ನವದೆಹಲಿ: ಕೇಂದ್ರ ಸರ್ಕಾರದ 2016ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿ ಪುರಸ್ಕಾರಕ್ಕೆ ಅಕ್ಷಯ ಪಾತ್ರ ಫೌಂಡೇಷನ್ ಪಾತ್ರವಾಗಿದೆ. ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಅಕ್ಷಯ ಪಾತ್ರ ಫೌಂಡೇಷನ್ ಅಧ್ಯಕ್ಷ ಮಧು ಪಂಡಿತ್ ದಾಸ ಅವರಿಗೆ ನಗದು ಬಹುಮಾನ ಮತ್ತು ಸ್ಮರಣಿಕೆ ಪ್ರದಾನ ಮಾಡಿದರು. ಈ ಪ್ರತಿಷ್ಠಿತ ಪುರಸ್ಕಾರ ಪಡೆದ ಬೆಂಗಳೂರಿನ ಮೊದಲ ವ್ಯಕ್ತಿ ಎಂಬ ಕೀರ್ತಿಗೆ ಮಧು ಪಂಡಿತ್ ದಾಸ ಅವರು ಪಾತ್ರರಾಗಿದ್ದಾರೆ.
ಸಾಮಾಜಿಕ ಸೇವೆ ಕ್ಷೇತ್ರದಲ್ಲಿ ಅಕ್ಷಯ ಪಾತ್ರ ಫೌಂಡೇಷನ್ ಸಲ್ಲಿಸುತ್ತಿರುವ ಗಮ ನಾರ್ಹ ಸೇವೆಗಾಗಿ ಈ ಪ್ರಶಸ್ತಿ ಸಂದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದರಾದ ಎಲ್.ಕೆ.ಆಡ್ವಾಣಿ ಅವರು ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಧು ಪಂಡಿತ ದಾಸ ಅವರು, “ಯಾವುದೇ ಮಗು ಹಸಿವಿನಿಂದಾಗಿ ಶಿಕ್ಷಣದಿಂದ ಹೊರಗುಳಿಯಬಾರದು ಎನ್ನುವುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಲಕ್ಷಾಂತರ ಮಕ್ಕಳಿಗೆ ತಾಜಾ, ಪೌಷ್ಠಿಕ ಆಹಾರವನ್ನು ನಾವು ಪೂರೈ ಸು ತ್ತಿದ್ದೇವೆ. ನಮ್ಮ ಈ ಸೇವೆ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂಶೆ§ಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದರು.
ಮಹಾತ್ಮ ಗಾಂಧಿ ಅವರ 125ನೇ ಜನ್ಮದಿನದ ಅಂಗವಾಗಿ ಭಾರತ ಸರ್ಕಾರ 1995ರಲ್ಲಿ ಈ ವಾರ್ಷಿಕ ಪ್ರಶಸ್ತಿ ಆರಂಭಿಸಿದ್ದು, ಗಾಂಧೀಜಿ ಆದರ್ಶಗಳಿಗೆ ಬದ್ಧರಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ಗಮನಾರ್ಹ ಕೊಡುಗೆ ನೀಡುವ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.