ದೊಡ್ಡಬಳ್ಳಾಪುರ: ಬದುಕಿದ್ದಾಗಲೇ ಜೀವಂತ ದಂತಕತೆಯಾಗಿದ್ದ ಗಾಂಧೀಜಿ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ತನ್ನ ಕುಂದುಗಳನ್ನು ಕಂಡುಕೊಳ್ಳುತ್ತ, ಅದನ್ನು ಸರಿಪಡಿಸಿಕೊಳ್ಳುತ್ತಲೇ ಅವರು ಮಹಾತ್ಮರಾದರು ಎಂದು ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಸ್.ಎಂ.ರವಿಕುಮಾರ್ ತಿಳಿಸಿದರು.
ಇಲ್ಲಿನ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಕನ್ನಡ ಮತ್ತು ಇಂಗ್ಲಿಷ್ ವಿಭಾಗದ ನೇತೃತ್ವದಲ್ಲಿ ಮಹಾತ್ಮ ಗಾಂದೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ನಡೆದ ನವಭಾರತದಲ್ಲಿ ಗಾಂಧೀಜಿ ಚಿಂತನೆಗಳ ಪ್ರಾಮುಖ್ಯತೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಗಾಂಧೀಜಿಯಂಥ ವ್ಯಕ್ತಿ ನಮ್ಮ ನಡುವೆ ಜೀವಂತವಾಗಿ ಇದ್ದಾರೆ ಎಂದು ತಿಳಿಯುವುದೇ ಬಹುದೊಡ್ಡ ಪವಾಡ ಎಂದು ಆಲ್ಬರ್ಟ್ ಐನ್‌ಸ್ಟಿನ್ ಹೇಳಿದ್ದರು.ಜನಮಾನಸದಲ್ಲಿ ನೆಲೆಯೂರಿದ ಗಾಂಧೀಜಿಯಂತವರ ಚೆ„ತನ್ಯ ನಿರಂತರವಾಗಿ ವಿಕಸನಶೀಲವಾಗಿರುತ್ತದೆ. ಗಾಂಧೀಜಿಯನ್ನು ಯಾರು ಎಷ್ಟೇ ಅಪಹಾಸ್ಯ, ಗೇಲಿ ಮಾಡಿದರು ಅವರ ಚೆ„ತನ್ಯವನ್ನು ಬುಡಮೇಲು ಮಾಡಲು ಆಗುವುದಿಲ್ಲ ಎಂದರು.
ಕೊಂಗಾಡಿಯಪ್ಪ ಪ.ಪೂ.ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಎನ್.ಶ್ರೀನಿವಾಸ್ ಮಾತನಾಡಿ, ಗಾಂಧೀಜಿ ಜೀವನ ಮತ್ತು ಕೃತಿಗಳು ನಮ್ಮ ಅರಿವು ಮತ್ತು ಅಂತರಂಗದ ಬಾಗಿಲುಗಳನ್ನು ಸದಾಕಾಲ ತೆರೆದಿಡುವಂತೆ ಮಾಡುತ್ತವೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತರಾಗಬಾರದು. ಗಾಂಧೀಜಿ ಕೃತಿಗಳನ್ನು ಅಧ್ಯಯನ ಮಾಡಬೇಕು. ಗಾಂಧೀಜಿ ಅವರ ಪರ್ಯಾಯ ಜೀವನಪದ್ಧತಿ ಮತ್ತು ಆರ್ಥಿಕತೆಯನ್ನು ಅಳವಡಿಸಿಕೊಂಡರೆ ಮನುಕುಲದ ಉಳಿಯುತ್ತದೆ. ನಮ್ಮ ಭವಿಷ್ಯ ಕೊಂಚವಾದರೂ ನೆಮ್ಮದಿಯಿಂದ ಇರುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ನಿರ್ದೇಶಕ ಜೆ.ರಾಜೇಂದ್ರ ಮಾತನಾಡಿ, ವಿಶ್ವಾದ್ಯಂತ ಹಿಂಸೆ-ಕ್ರೌರ್ಯ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಮಹಾತ್ಮ ಗಾಂದೀಜಿ ಅವರ ಚಿಂತನೆಗಳ ಅನುಷ್ಠಾನ ಎಲ್ಲ ಸಮಸ್ಯೆಗಳಿಗೆ ಚಿಕಿತ್ಸಕ ಶಕ್ತಿಯಾಗಿ ಕೆಲಸ ಮಾಡಲಿದೆ. ಇಂದಿನ ರಾಜಕೀಯ ವ್ಯವಸ್ಥೆ ಮೌಲ್ಯಗಳಿಂದ ವಿಮುಖವಾಗಿದೆ. ಗಾಂದೀಜಿ ಅವರ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಂಡಾಗ ಮಾತ್ರ ವಿಶ್ವಶಾಂತಿಯ ಪರಿಕಲ್ಪನೆ ಸಾಕಾರ ಸಾಧ್ಯ ಎಂದರು.
ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಂ.ಚಿಕ್ಕಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ವಿಭಾಗ ಮುಖ್ಯಸ್ಥೆ ಪಿ.ಚೆ„ತ್ರ, ಐಕ್ಯೂಎಸಿ ಸಂಯೋಜಕ ಆರ್.ಉಮೇಶ್, ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಸಿ.ಲಕ್ಷ್ಮಿಶ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಎನ್.ರವಿಕುಮಾರ್ ಮತ್ತಿತರರು ಹಾಜರಿದ್ದರು.