Advertisement

ಲಂಚ ಕೇಳಿದ ಖಾಕಿ ವಿರುದ್ಧ ಹೆದ್ದಾರಿಯಲ್ಲೇ ದಂಪತಿ ಗಾಂಧಿಗಿರಿ

11:22 PM May 01, 2019 | Lakshmi GovindaRaj |

ಹುಬ್ಬಳ್ಳಿ: ಅಗತ್ಯ ದಾಖಲೆಗಳನ್ನು ತೋರಿಸಿದ ನಂತರವೂ ಹಣಕ್ಕೆ ಬೇಡಿಕೆ ಇರಿಸಿ ಒತ್ತಾಯಿಸಿದ ಪೊಲೀಸರ ವಿರುದ್ಧ ಕಾರಿನಲ್ಲಿ ಸಂಚರಿಸುತ್ತಿದ್ದ ದಂಪತಿ ನಡು ರಸ್ತೆಯಲ್ಲೇ ಪುಟ್ಟ ಮಗುವಿನೊಂದಿಗೆ ಧರಣಿ ನಡೆಸುವ ಮೂಲಕ ಪೊಲೀಸರಿಗೆ ಬಿಸಿ ಮುಟ್ಟಿಸಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ದಾಖಲಾತಿ ತೋರಿಸಿದರೂ ಪೊಲೀಸರು ಹಣಕ್ಕೆ ಒತ್ತಾಯಿಸಿದರು ಎಂಬುದು ದಂಪತಿ ಆರೋಪ. ಆದರೆ, ದಾಖಲಾತಿಗಳು ಸಮರ್ಪಕವಾಗಿರಲಿಲ್ಲ. ಇದಕ್ಕಾಗಿ ನೋಟಿಸ್‌ ನೀಡಿದ್ದಕ್ಕೆ ದಂಪತಿ ರಾದ್ಧಾಂತ ಸೃಷ್ಟಿಸಿದ್ದಾರೆ ಎಂಬುದು ಹುಬ್ಬಳ್ಳಿ-ಧಾರವಾಡ ಸಂಚಾರಿ ಪೊಲೀಸರ ವಿವರಣೆ. ಘಟನೆ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ಮಹಾನಗರ ಸಂಚಾರಿ ಉಪ ಪೊಲೀಸ್‌ ಆಯುಕ್ತರು, ಸಹಾಯಕ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದಾರೆ.

ನಡೆದಿದ್ದೇನು?: ಧಾರವಾಡದ ಸಂಚಾರ ಠಾಣೆ ಪೊಲೀಸರು ಚಾಲುಕ್ಯ ವಾಹನದೊಂದಿಗೆ ಸೋಮವಾರ ಮಧ್ಯಾಹ್ನ ಧಾರವಾಡದ ಕೆಲಗೇರಿ ಬೈಪಾಸ್‌ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ದಂಪತಿ ಮಗುವಿನೊಂದಿಗೆ ಕಿತ್ತೂರು ಕಡೆಯಿಂದ ಬೆಂಗಳೂರು ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ಪೊಲೀಸರು ವಾಹನದ ದಾಖಲಾತಿ ಪರಿಶೀಲನೆಗೆ ಅವರನ್ನು ತಡೆದಿದ್ದಾರೆ.

ಕಾರು ನಿಲ್ಲಿಸಿ ಪೊಲೀಸರು ಕೇಳಿದ ಅಗತ್ಯ ದಾಖಲಾತಿಗಳನ್ನು ದಂಪತಿ ನೀಡಿದ್ದಾರೆ. ದಾಖಲಾತಿ ಪರಿಶೀಲಿಸಿದ ಪೊಲೀಸರು ಅವು ಸರಿಯಿಲ್ಲ. ಹಣ ಕೊಡಬೇಕೆಂದು ಕೇಳಿದರೆಂದು ಆರೋಪಿಸಿದ ದಂಪತಿ, ವಾಗ್ವಾದಕ್ಕೆ ಇಳಿದಿದ್ದಾರೆ. ಅಲ್ಲದೆ ಆಕ್ರೋಶಗೊಂಡು ಕಾರನ್ನು ರಸ್ತೆಯ ಮಧ್ಯೆ ನಿಲ್ಲಿಸಿ ಲಗೇಜನ್ನೆಲ್ಲ ಕೆಳಗೆ ಇಳಿಸಿದ್ದಾರೆ. ಮಗುವಿನೊಂದಿಗೆ ರಸ್ತೆಯ ಮಧ್ಯೆ ಕುಳಿತು ಪ್ರತಿಭಟಿಸಿದ್ದಾರೆ.

