“ಹುಲಿ’, “ಹೆಬ್ಬುಲಿ’, “ಪಡ್ಡೆಹುಲಿ’ ಹೀಗೆ ಹುಲಿಯ ಹೆಸರನ್ನು ಟೈಟಲ್ ಆಗಿಟ್ಟುಕೊಂಡು ಬಂದ ಬಹುತೇಕ ಆ್ಯಕ್ಷನ್ ಸಿನಿಮಾಗಳು ಸ್ಯಾಂಡಲ್‌ವುಡ್ ಸೌಂಡ್ ಮಾಡಿದ್ದು ನಿಮಗೆ ಗೊತ್ತಿರಬಹುದು. ಈಗ ಅಂಥದ್ದೇ ಟೈಟಲ್‌ನಲ್ಲಿ “ಗಂಡುಲಿ’ ಎಂಬ ಆ್ಯಕ್ಷನ್ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗಿದೆ. ಯುವ ನಟ ವಿನಯ್ ರತ್ನಸಿದ್ಧಿ ನಾಯಕನಾಗಿ ಅಭಿನಯಿಸಿರುವ ಈ ಚಿತ್ರ ಇದೇ ಏಪ್ರಿಲ್. 22ಕ್ಕೆ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.
ಚಿತ್ರದ ಬಗ್ಗೆ ಮಾತನಾಡುವ ನಾಯಕ ನಟ ವಿನಯ್ ರತ್ನಸಿದ್ಧಿ, “ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಂ ಫ್ಯಾಮಿಲಿ ಕಂಟೆಂಟ್ ಸಿನಿಮಾ. ಒಂದು ಊರಿನಲ್ಲಿ ಕೆಲವರು ಊರು ಬಿಟ್ಟು ಹೋಗುತ್ತಿರುತ್ತಾರೆ. ಇನ್ನು ಕೆಲವರು ನಿಗೂಢವಾಗಿ ಕಾಣೆಯಾಗುತ್ತಿರುತ್ತಾರೆ. ಇದೇ ವೇಳೆ ಊರಿಗೆ ಸರ್ವೆಗೆ ಬರುವ ಪುರಾತತ್ವ ಇಲಾಖೆಯ ನಾಲ್ವರು ಕೂಡ ಇದ್ದಕ್ಕಿದ್ದಂತೆ ಕಾಣೆಯಾಗುತ್ತಾರೆ. ಯಾಕೆ ಹೀಗೆ ಒಬ್ಬೊಬ್ಬರೇ ನಾಪತ್ತೆಯಾಗುತ್ತಾರೆ, ಅದರ ಹಿಂದಿನ ಕಾರಣವೇನು? ನಾಯಕ ಅದನ್ನು ಹೇಗೆ ಭೇದಿಸುತ್ತಾನೆ ಅನ್ನೋದೆ ಸಿನಿಮಾದ ಕಥೆಯ ಒಂದು ಎಳೆ’ ಎಂದು ಚಿತ್ರದ ಕಥಾಹಂದರ ಬಿಚ್ಚಿಡುತ್ತಾರೆ.
ಇನ್ನು “ಗಂಡುಲಿ’ ಚಿತ್ರದಲ್ಲಿ ನಾಯಕ ವಿನಯ್ ರತ್ನಸಿದ್ಧಿ, ಊರಿನ ದಿವಾನರ ಕುಟುಂಬದ ಹುಡುಗನಾಗಿ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಹೀರೋ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಈಗಾಗಲೇ ರಿಲೀಸ್ ಆಗಿರುವ “ಗಂಡುಲಿ’ ಸಿನಿಮಾದ ಟ್ರೇಲರ್, ಸಾಂಗ್ಸ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದ ಡಿಜಿಟಲ್ ರೈಟ್ಸ್ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿದ್ದು, ಡಬ್ಬಿಂಗ್ ರೈಟ್ಸ್, ಥಿಯೇಟರ್ ರೈಟ್ಸ್‌ಗೂ ಉತ್ತಮ ಬೇಡಿಕೆ ಬರುತ್ತಿದೆ. ಚಿತ್ರರಂಗದಿಂದಲೂ ಸಿನಿಮಾಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿರುವುದರಿಂದ, ಥಿಯೇಟರ್ ನಲ್ಲೂ ಆಡಿಯನ್ಸ್‌ಗೆ “ಗಂಡುಲಿ’ ಇಷ್ಟವಾಗಲಿದೆ’ ಎಂಬ ಭರವಸೆಯ ಮಾತು ನಾಯಕ ವಿನಯ್ ರತ್ನಸಿದ್ಧಿ ಅವರದ್ದು.
ಇದನ್ನೂ ಓದಿ:‘ತೋತಾಪುರಿ’ ಟ್ರೇಲರ್ ಗೆ ಕಿಚ್ಚನ ಸಾಥ್
“ಗಂಡುಲಿ’ ಚಿತ್ರದಲ್ಲಿ ವಿನಯ್ ರತ್ನಸಿದ್ದಿ ಅವರಿಗೆ ಛಾಯಾದೇವಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ನಾಯಕನ ತಾಯಿಯ ಪಾತ್ರದಲ್ಲಿ ಸುಧಾ ನರಸಿಂಹರಾಜು ಕಾಣಿಸಿಕೊಂಡಿದ್ದು, ಉಳಿದಂತೆ, ಶಿವಮೊಗ್ಗ ರಾಮಣ್ಣ, ಸುಬ್ಬೆಗೌಡ್ರು, ಶಿವು, ವಿಜಯ, ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ರಾಜು ಶಿವಶಂಕರ್ ಛಾಯಾಗ್ರಹಣ, ಆನಂದ್ ಇಳಿಯರಾಜು ಸಂಗೀತವಿದೆ. ಒಟ್ಟಾರೆ ಸ್ಯಾಂಡಲ್‌ವುಡ್ ಅಂಗಳಲ್ಲಿ ಒಂದಷ್ಟು ಸೌಂಡ್ ಮಾಡುತ್ತಿರುವ “ಗಂಡುಲಿ’ ಅಬ್ಬರ ಥಿಯೇಟರ್‌ನಲ್ಲಿ ಹೇಗಿರಲಿದೆ ಅನ್ನೋದು ಮುಂದಿನ ವಾರದ ವೇಳೆಗೆ ಗೊತ್ತಾಗಲಿದೆ.