Advertisement
ದೊಡ್ಡಬಳ್ಳಾಪುರ: ಗಾಂಧೀಜಿಯನ್ನು ಹೊರತಾಗಿಟ್ಟು ಸ್ವಾತಂತ್ರ್ಯ ಹೋರಾಟದ ಮೆಲುಕುಗಳನ್ನು ಹಾಕಿದರೆ ಪರಿಪೂರ್ಣವಾಗುವುದಿಲ್ಲ ಎನ್ನುವುದು ಸರ್ವವಿಧಿತ. ದೊಡ್ಡಬಳ್ಳಾಪುರಕ್ಕೆ 1934ರ ಜ. 4ರಂದು ಗಾಂಧೀಜಿ ಭೇಟಿ ನೀಡಿದ್ದರು. ನಮ್ಮ ಊರಿಗೆ ಬಂದಿದ್ದರು. ನಾವು ಗಾಂಧೀಜಿಯನ್ನು ಕಂಡಿದ್ದೇವೆ ಎನ್ನುವ ಹಿರಿಯರಿಗೆ ಏನೋ ಧನ್ಯತಾಭಾವ.
Related Articles
Advertisement
ಗಾಂಧೀಜಿ ಭೇಟಿ : ದೊಡ್ಡಬಳ್ಳಾಪುರದ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಸಿದ್ದಲಿಂಗಯ್ಯ ಮತ್ತು ಒಡಿಶಾದ ಡೆಲಾಂಗಿನಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಭೇಟಿ ಮಾಡಿದ್ದರು. ಸಭೆಗಳನ್ನು ನಡೆಸಿದರೆ ಸಾವಿರಾರು ಜನ ಬರುತ್ತಾರೆ, ಚಳವಳಿಯನ್ನು ಯಶಸ್ವಿಯಾಗಿ ನಡೆಸಲು ನಮಗೆ ಸಾಕಷ್ಟು ಶಕ್ತಿಯಿದೆ, ಮಹಾರಾಜರನ್ನು ಇಳಿಸಲಿಕ್ಕೂ, ದಿವಾನರನ್ನು ವಜಾ ಮಾಡಲಿಕ್ಕೂ ಸಾಕಷ್ಟು ಶಕ್ತಿಯಿದೆ ಎಂದು ದೃಢವಾಗಿ ನುಡಿದಿದ್ದ ಸಿದ್ದಲಿಂಗಯ್ಯ ಅವರಿಗೆ ಗಾಂಧೀಜಿ ಅವರು ನಿಮ್ಮ ಸಹಕಾರ ಅಪರಿಹಾರ್ಯವೆಂದು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಿ ಎಂದು ತಿಳಿಸಿದ್ದರು.
ದಿವಾನರ ಆಡಳಿತ ಹಾಗೂ ಸ್ವಾತಂತ್ರ್ಯ ಹೋರಾಟ ಸಂಘಟನೆ ಕುರಿತಾದ ಗಾಂಧೀಜಿ ಅವರೊಂದಿಗಿನ ಸಂಭಾಷಣೆಗಳನ್ನು ಭೂಪಾಳಂ ಚಂದ್ರಶೇಖರಯ್ಯ ಅವರು ಶುದ್ಧ ಹಸ್ತದ ಸಿದ್ದಲಿಂಗಯ್ಯ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎನ್ನುತ್ತಾರೆ ಲೇಖಕ ಡಿ.ಎಂ. ಘನಶ್ಯಾಮ
ಗಾಂಧೀಜಿ ಪ್ರೇರಣೆ: 1930ರಲ್ಲಿ ಗುಜರಾತ್‌ನ ದಂಡಿಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಕರ ನಿರಕರಣ, ಅಸಹಕಾರ ಚಳವಳಿ ಇಡೀ ದೇಶ ವ್ಯಾಪಿಸಿದಂತೆ ದೊಡ್ಡಬಳ್ಳಾಪುರದಲ್ಲಿ ಪ್ರತಿಧ್ವನಿಸಿತ್ತು. ವಿವಿಧೆಡೆ ಈಚಲು ಮರಗಳನ್ನು ಕಡಿಯುವ, ವಿದೇಶ ವಸ್ತುಗಳನ್ನು ಸುಡುವ, ಸ್ವದೇಶಿ ವಸ್ತುಗಳನ್ನು ಮಾರುವ ದೃಢ ಸಂಕಲ್ಪ ಮಾಡಿದ್ದರು. ರುಮಾಲೆ ಚನ್ನಬಸವಯ್ಯ, ಎಚ್.ಮುಗುವಾಳಪ್ಪ ಚಳವಳಿ ಯಲ್ಲಿ ಭಾಗವಹಿಸಿದ್ದರು. ಇಲ್ಲಿಯೂ ದೇಶಿ ಉಪ್ಪನ್ನು ಮಾರಾಟ ಮಾಡಲಾಯಿತಲ್ಲದೆ, ವರ್ತಕರು ವಿದೇಶಿ ವಸ್ತುಗಳನ್ನು ಮಾರಾಟ ಮಾಡುವುದಿಲ್ಲವೆಂದು ಸಂಕಲ್ಪ ಮಾಡಿದ್ದರು. 1924ರಲ್ಲಿ ಬೆಳಗಾವಿಯಲ್ಲಿ ನಡೆದ 39ನೇ ಅಖೀಲ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ ದೊಡ್ಡಬಳ್ಳಾಪುರ ದಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.
ನಂದಿ ಬೆಟ್ಟಕ್ಕೆ ಗಾಂಧಿ: ಅನಾರೋಗ್ಯದಿಂದ ಬಳಲುತ್ತಿದ್ದ ಗಾಂಧೀಜಿ ತಾಲೂಕಿಗೆ ಸಮೀಪವೇ ಇರುವ ನಂದಿಬೆಟ್ಟಕ್ಕೆ 1927ರಲ್ಲಿ 45 ದಿನ ಹಾಗೂ 1936ರಲ್ಲಿ ಮೂರು ವಾರಗಳ ಕಾಲ ಗಾಂಧೀಜಿ ತಂಗಿದ್ದರು. ಗಾಂಧಿಯವರೊಂದಿಗಿದ್ದ ಸರ್ಧಾರ್ ವಲ್ಲಭಾಬಾಯಿ ಪಟೇಲ್, ಕಸ್ತೂರಿಬಾ ಅವರನ್ನು ರುಮಾಲೆ ಚನ್ನಬಸವಯ್ಯ, ಎಚ್. ಮುಗುವಾಳಪ್ಪ, ಟಿ.ಸಿದ್ದಲಿಂಗಯ್ಯ ಗಾಂಧೀಜಿ ಅವರನ್ನು ಭೇಟಿ ಮಾಡಿ, ದೊಡ್ಡಬಳ್ಳಾಪುರದ ನೈಗರ್ ಯೂಥ್‌ಲೀಗ್ ಸಮಾವೇಶಕ್ಕೆ ಆಹ್ವಾನಿಸಿದರು. ಪಟೇಲರು ಹಾಗೂ ಕಸ್ತೂರಿ ಬಾ ರುಮಾಲೆ ಛತ್ರದಲ್ಲಿ ಖಾದಿ ಭಂಡಾರವನ್ನು ಉದ್ಘಾಟಿಸಿದ್ದರು.
– ಡಿ. ಶ್ರೀ ಕಾಂತ್