Advertisement
ಹೀಗೆ 5 ಪೈಸೆಯ ಅಂಚೆ ಚೀಟಿ ಮೇಲೆ ದೇಶದಲ್ಲಿ ನಡೆಸಿದ ಮೊದಲ ವೈಜ್ಞಾನಿಕ ಸಂಶೋಧನೆ ಕೂಡ ಇದಾಗಿದೆ ಎಂದು ಅಗರವಾಲ್ ತಿಳಿಸುತ್ತಾರೆ. ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಫಿಲಾಟೆಲಿಕ್ ಸೊಸೈಟಿ ಹಮ್ಮಿಕೊಂಡ ಮೂರು ದಿನಗಳ ಅಂಚೆ ಚೀಟಿಗಳ ಪ್ರದರ್ಶನದ ಪ್ರಮುಖ ಆಕರ್ಷಣೆ ಇದಾಗಿದೆ.
ನೋಟಿನ ಖಾಲಿ ಜಾಗದಲ್ಲಿರುವಂತೆಯೇ ಅಂಚೆ ಚೀಟಿ ಹಿಂಭಾಗದಲ್ಲೂ “ವಾಟರ್ ಮಾರ್ಕ್’ ಮುದ್ರಣ ಇರುತ್ತದೆ. ಅದರಲ್ಲಿ ಅಶೋಕ ಸ್ತಂಭ ಇರುತ್ತದೆ. ಇದನ್ನೂ ಪ್ರದರ್ಶನಕ್ಕಿಡಲಾಗಿದೆ. ಅಂದಹಾಗೆ ನಂದ ಕಿಶೋರ್ ಅಂಚೆ ಚೀಟಿ ಪ್ರದರ್ಶನಗಳ ತೀರ್ಪುಗಾರ ಕೂಡ ಆಗಿದ್ದಾರೆ. ಕರ್ನಾಟಕದಲ್ಲಿ ಇಬ್ಬರು ಅಥವಾ ಮೂರು ಮಂದಿ ಅಂಚೆ ಚೀಟಿ ತೀರ್ಪುಗಾರರಿದ್ದಾರೆ. ಅವರಲ್ಲಿ ನಂದಕಿಶೋರ್ ಕೂಡ ಒಬ್ಬರು.
Related Articles
ಇನ್ನು ನಗರದ ಶ್ರೀದೇವಿ, ಅಂಚೆ ಚೀಟಿಯಲ್ಲಿ ರಾಮಾಯಣವನ್ನೇ ರಚಿಸಿದ್ದಾರೆ! ರಾಮನ ಜನನದಿಂದ ಶುರುವಾಗುವ ರಾಮಾಯಣ, ರಾಮ-ರಾವಣನ ನಡುವಿನ ಯುದ್ಧ, ರಾವಣನ ಸಂಹಾರ, ರಾಮನ ಪಟ್ಟಾಭಿಷೇಕದವರೆಗೆ ನಾನಾ ದೇಶಗಳು ಬಿಡುಗಡೆ ಮಾಡಿದ ಅಂಚೆ ಚೀಟಿಗಳನ್ನು ಒಂದೆಡೆ ಸೇರಿಸಿ, ರಾಮಾಯಣವನ್ನೇ ದರ್ಶನ ಮಾಡಿಸಿದ್ದಾರೆ. ಇದರಲ್ಲಿ “ಶ್ರೀರಾಮಾಯಣ ದರ್ಶನಂ’ ರಚಿಸಿದ ರಾಷ್ಟ್ರಕವಿ ಕುವೆಂಪು ಅವರ ಅಂಚೆ ಚೀಟಿಯನ್ನೂ ಇಲ್ಲಿ ಕಾಣಬಹುದು.
