ಬೆಳಗಾವಿ: ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ನಿಮಿತ್ತ ದೇಶಾದ್ಯಂತ ಹಮ್ಮಿಕೊಂಡಿರುವ ಜನಾಂದೋಲನ ನಿಮಿತ್ತ ಚಿಕ್ಕೋಡಿ ಲೋಕಸಭಾ ಕ್ಷೇತ್ರದ 650 ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ತಾಲೂಕಿನ ಹುದಲಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡ ಪಾದಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಸಂದರ್ಭದಲ್ಲಿ ಗಾಂಧೀಜಿಯ ತತ್ವಗಳು, ವಿಚಾರಧಾರೆಗಳನ್ನು ಜನರಿಗೆ ತಿಳಿಸಲಾಗುವುದು. ಸ್ವಚ್ಛ ಭಾರತ, ಪ್ಲಾಸ್ಟಿಕ್ ಮುಕ್ತ ಸಮಾಜ, ಯೋಗ ಸೇರಿದಂತೆ ವಿವಿಧ ಜನಪರ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಪ್ರತಿ ಗ್ರಾಮದ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ನಿಮಿತ್ತ ಜನಾಂದೋಲನ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆ ಮೂಲಕ ಪ್ರತಿ ಗ್ರಾಮವನ್ನು ತಲುಪಲಾಗುವುದು. ಇಡೀ ದೇಶದಲ್ಲಿ ಈ ಜನಾಂದೋಲನ ಪಾದಯಾತ್ರೆ ಆರಂಭವಾಗಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಚಾಲನೆ ನೀಡಿದ್ದಾರೆ. ಈಗ ಯಮಕನಮರಡಿ ಕ್ಷೇತ್ರದ ಹುದಲಿ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ, ಚಂದಗಡ, ಅಷ್ಟೇ, ಮುಚ್ಚಂಡಿ, ಕಲಕಾಂಬ, ಕಾಕತಿ, ಮುಕ್ತಿಮಠ, ಯಮಕನಮರಡಿ, ಹತ್ತರಗಿ, ಉಳ್ಳಾಗಡ್ಡಿ ಖಾನಾಪುರ, ಚಿಕ್ಕಾಲಗುಡ್ಡ, ಹೆಬ್ಟಾಳಕ್ಕೆ ಮುಕ್ತಾಯವಾಗಲಿದೆ. ಅ. 13ರಂದು ನಿಪ್ಪಾಣಿ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಯಲಿದೆ. ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ ಜವಾಬ್ದಾರಿ ಇರುವುದರಿಂದ ಪಾದಯಾತ್ರೆಯನ್ನು ಹಂತ ಹಂತವಾಗಿ ಆಯೋಜನೆ ಮಾಡಲಾಗುವುದು ಎಂದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಶಶಿಕಾಂತ ನಾಯಕ ಮಾತನಾಡಿ, ಗಾಂ ಧೀಜಿ ಅವರ ಗಾಂಧಿ ಗ್ರಾಮ ಸ್ವರಾಜ್ಯ ಕಲ್ಪನೆ ಮಾಡುವ ನಿಟ್ಟಿನಲ್ಲಿ ಈ ಪಾದಯಾತ್ರೆ ನಡೆಯುತ್ತಿದೆ. ಪಾದಯಾತ್ರೆ ಮೂಲಕ ಸಂಸದರು ಗ್ರಾಮೀಣ ಜನರೊಂದಿಗೆ ಬೆರೆತು ಹೋಗಬೇಕು ಎನ್ನುವ ಉದ್ದೇಶದಿಂದ ಹಾಗೂ ಗಾಂಧೀಜಿ ಅವರ ವಿಚಾರಧಾರೆ ಜನರಿಗೆ ತಿಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಮಸ್ಥ ಸಿ.ಬಿ. ಮೋದಗಿ ಮಾತನಾಡಿ, ಗಾಂಧೀಜಿ ಭೇಟಿ ನೀಡಿದ ಹುದಲಿ ಗ್ರಾಮದಿಂದ ಜನಾಂದೋಲನ ಪಾದಯಾತ್ರೆ ಆರಂಭಿಸಿರುವುದು ಗ್ರಾಮಸ್ಥರಿಗೆ ಖುಷಿ ತಂದಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಹೀಗಾಗಿ ಕೂಡಲೇ
ಘಟಕ ಸ್ಥಾಪಿಸಬೇಕು. ಮಾರ್ಕಂಡೇಯ ಜಲಾಶಯದ ಕಾಲುವೆ ನೀರಿನ ಸೋರಿಕೆಯಿಂದ ನೂರಾರು ಎಕರೆ ಜಮೀನು ಬಂಜರಾಗುತ್ತಿದೆ. ಕಾಲುವೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ಉತ್ತಮ ಕಲ್ಯಾಣ ಮಂಟಪ ನಿರ್ಮಾಣ ಮಾಡುವಂತೆ ಸಂಸದರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ, ವಾರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಸಮುದಾಯ ಭವನ ಸೇರಿದಂತೆ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಹುದಲಿ ಖಾದಿ ಗ್ರಾಮೋದ್ಯೋಗಕ್ಕೆ ಕೇಂದ್ರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು.
ಮುಖಂಡ ಮಾರುತಿ ಅಷ್ಟಗಿ ಸೇರಿದಂತೆ ವಿವಿಧ ಮುಖಂಡರು ಇದ್ದರು