರಬೇಕು ಅಂದುಕೊಂಡೆ ಇಲ್ಲಿ ಅಭಿನಯವಿಲ್ಲ. ಬದಲಾಗಿ, ನೋಡುಗರಿಗೆ ಅಲ್ಲಿ ಕಾಣೋದು ನಾನು, ಅದು ನನ್ನ ಕಥೆ ಎನಿಸುವಷ್ಟರ ಮಟ್ಟಿಗೆ ಮೂಡಿಬಂದಿದೆ. ನನ್ನ ಪ್ರಕಾರ ನನಗಿದು ಹೊಸ ಪ್ರಯೋಗಾತ್ಮಕ ಚಿತ್ರ.

* ಗಣೇಶ್‌ರನ್ನ ಇಷ್ಟಪಡುವರಿಗೆ ದಾಡಿ ಬೇಸರ ತರಿಸಲ್ಲವೇ?
ಏನ್ಮಾಡ್ಲಿ. ಕಥೆ ಮತ್ತು ಪಾತ್ರಕ್ಕೆ ಅದು ಬೇಕಾಗಿತ್ತು. ಆ ಪಾತ್ರವೇ ಅಂಥದ್ದು. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಲೆಮಾರಿ ಪಾತ್ರ. ಅವನೊಬ್ಬ ಟ್ರಾವೆಲ್‌ ಫೋಟೋಗ್ರಾಫ‌ರ್‌. ಫೋಟೋಗ್ರಫಿ ಹೇಗೆ ಮಾಡುವುದು ಎಂದು ಸಲಹೆ ಕೊಡುವವನ ಜೀವನದ ಕಥೆ. ಆ ಕಥೆ ಪ್ರತಿಯೊಬ್ಬರಿಗೂ ರಿಲೇಟ್‌ ಆಗುವಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ. ಸಿನಿಮಾ ನೋಡಿದವರಿಗೆ ತಮ್ಮ ಸ್ಕೂಲ್‌ ಡೇಸ್‌ ನೆನಪಾಗುತ್ತದೆ.

Advertisement

* ರಾಮು ಅವರೊಂದಿಗೆ ಮೊದಲ ಚಿತ್ರ?
ಹೌದು, ರಾಮು ಅಂದರೆ ಇಂಡಸ್ಟ್ರಿಯಲ್ಲಿ ಕೋಟಿ ನಿರ್ಮಾಪಕ ಎಂಬುದು ನೆನಪಾಗುತ್ತದೆ. ಮೊದಲ ಬಾರಿಗೆ ಅವರ ಬ್ಯಾನರ್‌ನಲ್ಲಿ ಕೆಲಸ ಮಾಡಿದ್ದೇನೆ. ತುಂಬ ಒಳ್ಳೆಯ ಪ್ರೊಡಕ್ಷನ್‌ ಅವರದು. ಅವರು ಆ್ಯಕ್ಷನ್‌ ಚಿತ್ರ ಮಾಡಿಕೊಂಡು ಬಂದವರು. ಇಂತಹ ಹೊಸತನದ ಚಿತ್ರ ಮಾಡುತ್ತಾರೆ ಅಂದಾಗ, ಅಲ್ಲೇನೋ ವಿಶೇಷ ಇದೆ ಎಂದೆನಿಸಿ ಮಾಡಿದ್ದೇನೆ. ಇಲ್ಲಿ ಎಲ್ಲರಿಗೂ ಹೊಸ ರೀತಿಯ ಚಿತ್ರ ಮಾಡಿರುವ ಖುಷಿ ಇದೆ.

* ಮೂಲ ಚಿತ್ರಕ್ಕೂ ಇಲ್ಲಿಗೂ ಬದಲಾವಣೆ ಏನಿದೆ?
ಈಗಾಗಲೇ ಸಾಬೀತಾಗಿರುವ ಚಿತ್ರವಿದು. ಕನ್ನಡಕ್ಕೆ ಮಾಡುವಾಗ, ಇಲ್ಲಿನ ಆತ್ಮ ಇಲ್ಲವೆಂದರೆ ಹೇಗೆ. ಕನ್ನಡಕ್ಕೆ ಬೇಕಾಗಿದ್ದೆಲ್ಲವೂ ಇಲ್ಲಿದೆ. ಅಪ್ಪಟ ಕನ್ನಡಿಗರಿಗೆ ಇಷ್ಟವಾಗುವ ಎಲ್ಲಾ ಅಂಶಗಳೂ ಇಲ್ಲಿವೆ.

