Advertisement

ಗಾಂಧಿ ಬದುಕು ಅನಾವರಣಗೊಳಿಸಿದ ಛಾಯಾಚಿತ್ರ ಪ್ರದರ್ಶನ

09:11 PM Oct 30, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಬ್ರಿಟಿಷರ ವಿರುದ್ಧ ಶಾಂತಿ, ಅಹಿಂಸೆ, ಸತ್ಯ ಎಂಬ ಅಂಶಗಳನ್ನು ಅಸ್ತ್ರಗಳನ್ನಾಗಿ ಪ್ರಯೋಗಿಸಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಯಶಸ್ವಿಯಾದ ಗಾಂಧಿ ಅವರ ಸಂದೇಶ ಸಾರ್ವಕಾಲಿಕ ಎಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದರು.

Advertisement

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ಜಯಂತಿ ಅಂಗವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಮೂರು ದಿನಗಳ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಗಾಂಧಿ ಪ್ರತಿಮೆಗೆ ನಮನ: ಗಾಂಧೀಜಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ, ಅವರ ವಿಚಾರ ಧಾರೆಗಳ ಬಗ್ಗೆ ಇಂದಿನ ವಿದ್ಯಾರ್ಥಿ, ಯುವ ಪೀಳಿಗೆಯಲ್ಲಿ ಅರಿವು ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ಕಾರ್ಯ ಶ್ಲಾಘನೀಯ ಎಂದರು.

ಸ್ವಾತಂತ್ರ್ಯ ನಂತರ ರಾಮರಾಜ್ಯದ ಬಗ್ಗೆ ಕನಸು ಕಂಡಿದ್ದ ಗಾಂಧೀಜಿ ಅವರು ಜೀವನದುದ್ದಕ್ಕೂ ಶಾಂತಿ ಪ್ರತಿಪಾದಿಸಿದ್ದರು. ಗಾಂಧೀಜಿಯವರ ದೃಷ್ಟಿಯಲ್ಲಿ ರಾಮರಾಜ್ಯ ಎಂದರೆ ಸರ್ವ ಧರ್ಮಗಳನ್ನು ಸಮಾನವಾಗಿ ಕಾಣುವ ಹಾಗೂ ಸಮಾನತೆ ಸಾರುವ ಸಮಾಜವಾಗಿತ್ತು.

ಗಾಂಧೀಜಿ ಅವರ ಹೋರಾಟದ ದಿನಗಳು, ಅವರ ವಿಚಾರಧಾರೆಗಳನ್ನು ಇಂದಿನ ವಿದ್ಯಾರ್ಥಿ, ಯುವ ಸಮುದಾಯಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಈ ಛಾಯಾಚಿತ್ರ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ಬಾಪು ಅವರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.

Advertisement

ಸರಳವಾದ ಬದುಕು: ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್‌, ಪ್ರದರ್ಶನಕ್ಕೆ ಭೇಟಿ ನೀಡಿ ಗಾಂಧೀಜಿಯವರ ಛಾಯಾಚಿತ್ರ ವೀಕ್ಷಿಸಿದರು. ಸರಳವಾಗಿ ಬದುಕಿನ ಅಗಾಧ ಸಾಧನೆಗೈದ ಮಹಾತ್ಮ ಗಾಂಧೀಜಿ ಅವರ ಚಿಂತನೆಗಳು, ಬದುಕು, ಬರಹ ಹಾಗೂ ಹೋರಾಟ ಕುರಿತ ಸಂಗ್ರಹಿಸಲಾಗಿರುವ ಅಪರೂಪದ ಛಾಯಾಚಿತ್ರ ಪ್ರದರ್ಶನ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಸೇರಿ ನಾಗರಿಕನ್ನು ಆಕರ್ಷಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೂರು ದಿನ ಆಯೋಜನೆ: ಜಿಲ್ಲಾ ವಾರ್ತಾ ಅಧಿಕಾರಿ ಎಂ.ಜುಂಜಣ್ಣ ಮಾತನಾಡಿ, ಗಾಂಧೀಜಿ ಬ್ರಿಟಿಷರ ವಿರುದ್ಧ ನಡೆಸಿದ ಸ್ವಾತಂತ್ರ್ಯ ಚಳವಳಿ, ಅವರ ವಿಚಾರಧಾರೆ ಬಗ್ಗೆ ಬೆಳಕು ಚೆಲ್ಲುವ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಇಂದಿನ ವಿದ್ಯಾರ್ಥಿ, ಯುವ ಸಮಯದಾಯಕ್ಕೆ ಅರಿವು ಮೂಡಿಸುವ ದಿಸೆಯಲ್ಲಿ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರ ಪ್ರದರ್ಶಿಸಲಾಗಿದೆ. ಶುಕ್ರವಾರದವರೆಗೂ ಪ್ರದರ್ಶನ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ವಿ.ಬಸವರಾಜ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌, ಜಿಲ್ಲಾ ಕೈಮಗ್ಗ ಹಾಗೂ ಜವಳಿ ಇಲಾಖೆ ಉಪ ನಿರ್ದೇಶಕ ಶಿವಕುಮಾರ್‌, ಚಿಂತಕ ಡಾ.ಕೋಡಿರಂಗಪ್ಪ, ವಾರ್ತಾ ಇಲಾಖೆ ಮೈನಾಶ್ರೀ ಉಪಸ್ಥಿತರಿದ್ದರು.