Advertisement
ಡ್ರ್ಯಾಗನ್ ಫ್ಲೈ ಜೀವನ ವೃತ್ತಾಂತಹಾರುವ ಕೀಟವೊಂದರ ಇಡೀ ಜೀವನ ವೃತ್ತಾಂತವನ್ನು ಕೇವಲ ಅಂಚೆ ಚೀಟಿಗಳ ಮೂಲಕವೇ ಡಾ.ಎಸ್.ರಮಣಿ ಅನಾವರಣಗೊಳಿಸಿದ್ದಾರೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ನಿವೃತ್ತ ಪ್ರಾಧ್ಯಾಪಕರಾಗಿರುವ ಡಾ.ರಮಣಿ, 1958ರಿಂದ 2017ರವರೆಗೆ ವಿವಿಧ ದೇಶಗಳು ಬಿಡುಗಡೆ ಮಾಡಿದ “ಡ್ರ್ಯಾಗನ್ ಫ್ಲೈ’ನ ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದಾರೆ. ಅದನ್ನು ಆಧರಿಸಿಯೇ ಆ ಕೀಟದ ಜೀವನ ವೃತ್ತಾಂತವನ್ನು ಪ್ರದರ್ಶಿಸಿದ್ದಾರೆ. “ಡ್ರ್ಯಾಗನ್ ಫ್ಲೈ’ ಜನನ, ಹೆಣ್ಣು ಮತ್ತು ಗಂಡು ಡ್ರ್ಯಾಗನ್ ಫ್ಲೈ ಪತ್ತೆ ಹೇಗೆ? ಅದರ ಮಿಲನ ಹಾಗೂ ಸಂತಾನೋತ್ಪತ್ತಿ ಹೇಗೆ? ಡ್ರ್ಯಾಗನ್ ಫ್ಲೈ ಮೇಲೆ ರಚಿಸಿದ ಕವನ, ವರ್ಷದಲ್ಲಿ 14ರಿಂದ 18 ಸಾವಿರ ಕಿ.ಮೀ. ಸಂಚರಿಸುವ ಈ ಕೀಟದ ಪ್ರಕಾರಗಳೆಷ್ಟು? ಹೀಗೆ ಡ್ರ್ಯಾಗನ್ ಫ್ಲೈನ ಹತ್ತಾರು ಮುಖಗಳು ಅಂಚೆ ಚೀಟಿಯ ಮೂಲಕ ಪರಿಚಯವಾಗುತ್ತವೆ. ಗಾಂಧೀಜಿ ಜೀವನ ಚರಿತ್ರೆ
ನಗರದ ಜಯಪ್ರಕಾಶ್ ಎಂಬುವರು, ಗಾಂಧೀಜಿ ಜೀವನ ಚರಿತ್ರೆಯನ್ನು ಅಂಚೆ ಚೀಟಿ ಮತ್ತು ಅಂಚೆ ಕಾಗದಗಳ ಮೂಲಕ ಪರಿಚಯಿಸುತ್ತಾರೆ. ಗಾಂಧೀಜಿ ವಿವಾಹ, ಸತ್ಯ ಹರಿಶ್ಚಂದ್ರ ಚಿತ್ರವನ್ನು ನೋಡಿ ಪ್ರಭಾವಿತಗೊಂಡದ್ದು, ರೈಲ್ವೆ ಬೋಗಿಯಿಂದ ಹೊರದಬ್ಬಲ್ಪಟ್ಟ ಜಾಗ, ವಿರಾಮಗಮ್‌ನಲ್ಲಿ ನಡೆದ ಘಟನೆ ಬಗೆಗೆ ಬ್ರಿಟಿಷ್ ಅಧಿಕಾರಿಗಳು ಮತ್ತು ಹರಿಲಾಲ್ ದೇಸಾಯಿ ಮಧ್ಯೆ ನಡೆದ ಪತ್ರವ್ಯವಹಾರಗಳು, ಗಾಂಧಿ ಹತ್ಯೆಯಾದ ದಿನ ಬ್ರಿಟೀಷ್ ಅಧಿಕಾರಿ ಬರೆದ ಪತ್ರ ಕೂಡ ಪ್ರದರ್ಶನಕ್ಕಿಟ್ಟಿದ್ದಾರೆ. ಚೀಫ್ ಪೋಸ್ಟ್ ಮಾಸ್ಟರ್ ಚಾರ್ಲ್ಸ್ ಲೊಬೊ ಅವರ “ಸ್ಟೋರಿ ಆಫ್ ಗೋವಾ’ ಕೂಡ ಅಲ್ಲಿದೆ. ಇಂತಹ ನೂರಾರು ಪ್ರಕಾರದ ಅಂಚೆ ಚೀಟಿಗಳು, ವಿವಿಧ ಥೀಮ್‌ಗಳನ್ನು ಇಟ್ಟುಕೊಂಡು ಸಂಗ್ರಹಿಸಿದ ಅಪರೂಪದ ಅಂಚೆ ಚೀಟಿಗಳನ್ನು ಪ್ರದರ್ಶನದಲ್ಲಿ ಕಾಣಬಹುದು. ಸೊಸೈಟಿಯ ಪ್ರಧಾನ ಕಾರ್ಯದರ್ಶಿ ನಿಖೀಲೇಶ್ ಮೇಲ್ಕೋಟೆ ಅವರ ನೇತೃತ್ವದಲ್ಲಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.