ರೆ.
ನಮಗೆಲ್ಲ ಗೊತ್ತಿರುವಂತೆ, ಗಾಂಧಿ ಈ ಆತ್ಮಕಥನವನ್ನು ಒಂದು “ಪುಸ್ತಕ’ವಾಗಿ ಬರೆದಿದ್ದಲ್ಲ; 1925ರಿಂದ 1929ರವರೆಗೆ 166 ಕಂತುಗಳಲ್ಲಿ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾದ “ಧಾರಾವಾಹಿ’ ಇದು. ಇವತ್ತಿನ ಹಲವು ಟಿವಿ ಧಾರಾವಾಹಿಗಳಿಗೂ ಮತ್ತು ಈ ಗಾಂಧಿ-ಧಾರಾವಾಹಿಗೂ ನಡುವೆ ಒಂದು ಕ್ಷುಲ್ಲಕ ಸಾಮ್ಯ ಇದೆ. ನಮ್ಮ ಧಾರಾವಾಹಿಗಳಂತೆಯೇ ಗಾಂಧಿಯವರೂ ಈ ಕಂತುಗಳನ್ನು ಆವತ್ತವತ್ತು ಬರೆಯುತ್ತ ಹೋದರೆ ಹೊರತು, ಮುಂದೆ ಏನು ಬರೆಯಬೇಕೆಂಬುದನ್ನಾಗಲೀ, ಇಡಿಯ ಪುಸ್ತಕ ಹೇಗೆ ರೂಪುಗೊಳ್ಳಬೇಕು ಎಂಬುದನ್ನಾಗಲೀ ಮಾತ್ರವಲ್ಲ , ಈ ಕಥಾನಕವನ್ನು ಎಲ್ಲಿಗೆ ಕೊಂಡೊಯ್ದು ನಿಲ್ಲಿಸಬೇಕು ಎಂಬುದನ್ನೂ ಯೋಜಿಸಿ ಬರೆಯಲಿಲ್ಲ. ಆದರೆ, ಈಗ ಪ್ರಕಟವಾಗಿರುವ ಆ ಪುಸ್ತಕದ ಸರಿಸುಮಾರು ನಡುಭಾಗಕ್ಕೆ ಬರುತ್ತಿದ್ದಂತೆ ಗಾಂಧಿ, ಈ ಬರಹವನ್ನು ತಾನು ಬರೆಯುತ್ತಿರುವ ಕ್ರಮ ಯಾವುದು ಎಂಬ ಅನಿರೀಕ್ಷಿತ ಪ್ರಸ್ತಾಪವನ್ನು ಎತ್ತಿಕೊಂಡಿದ್ದಾರೆ.
Advertisement
ಗೋರೂರು ರಾಮಸ್ವಾಮಿ ಅಯ್ಯಂಗಾರರು ಕನ್ನಡೀಕರಿಸಿದ ಆವೃತ್ತಿಯಿಂದ ಗಾಂಧಿ ಮಾತುಗಳನ್ನೇ ಉಲ್ಲೇಖೀಸುವುದಾದರೆ-ಈ ಕಥೆ ವಾರವಾರವೂ ಹೇಗೆ ಬರೆಯಲ್ಪಡುತ್ತಿದೆ ಎಂಬುದನ್ನು ವಾಚಕರಿಗೆ ವಿವರಿಸುವ ಆವಶ್ಯಕತೆ, ಈ ಅಧ್ಯಾಯವನ್ನು ಬರೆಯುತ್ತ ಉಂಟಾಗಿದೆ. ಇದನ್ನು ಬರೆಯಲು ಪ್ರಾರಂಭಿಸಿದಾಗ, ಇದನ್ನು ಹೇಗೆ ಬರೆಯಬೇಕೆಂಬ ವಿಷಯದಲ್ಲಿ ನನ್ನ ಮುಂದೆ ಯಾವ ಯೋಜನೆಯೂ ಇರಲಿಲ್ಲ. ನನ್ನಲ್ಲಿ, ಈ ಪ್ರಯೋಗಗಳ ಕಥೆಗೆ ಆಧಾರವಾದ ದಿನಚರಿಯಾಗಲೀ ಕಾಗದಪತ್ರಗಳಾಗಲೀ ಇಲ್ಲ. ಬರೆಯಲು ಕುಳಿತಾಗ ಅಂತರಾತ್ಮ ಪ್ರೇರಿಸಿದಂತೆ ನಾನು ಬರೆದಿದ್ದೇನೆ.