* ತುಂಬಾ ಬೇಗ ಮುಗಿದು ರಿಲೀಸ್‌ ಆಗುತ್ತಿದೆ?
ಹೌದು, ಈ ಚಿತ್ರ ಮಾಡಬೇಕು ಅಂತ ಡಿಸೈಡ್‌ ಆದಾಗ, ಎಲ್ಲರೂ ಒಂದು ನಿರ್ಧಾರಕ್ಕೆ ಬಂದೆವು. ಆದಷ್ಟು ಬೇಗ ಚಿತ್ರವನ್ನು ಬೇಗ ಮಾಡಿ ಮುಗಿಸಿ, ಬಿಡುಗಡೆ ಮಾಡಬೇಕು ಅಂತ. ಎಲ್ಲವೂ ಅಂದುಕೊಂಡಂತೆಯೇ ನಡೆದಿದೆ. ಸುಮಾರು 40 ದಿನಗಳ ಕಾಲ ಕೆಲಸ ಮಾಡಿದ್ದೇವೆ. ಕೆಲಸ ಫಾಸ್ಟ್‌ ಆಗಿದ್ದರೂ, ಚಿತ್ರ ಫ್ರೆಶ್‌ ಆಗಿ ಅದ್ಧೂರಿಯಾಗಿಯೇ ಮೂಡಿಬಂದಿದೆ.

* ಈಗಾಗಲೇ ಸಾಂಗ್ಸ್‌ ಹಿಟ್‌ ಆಗಿವೆ?
ಹೌದು, ಸಾಂಗ್ಸ್‌ ಕೇಳಿದವರಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಟ್ರೇಲರ್‌ ನೋಡಿದವರೂ ಸಹ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಅರ್ಜುನ್‌ ಜನ್ಯ ಅವರ 100 ನೇ ಚಿತ್ರವಿದು. ಇಂಡಸ್ಟ್ರಿಯಲ್ಲಿ 99 ಅವರ ಹೊಸ ಮೈಲಿಗಲ್ಲು. ಈ ಚಿತ್ರ ಕೂಡ 100 ದಿನ ಪೂರೈಸಲಿ ಎಂಬ ಆಶಯ ನನ್ನದು.

* 99 ಆಯ್ತು ಮುಂದಾ?
“ಗಿಮಿಕ್‌’ ಬಿಡುಗಡೆಯ ತಯಾರಿಯಲ್ಲಿದೆ. ಇನ್ನು, “ವೇರ್‌ ಈಸ್‌ ಮೈ ಕನ್ನಡಕ’ ಚಿತ್ರದ ಚಿತ್ರೀಕರನಕ್ಕಾಗಿ ಮೇ. 10 ರಂದು ವಿದೇಶಕ್ಕೆ ಹೊರಡಲಿದ್ದೇನೆ. “ಗೀತಾ’ ಎರಡು ಹಾಡುಗಳು ಬಾಕಿ ಉಳಿದಿವೆ. ಜೊತೆಗೆ ಮೂರ್‍ನಾಲ್ಕು ಚಿತ್ರಗಳ ಮಾತುಕತೆಯೂ ನಡೆಯುತ್ತಿದೆ. ತೆಲುಗು ನಿರ್ದೇಶಕರೊಬ್ಬರು ಹೇಳಿದ ಹೊಸದೊಂದು ಕಥೆ ಕೇಳಿದ್ದೇನೆ. ತುಂಬ ಫ್ರೆಶ್‌ ಆಗಿದೆ. ಮೌಲ್ಯ ಇರುವಂತಹ ಚಿತ್ರ ಆಗಲಿದೆ. ಆ ಕುರಿತು ಇನ್ನಷ್ಟೇ ಮಾತುಕತೆ ಅಂತಿಮವಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next