ಕಂಗಾಲಾದ ಪೊಲೀಸರು: ಇದರಿಂದ ಕರ್ತವ್ಯದಲ್ಲಿದ್ದ ಪೊಲೀಸರು ಮುಜುಗರಕ್ಕೊಳಗಾಗಿ ದಂಪತಿಯನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಪೇದೆಯೊಬ್ಬ ಮಹಿಳೆಗೆ ಪ್ರತಿಭಟನೆ ನಡೆಸಬೇಡಿ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ. ಆದರೆ ಮಹಿಳೆ ಮಾತ್ರ ಅಲ್ಲಿಂದ ಕದಲಲಿಲ್ಲ.

Advertisement

ನಂತರ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರೇ ರಸ್ತೆಯಲ್ಲಿಟ್ಟಿದ್ದ ಲಗೇಜ್‌ಗಳನ್ನೆಲ್ಲ ಕಾರಿಗೆ ಹಾಕಿದ್ದಾರೆ. ಇದರಿಂದ ಹೆದ್ದಾರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡು, ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ದೃಶ್ಯಾವಳಿಗಳನ್ನು ಕೆಲ ವಾಹನಗಳ ಸವಾರರು ತಮ್ಮ ಮೊಬೈಲ್‌ಗ‌ಳಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪೊಲೀಸರು ಹೇಳೋದೇನು?: ಕಾರಿನಲ್ಲಿ ಹೊರಟಿದ್ದ ದಂಪತಿಯ ದಾಖಲಾತಿ ಸಮರ್ಪಕವಾಗಿರಲಿಲ್ಲ. ಹೀಗಾಗಿ ಸಿಬ್ಬಂದಿ ಅವರಿಗೆ ನೋಟಿಸ್‌ ಕೊಟ್ಟಿದ್ದಾರೆ. ಇದರಿಂದ ಕೆರಳಿದ ಅವರು ವಾಗ್ವಾದಕ್ಕೆ ಇಳಿದಿದ್ದಾರೆ. ಅಲ್ಲದೆ ಕಾರನ್ನು ಹೆದ್ದಾರಿಯಲ್ಲಿ ಅಡ್ಡಲಾಗಿ ನಿಲ್ಲಿಸಿ ಮಹಿಳೆ, ಮಗುವಿನೊಂದಿಗೆ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದ್ದಾರೆ. ನಾವು ಸಂಚಾರಕ್ಕೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ನೀವು ದಂಡ ಕಟ್ಟುವುದು ಬೇಡ ಹೋಗಿ ಎಂದರೂ ಕೇಳದೆ ರಾದ್ಧಾಂತ ಮಾಡಿದ್ದಾರೆ. ಹಣ ಕೇಳುತ್ತಿದ್ದಾರೆಂದು ಸಿಬ್ಬಂದಿ ಮೇಲೆಯೇ ಆರೋಪ ಹೊರಿಸಿದ್ದಾರೆ ಎಂಬುದು ಪೊಲೀಸರ ಆರೋಪ.

ಈ ಕುರಿತು ವರದಿ ನೀಡುವಂತೆ ಸಂಚಾರ ಎಸಿಪಿ ಅವರಿಗೆ ಸೂಚಿಸಲಾಗಿದೆ. ಘಟನೆ ಕುರಿತು ದಂಪತಿ ದೂರು ಕೊಟ್ಟಿಲ್ಲ. ಅವರು ದೂರು ಸಲ್ಲಿಸಿದರೆ ಸ್ವತಂತ್ರ ತನಿಖೆ ನಡೆಸಲು ಸಿದ್ಧ. ಆಗ ತಪ್ಪಿತಸ್ಥರೆಂದು ಕಂಡು ಬಂದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಡಾ| ಶಿವಕುಮಾರ ಗುಣಾರೆ, ಡಿಸಿಪಿ, ಸಂಚಾರ ಮತ್ತು ಅಪರಾಧ ವಿಭಾಗ.

Advertisement

Udayavani is now on Telegram. Click here to join our channel and stay updated with the latest news.

Next