Advertisement

ಗಾಂಧಿನಗರದಲ್ಲಿ ದಿನೇಶ್‌ಗೆ ಪೈಪೋಟಿ ನೀಡೋರ್ಯಾರು?

03:01 PM May 02, 2023 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನ ದಟ್ಟಣೆಯ ಜಂಕ್ಷನ್‌ ಕೆಂಪೇಗೌಡ ಬಸ್‌ ನಿಲ್ದಾಣ, ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ ಹಾಗೂ ಅತಿ ಹೆಚ್ಚು ಕೊಳಗೇರಿಗಳನ್ನು ಒಳಗೊಂಡ ಗಾಂಧಿನಗರ ವಿಧಾನಸಭೆ ಕ್ಷೇತ್ರದ ಚುನಾವಣಾ ಅಖಾಡ ರಂಗೇರಿದೆ.

Advertisement

ಸತತ 5 ಬಾರಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎನಿಸಿರುವ ದಿನೇಶ್‌ ಗುಂಡೂರಾವ್‌ 6ನೇ ಬಾರಿ ಅದೃಷ್ಟ ಪರೀಕ್ಷೆ ಇಳಿದಿದ್ದು ಬಿಜೆಪಿ ಯಿಂದ ಮಾಜಿ ಸಚಿವ ರಾಮಚಂದ್ರಗೌಡರ ಪುತ್ರ ಸಪ್ತಗಿರಿಗೌಡ, ಜೆಡಿಎಸ್‌ನಿಂದ ವಿ.ನಾರಾಯಣಸ್ವಾಮಿ, ಬಿಜೆಪಿ ಟಿಕೆಟ್‌ ವಂಚಿತ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಇದಲ್ಲದೆ ಆಮ್‌ ಆದ್ಮಿ ಪಾರ್ಟಿಯ ಗೋಪಿನಾಥ್‌ ಸೇರಿ ಹದಿನೈದು ಹುರಿಯಾಳುಗಳು ಸ್ಪರ್ಧೆಯಲ್ಲಿದ್ದಾರೆ. ಇಲ್ಲಿ ಬಿಜೆಪಿಯಿಂದ ಪಾಲಿಕೆಯ ಮಾಜಿ ಸದಸ್ಯ ಶಿವಕು ಮಾರ್‌ ಸಹ ಟಿಕೆಟ್‌ ಬಯಸಿದ್ದಾರಾದರೂ ಸಿಗಲಿಲ್ಲ.

ಮಾಲೂರು ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದು ಸಚಿವರೂ ಆಗಿ ವೈಕುಂಠ ಏಕಾದಶಿಯಂದು ದೇವಾಲಯಗಳಲ್ಲಿ ಲಡ್ಡು ವಿತರಣೆ, ಶಿವರಾತ್ರಿಯಂದು ಗಂಗಾಜಲ ವಿತರಣೆ, ತಿರುಪತಿಯಲ್ಲಿ ಕರ್ನಾಟಕದ ಭಕ್ತರಿಗೆ ದಾಸೋಹ ಏರ್ಪಾಡು ಮೂಲಕ ಗಮನ ಸೆಳೆದಿದ್ದ ಕೃಷ್ಣಯ್ಯಶೆಟ್ಟಿ ಕೆಲಕಾಲದ ನಂತರ ದಿಢೀರ್‌ ಗಾಂಧಿನಗರ ಕ್ಷೇತ್ರಕ್ಕೆ ಬಂದು ಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದು ಆಶ್ಚರ್ಯ ಮೂಡಿಸಿತ್ತು. ಬಿಜೆಪಿಯಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿಯೂ ಆಗಿದ್ದರು. ಟಿಕೆಟ್‌ ಸಿಗದ ಕಾರಣ ಬಿಎಸ್‌ಪಿಯಿಂದಲೂ ನಾಮಪತ್ರ ಸಲ್ಲಿಸಿದ್ದರಾದರೂ ಬಿ ಫಾರಂ ಸಿಗಲಿಲ್ಲ. ಹೀಗಾಗಿ, ಪಕ್ಷೇತರರಾಗಿ ಕಣದಲ್ಲಿದ್ದಾರೆ.

ಯಾರ ಮತ ಬುಟ್ಟಿಗೆ ಕೈ: ಕಳೆದ ವಿಧಾನಸಭೆ ಚುನಾವಣೆಯಲ್ಲಿ 47 ಸಾವಿರ ಮತ ಪಡೆಯುವ ಮೂಲಕ 10 ಸಾವಿರ ಮತಗಳ ಅಂತರದಿಂದ ದಿನೇಶ್‌ ಗುಂಡೂರಾವ್‌ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ 37 ಸಾವಿರ ಮತ ಪಡೆದರೆ ಜೆಡಿಎಸ್‌ ಅಭ್ಯರ್ಥಿ 36 ಸಾವಿರ ಮತ ಪಡೆದಿದ್ದರು. ಹೀಗಾಗಿ, ಇಲ್ಲಿ ಜೆಡಿಎಸ್‌ ಸಹ ಶಕ್ತಿಯುತವಾಗಿದೆ. 1972ರ ಚುನಾವಣೆಯಿಂದ ನೋಡಿದರೆ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಒಮ್ಮೆ ಎಡಿಎಂಕೆ, 2 ಬಾರಿ ಜನತಾಪಕ್ಷದ ಅಭ್ಯರ್ಥಿಗಳು ಶಾಸಕರಾಗಿದ್ದು ಬಿಟ್ಟರೆ ಉಳಿದಂತೆ 8 ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆದ್ದಿದ್ದಾರೆ.

ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ ಅವರ ಪುತ್ರರೂ ಆಗಿರುವ ದಿನೇಶ್‌ ಗುಂಡೂರಾವ್‌ 1999 ರಿಂದ ನಿರಂತರವಾಗಿ ಇದೇ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಾ ಬರುತ್ತಿದ್ದು ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಮತದಾರರ ಜತೆ ನಿರಂತರ ಸಂಪರ್ಕವೂ ಇದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳೂ ಆಗಿದೆ. ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಮತ್ತೂಮ್ಮೆ ಅವಕಾಶಕ್ಕಾಗಿ ಮನವಿ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಿಜೆಪಿಯ ಸಪ್ತಗಿರಿಗೌಡ, ಜೆಡಿಎಸ್‌ನ ವಿ.ನಾರಾಯಣ ಸ್ವಾಮಿ ತಮಗೂ ಒಂದು ಅವಕಾಶ ಕೊಡಿ ಎಂದು ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದಾರೆ.

Advertisement

ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಹೋರಾಟ ಎನಿಸಿದರೂ ಕೃಷ್ಣಯ್ಯಶೆಟ್ಟಿ ಸ್ಪರ್ಧೆಯಿಂದ ಚತುಷ್ಕೋನ ಸ್ವರೂಪ ಪಡೆದುಕೊಂಡಿದೆ. ಕೃಷ್ಣಯ್ಯಶೆಟ್ಟಿ ಬಿಜೆಪಿ ಮತ ವಿಭಜನೆ ಮಾಡಿದರೆ ದಿನೇಶ್‌ಗುಂಡೂರಾವ್‌ ಹಾದಿ ಸುಲಭವಾಗುತ್ತದೆ. ಅದರ ಜತೆಗೆ ದಿನೇಶ್‌ಗುಂಡೂರಾವ್‌ ಮತಬುಟ್ಟಿಗೇ ಕೈ ಹಾಕಿದರೆ ಫ‌ಲಿತಾಂಶ ಅಚ್ಚರಿ ಆಗಬಹುದು. ಈ ಕ್ಷೇತ್ರ ದತ್ತಾತ್ತೇಯ ದೇವಸ್ಥಾನ, ಗಾಂಧಿನಗರ, ಸುಭಾಷ್‌ನಗರ, ಓಕಳೀಪುರಂ, ಬಿನ್ನಿಪೇಟೆ, ಕಾಟನ್‌ ಪೇಟೆ, ಚಿಕ್ಕಪೇಟೆ ವಾರ್ಡ್‌ಗಳನ್ನು ಹೊಂದಿದ್ದು, ಶ್ರಮಿಕ ವರ್ಗದ ಮತದಾರರೇ ಇಲ್ಲಿ ಹೆಚ್ಚಾಗಿದ್ದು, ಹಿಂದುಳಿದ ಸಮುದಾಯ, ತಮಿಳು ರಾಜಸ್ಥಾನ ಹಾಗೂ ಗುಜರಾತ್‌ ಮೂಲದ ಮತದಾರರು ನಿರ್ಣಾಯಕ.

ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ದಕ್ಷ ಆಡಳಿತಕ್ಕಾಗಿ ಮತ್ತೂಮ್ಮೆ ಅವಕಾಶಕ್ಕಾಗಿ ಕೋರುತ್ತಿದ್ದೇನೆ. ಗ್ಯಾರಂಟಿ ಘೋಷಣೆಗಳು ಬಡವರ ಪರ ಇದ್ದು, ಅದುವೇ ನಮ್ಮ ಅಜೆಂಡಾ. -ದಿನೇಶ್‌ ಗುಂಡೂರಾವ್‌, ಕಾಂಗ್ರೆಸ್‌

ಕ್ಷೇತ್ರದ ಅಭಿವೃದ್ಧಿಗಾಗಿ ಸಪ್ತಗುರಿ ಇಟ್ಟುಕೊಂಡಿದ್ದೇನೆ. ಆರೋಗ್ಯ, ಶಿಕ್ಷಣ ಕಾನೂನು ಸುವ್ಯವಸ್ಥೆ, ಕೊಳೆಗೇರಿ ಅಭಿವೃದ್ಧಿ, ವಸತಿ ರಹಿತರಿಗೆ ಉಚಿತ ವಸತಿ, ಐತಿಹಾಸಿಕ ಸ್ಥಳಗಳ ಪುನರುತ್ಥಾನದ ಭರವಸೆ ನನ್ನದು. -ಸಪ್ತಗಿರಿಗೌಡ, ಬಿಜೆಪಿ

ಕಳೆದ ಬಾರಿ ಸೋತರೂ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದೇನೆ, ಕೊರೊನಾ ವೇಳೆ ನೆರವಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ನನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡುತ್ತಿದ್ದೇನೆ. -ವಿ.ನಾರಾಯಣಸ್ವಾಮಿ, ಜೆಡಿಎಸ್‌

-ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next