ಛಾಯಾಚಿತ್ರಗಳ ಜೊತೆಗೆ ಸಾಕ್ಷ್ಯಚಿತ್ರ ಪ್ರದರ್ಶನ: ಛಾಯಾಚಿತ್ರ ಪ್ರದರ್ಶನದ ಮುಂಭಾಗದಲ್ಲಿ ವಿಶ್ರಾಂತ ಸ್ಥಿತಿಯಲ್ಲಿ ಹಾಗೂ ಶಾಂತಿ ಚಳವಳಿಯಲ್ಲಿ ಹೆಜ್ಜೆ ಹಾಕುವ ಗಾಂಧೀಜಿ ಅವರ ಪ್ರತಿಮೆ ಹಾಗೂ ಬಾಪು ಉಪಯೋಗಿಸುತ್ತಿದ್ದ ಮರದಿಂದ ತಯಾರಿಸಿದ ಚರಕ ನೋಡಗರನ್ನು ಸೆಳೆಯುತ್ತಿದೆ.

ಗಾಂಧೀಜಿ ಅವರು ಛಾಯಾಚಿತ್ರ ಪ್ರದರ್ಶನವನ್ನು ಹೆಚ್ಚು ಆಕರ್ಷಿತಗೊಳಿಸುವ ನಿಟ್ಟಿನಲ್ಲಿ ಪಾರಂಪರಿಕ ಕಂಬಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಚಿನ್ನದ ಬಣ್ಣದಿಂದ ಅಲಂಕೃತಗೊಂಡಿರುವ ಕಂಬಗಳ ಮಧ್ಯಭಾಗದ ಛಾಯಾಚಿತ್ರದ ಫ್ರೆಮ್‌ನಲ್ಲಿ ಗಾಂಧೀಜಿ ಅವರ ಜೀವನ, ವಕ್ತಿತ್ವ, ಹೋರಾಟ ಮತ್ತು ಕಾರ್ಯ ಪ್ರತಿಬಿಂಬಿಸುವಂತೆ ಕಪ್ಪು ಬಿಳುಪಿನ ಚಿತ್ರ ಪ್ರದರ್ಶಿಸಲಾಗಿದೆ.

ಛಾಯಾಚಿತ್ರ ಪ್ರದರ್ಶನದೊಳಗೆ ಗಾಂಧೀಜಿಯವರ ಬದುಕು ಮತ್ತು ಹೋರಾಟ ಕುರಿತು ರೂಪಿಸಿರುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುತ್ತಿದೆ. ಗಾಂಧೀಜಿಯವರ ಹತ್ತು ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳಲ್ಲಿ ಒಂದು ನೂರು ಛಾಯಾಚಿತ್ರಗಳನ್ನು ಆಯ್ಕೆ ಮಾಡಿ ಗಾಂಧೀಜಿ ಅವರ ಜೀವನ ವ್ಯಕ್ತಿತ್ವ ಮತ್ತು ಕಾರ್ಯ ಪ್ರತಿಬಿಂಬಿಸುವಂತೆ ಪ್ರದರ್ಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next