Related Articles
Advertisement
ನನ್ನ ಮೇಲಿರುವ ಜವಾಬ್ದಾರಿಯ ಭಾರವು ನನ್ನನ್ನು ಹಿಚುಕುತ್ತಿತ್ತು. ಆದರೆ ಆಗ ನಾನೊಂದು ದನಿ ಕೇಳಿದೆ- ದೂರದಲ್ಲಿದ್ದರೂ ಹತ್ತಿರವೆಂಬಂತೆ ಕೇಳಿದ ದನಿ ಅದು. ಯಾವ ಅನುಮಾನಕ್ಕೂ ಆಸ್ಪದವಿಲ್ಲದಂತೆ ನನ್ನನ್ನೇ ಉದ್ದೇಶಿಸಿ ಆಡಿದಂಥ ಮನುಷ್ಯಧ್ವನಿಯಂತಿದ್ದ ಆ ಮಾತನ್ನು ನಾನು ಕೇಳದೆ ಇರುವುದು ಅಸಾಧ್ಯವಾಗಿತ್ತು. ಈ ಧ್ವನಿಯನ್ನು ಕೇಳುವಾಗ ನಾನು ಕನಸು ಕಾಣುತ್ತಿರಲಿಲ್ಲ. ಇಂಥ ಧ್ವನಿಯೊಂದು ಕೇಳುವ ಮೊದಲು ನನ್ನೊಳಗೆ ಮನೋಸಂಘರ್ಷ ನಡೆದಿತ್ತು; ಆಗ ಇದ್ದಕ್ಕಿದ್ದಂತೆ ಆ ದನಿ ನನ್ನ ಮೇಲೆರೆಗಿ ಬಂತು. ನಾನದನ್ನು ಕೇಳಿದೆ, ಅದು ದನಿಯೆಂಬುದನ್ನು ಖಚಿತಪಡಿಸಿಕೊಂಡೆ; ಅಲ್ಲಿಗೆ ನನ್ನ ಒಳತೋಟಿ ಮುಕ್ತಾಯಗೊಂಡಿತು. ನಾನು ಸಮಾಧಾನಗೊಂಡಿದ್ದೆ.
ಗಾಂಧಿಯವರು ತಮ್ಮ ಬದುಕಿನ ಹಲವು ಕ್ಲಿಷ್ಟ ಸಂದರ್ಭಗಳಲ್ಲಿ ಕೇಳಿಸಿಕೊಂಡ ಇಂಥ ಅಂತರ್ಯಾಮಿಯ ಮಾತುಗಳು ಅವರ ಒಟ್ಟೂ ಚಿಂತನವಿಧಾನವನ್ನೇ ಕುರಿತು ಮಹಣ್ತೀದ ಸೂಚನೆಗಳನ್ನೇನಾದರೂ ನಮಗೆ ನೀಡುತ್ತವೆಯೆ?- ಎಂಬ ಪ್ರಶ್ನೆಗೆ ತ್ರಿದೀಪ್ ಸುಹೃದ್ ತಮ್ಮ ಪ್ರಸ್ತಾವನೆಯಲ್ಲಿ ಸೂಚಿಸುವ ಉತ್ತರ ಮತ್ತು ಆ ಉತ್ತರವು ಓದುಗನಾಗಿ ನನ್ನೊಳಗೆ ವಿಸ್ತರಣೆಗೊಂಡ ಕ್ರಮ- ಎರಡನ್ನೂ ಕೂಡಿಸಿ ಗಾಂಧಿ ಚಿಂತನೆಯ ವಿಧಾನವನ್ನು ಕುರಿತು ನಾನೀಗ ಒಂದು ಪ್ರಸ್ತಾಪವನ್ನು ಮುಂದಿಡುತ್ತೇನೆ. ಈ ಅಂತರ್ಯಾಮಿ ಎಂಬುದು ಗಾಂಧಿಯವರಿಗೆ ಮೊದಲು ಕೇಳಿಸಿದ ಹಲವು ಧ್ವನಿಗಳಲ್ಲೇಒಂದೋ? ಅಥವಾ ಇವೆಲ್ಲಕ್ಕೂ ಮೇಲೆ ನಿಂತ ಇನ್ನೊಂದು