Advertisement

ಗಾಂಧೀಜಿ ನಮ್ಮೆಲ್ಲರ ಸಾಕ್ಷಿಪ್ರಜ್ಞೆ: ಪ್ರೊ|ಸೋಮಶೇಖರ

02:31 PM Aug 18, 2017 | Team Udayavani |

ತೀರ್ಥಹಳ್ಳಿ: ಮಹಾತ್ಮ ಗಾಂಧೀಜಿ 90 ವರ್ಷಗಳ ಹಿಂದೆ ಆಗಸ್ಟ್‌ 17ರ 1927 ರಂದು ಪತ್ನಿ ಕಸೂರಬಾ ಗಾಂಧಿಯವರೊಂದಿಗೆ ತೀರ್ಥಹಳ್ಳಿಗೆ ಆಗಮಿಸಿದ್ದರು. ಸತ್ಯ, ಆಹಿಂಸೆ, ರಾಷ್ಟ್ರೀಯ ಚಳುವಳಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಏಕತೆಯೊಂದಿಗೆ ಹೋರಾಟ ಮಾಡೋಣ ಎಂದು ಕರೆ ನೀಡಿದ್ದರು. ಮಹಾತ್ಮ ಗಾಂಧೀಜಿ ಕೇವಲ ವ್ಯಕ್ತಿಯಾಗಿರಲಿಲ್ಲ. ಆದರ್ಶ, ಸಿದ್ಧಾಂತದ ಮಾರ್ಗದರ್ಶಕರಾಗಿ ನಮ್ಮೆಲ್ಲರ ಸಾಕ್ಷಿಪ್ರಜ್ಞೆಯಾಗಿದ್ದರು ಎಂದು ನಿವೃತ್ತ ಪ್ರಾಂಶುಪಾಲ ಉಪನ್ಯಾಸಕ ಪ್ರೊ| ಡಿ.ಎಸ್‌. ಸೋಮಶೇಖರ ಹೇಳಿದರು. 

Advertisement

ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧಿ ಆಗಮನದ 90ರ ನೆನಪು ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಅಂದು ಗಾಂಧೀಜಿ ತೀರ್ಥಹಳ್ಳಿಗೆ ಆಗಮಿಸಿದಾಗ ಇಲ್ಲಿನ ವಿದ್ಯಾರ್ಥಿಗಳು, ಮಕ್ಕಳು, ಕಾರ್ಮಿಕರು, ರೈತರು ಹಾಗೂ ಎಲ್ಲಾ ಸಮುದಾಯದವರು ಗಾಂಧಿ ಚರಕನಿಗೆ 1500 ರೂ. ಹಣವನ್ನು ದೇಣಿಗೆ  ನೀಡಿದ್ದರು. ಅಂದು ಆಗುಂಬೆ ಬಸ್‌ ನಿಲ್ದಾಣ ಸಮೀಪದ ಲಿಂಗಪ್ಪ ಡ್ರಾಮಾ ಥಿಯೇಟರ್‌ ಹಾಗೂ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾಡಿದ ಭಾಷಣ ಇಂದಿಗೂ ದಾಖಲೆಯಾಗಿ ಉಳಿದಿದೆ. ಸತ್ಯ, ಅಹಿಂಸೆಯ ದಾರಿಯಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದು ಅವರು ನೀಡಿದ ಕರೆ ದೇಶದ ಭಾರತೀಯರನ್ನು ಎಚ್ಚರಿಸಿತ್ತು ಎಂದರು. 

ವೈಯಕ್ತಿಕ ಮಟ್ಟದಲ್ಲಿ ಇರಬಹುದಾಗಿದ್ದ ಅಹಿಂಸೆಯನ್ನು ಸಾರ್ವಜನಿಕ ಬದುಕಿನಲ್ಲಿ ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ವಿರುದ್ಧ ಪರಿಣಾಮಕಾರಿ ಅಸ್ತ್ರವಾಗಿ ಗಾಂಧೀಜಿ ಬಳಸಿದ್ದು ವಿಶ್ವದಲ್ಲಿ ಅಭೂತಪೂರ್ವ. ಅಹಿಂಸೆ ಹೇಡಿಗಳ ರೀತಿಯಾದರೆ ಅದರ ಆಚರಣೆಗೆ ಧೈರ್ಯ, ಸ್ಥೈರ್ಯ, ಸಂಯಮ, ವಿವೇಕದ ಅಗತ್ಯವಿದ್ದುದರಿಂದ ಅಹಿಂಸೆ ಆತ್ಮಶಕ್ತಿಯ ಪ್ರತೀಕ ಎಂದು ಪ್ರತಿಪಾದಿಸಿದ ವಿಶ್ವ ಗುರುತಿಸಿದ ಮಹಾನ್‌ ನಾಯಕರಾಗಿದ್ದರು. ಭಾರತದ ಆರ್ಥಿಕ ದುಃಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡ ಗಾಂಧೀಜಿ ಭಾರತದ ಪುನರ್‌ ನಿರ್ಮಾಣಕ್ಕೆ ಸ್ವದೇಶಿ ಮಂತ್ರವನ್ನು ಸಿದ್ಧಪಡಿಸಿದ್ದರು ಎಂದರು.

ಪಪಂ ಅಧ್ಯಕ್ಷ ಸಂದೇಶ್‌ ಜವಳಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೂಳೂರು ಸತ್ಯನಾರಾಯಣ್‌, ಪ್ರಾಂಶುಪಾಲ ಡಾ| ಬಿ.ಎಂ. ಜಯಶೀಲ್‌ ಹಾಗೂ ಪ್ರಾಧ್ಯಾಪಕ ಡಾ| ನಾಗೇಶ್‌ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next