ಹೊಸ ಧ್ವನಿಯೋ? ಅಥವಾ ಹಲವು ಧ್ವನಿಗಳ ನಡುವೆ ಸಂವಾದ ನಡೆಸುತ್ತ ಆಕಾರವನ್ನು ಪಡೆದ ವಿಶಿಷ್ಟ ಧ್ವನಿವಿಶೇಷವೋ? ನನ್ನ ಪ್ರಕಾರ, ಗಾಂಧಿ ಬಳಸಿದ ಗುಜರಾತಿ ಭಾಷೆಯ ಅಂತರ್ಯಾಮಿ ಎಂಬ ಪದವೇ ಅದನ್ನು ನಾನು ಮೇಲೆ ಸೂಚಿಸಿದ ಮೂರನೆಯ ಸಾಧ್ಯತೆಯ ಕಡೆಗೆ ಬೆರಳು ತೋರಿಸುವಂತಿದೆ; ಮತ್ತು, ಈ ದೃಷ್ಟಿಯಿಂದ ಇಂಗ್ಲಿಷ್ ಅನುವಾದದಲ್ಲಿ ಬಳಕೆಯಾದ “ಸ್ಪಿರಿಟ್’ ಎಂಬ ಪದವಾಗಲಿ ಅಥವಾ ಕನ್ನಡಾನುವಾದದಲ್ಲಿ ಕಾಣುವ “ಅಂತರಾತ್ಮ’ವಾಗಲಿ, ಇದಕ್ಕೆ ನಿಖರ ಪರ್ಯಾಯವಲ್ಲ; ಒಳಚಲನೆ ಅಥವಾ ಒಳಸಂವಾದದ ನಿಯಂತ್ರಕ – ಎಂಬ ಅರ್ಥಗಳನ್ನು ಸೂಚಿಸುವ ಅಂತರ್ಯಾಮಿ ಎಂಬ ಪದವೇ ಇದಕ್ಕೆ ಸೂಕ್ತವಾದ ಆಯ್ಕೆ. ಇಷ್ಟು ಯೋಚಿಸುತ್ತಿದ್ದಂತೆ, ಇನ್ನೂ ಕಷ್ಟದ ಪ್ರಶ್ನೆಯೊಂದು ನಮ್ಮೆದುರಿಗೆ ಎದ್ದು ನಿಲ್ಲುತ್ತದೆ- ಗಾಂಧಿಗೆ ಕೇಳಿದ ಹಲವು ಧ್ವನಿಗಳಲ್ಲಿ ನಿರ್ದಿಷ್ಟವಾದ ಒಂದು ಧ್ವನಿಯನ್ನೇ ಅವರು ಅಂತರ್ಯಾಮಿಯ ಧ್ವನಿಯೆಂದು ಗುರುತಿಸಿದ್ದು ಹೇಗೆ? ಈ ಪ್ರಶ್ನೆಗೆ ಗಾಂಧಿಯವರು ಕೊಡುವ ಉತ್ತರವೇ ಅವರನ್ನು ಅಪರೂಪದ ವ್ಯಕ್ತಿಯಾಗಿ ಮಾಡಿದೆಯೇ ಹೊರತು, ಅವರ ಯಾವುದೇ ಒಂದು ಉಪದೇಶವೂ ಅಲ್ಲ ಎಂಬುದು ನನ್ನ ನಂಬಿಕೆ. ಈ ಉತ್ತರವನ್ನು ತ್ರಿದೀಪ್ ಸುಹೃದ್ ಅವರ ಪ್ರಸ್ತಾವನೆ ತುಂಬ ನಿಖರವಾಗಿ ಗುರುತಿಸಿ ಹೇಳಿದೆ- ಅಂತರ್ಯಾಮಿಯ ಇಂಥ ಗುರುತಿಸುವಿಕೆ ಸಾಧ್ಯವಾಗುವುದು, ಗಾಂಧಿಯ ಪ್ರಕಾರ, ಕೇವಲ ಯೋಚನೆಯ ಶಕ್ತಿಯನ್ನು ಹೆಚ್ಚಿಸಿ ಕೊಳ್ಳುವುದರಿಂದ ಅಲ್ಲ; ಬದಲು, ಬ್ರಹ್ಮಚರ್ಯ, ಅಸ್ತೇಯ, ಅಪರಿಗ್ರಹ, ಅಸ್ವಾದ- ಇತ್ಯಾದಿ ಬಾಹ್ಯ ಶಿಸ್ತುಗಳನ್ನು ನಿರಂತರವಾಗಿ ರೂಢಿಸಿಕೊಳ್ಳುವ ಮೂಲಕ ಮಾತ್ರ. ಅವರದೇ ರೂಪಕದಲ್ಲಿ ಹೇಳುವುದಾದರೆ- “ಆಗ ಮಾತ್ರವೇ ಇದು ನಮ್ಮೊಳಗಿಂದ ಬರುತ್ತಿರುವ ರಾಮನ ಧ್ವನಿಯೋ ರಾವಣನ ಧ್ವನಿಯೋ ಎಂದು ಗುರುತಿಸುವುದು ಸಾಧ್ಯ’. ಇವತ್ತಿನ ಕಾಲದ ನನ್ನಂಥ ಒಬ್ಬ ಮನುಷ್ಯನಿಗೆ ಗಾಂಧಿ ಆತ್ಯಂತಿಕವಾಗಿ ಉಪಯುಕ್ತವಾಗುವುದು ಈ ಕಾರಣಕ್ಕೆ ಎಂಬ ನಂಬಿಕೆಯಿಂದ ಈ ಅಂತರ್ಯಾಮಿಯ ಆವಿಷ್ಕಾರದ ಕಥನವನ್ನು ನಾನಿಲ್ಲಿ ಕಟ್ಟಿದ್ದೇನೆ. ಇವತ್ತು ನಾವಿರುವ ಮಾರುಕಟ್ಟೆಯ ಕಾಲದಲ್ಲಿ “ನಮ್ಮ ಮನಸ್ಸು’ ಎಂದು ನಾವು ತಿಳಿದುಕೊಂಡಿರುವ ಸಂಗತಿಯು ನಿಜವಾಗಿ ಬಹುಪಾಲು ನಮ್ಮದಲ್ಲ; ಅದು ಜಾಹೀರಾತು ಮತ್ತು ಐಡಿಯಾಲಜಿ ಮೊದಲಾದವುಗಳಿಂದ ರೂಪಿತವಾದದ್ದು. ಮತ್ತು, ನಮ್ಮದೆಂಬ ಮನಸ್ಸು ಅಷ್ಟಿಷ್ಟು ಇರುವಾಗಲೂ ಅದನ್ನು ನಮ್ಮದಲ್ಲದ ಮನಸ್ಸಿನಿಂದ ಬೇರ್ಪಡಿಸುವ ಕೌಶಲವಾಗಲೀ, ಅಂಥ ಕೌಶಲಕ್ಕೆ ಅಗತ್ಯವಾಗುವ ಶಿಸ್ತಾಗಲೀ ನಮಗೆ ಇಲ್ಲದಿರುವುದರಿಂದ, ಗಾಂಧಿಯೂ ಸೇರಿದಂತೆ ಎಲ್ಲ ಮಹಾನುಭಾವರೂ ನಮಗೆ ಸಂದೇಶವಾಹಕರು; ಉಪದೇಶಕರು. ನಮ್ಮ ಮಾರುಕಟ್ಟೆ ಯುಗಧರ್ಮಕ್ಕೆ ತಕ್ಕಂತೆ ನಾವು ಅಂಥ ಮಹಾನುಭಾವರು ಮಾಡಿರುವ ಉಪದೇಶಗಳನ್ನೋ ಅಥವಾ ಸಿದ್ಧಾಂತಗಳನ್ನೋ ಬಳಸಲು ಒದ್ದಾಡುವ ಉಪಭೋಗಜೀವಿಗಳು. ಹಾಗಾಗಿ, ಸಿದ್ಧ ಆಲೋಚನೆಗಳ ಬಳಕೆಯನ್ನು ಮಾತ್ರ ನಾವು ಮಾಡಬಲ್ಲೆವಾಗಿ ಸ್ವತಃ ಆಲೋಚಿಸುವುದನ್ನು ಮರೆತಿರುವ ವಿಚಿತ್ರ ವಿಪರ್ಯಾಸವೊಂದು ಇವತ್ತು ಉದ್ಭವವಾಗಿದೆಯೆಂದು ನನ್ನ ತಿಳುವಳಿಕೆ. – ಅಕ್ಷರ ಕೆ. ವಿ.