Advertisement

ಪಂಚಾಯತ್‌ ರಾಜ್‌ ವ್ಯವಸೆ ಸಬಲೀಕರಣಕ್ಕೆ ಗಾಂಧಿ ಅಡಿಪಾಯ

01:56 PM Oct 03, 2022 | Team Udayavani |

ರಾಮನಗರ: ಪಂಚಾಯತ್‌ ರಾಜ್‌ ವ್ಯವಸ್ಥೆ ಸಬಲೀಕರಣಕ್ಕೆ ಅಡಿಪಾಯ ಹಾಕಿದ ಮಹಾನ್‌ ಚೇತನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ. ಅವರ ಹೋರಾಟ ಮತ್ತು ತ್ಯಾಗದ ಫಲ ಇದಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಪ್ರದೀಪ್‌ ಬಣ್ಣಿಸಿದರು.

Advertisement

ತಾಲೂಕಿನ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾಂಧಿ ಜಯಂತಿ ಆಚರಣೆ ಅಂಗವಾಗಿ ನಡೆದ ವಿಶೇಷ ಗ್ರಾಮಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಳ್ಳಿಗಳು ಉದ್ಧಾರವಾಗದ ಹೊರತು ದೇಶ ಉದ್ಧಾರವಾಗುವುದಿಲ್ಲ ಎಂಬ ಮಾತು ಅರ್ಥಪೂರ್ಣವಾಗಿದ್ದು, ಸ್ಥಳೀಯ ಸರ್ಕಾರಗಳ ಮಟ್ಟದಲ್ಲಿ ಗಾಂಧೀಜಿ ಅವರ ತತ್ವ, ಆಶಯಗಳಿಗೆ ಪೂರಕವಾದ ಹಲವು ಕಾರ್ಯಕ್ರಮ ರೂಪಿಸುವ ಮೂಲಕ ಗ್ರಾಪಂ ಮಟ್ಟದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿ ಅವರ ಮಹತ್ವಾಕಾಂಕ್ಷೆ ಯೋಜನೆಗಳಾದ ಮನರೇಗಾ ಯೋಜನೆ ನಮ್ಮ ದೇಶದಲ್ಲಿ ಪರಿಣಾಮಕಾರಿಯಾಗಿ ವಿಸ್ತೃತವಾಗಿ ಅನುಷ್ಠಾನ ಆಗುತ್ತಿದೆ. ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಲ್ಲಿ ಪ್ರತಿ ಮನೆಗೆ ಶೌಚಾಲಯ, ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹ ಹಾಗೂ ವೈಜ್ಞಾನಿಕ ವಿಲೇವಾರಿಯನ್ನು ಮಾಡಲಾಗುತ್ತಿದೆ. ಇಂದು ಘನತ್ಯಾಜ್ಯ ಘಟಕ ನಿರ್ಮಿಸಿ ಲೋಕಾರ್ಪಣೆ ಮಾಡುತ್ತಿರುವ ಮಾಯಗಾನಹಳ್ಳಿ ಗ್ರಾಪಂನ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಗ್ರಾಪಂ ಅಧ್ಯಕ್ಷ ಎಂ.ಎಚ್‌. ರಂಜಿತ್‌ ಮಾತನಾಡಿ, ಮಹಾತ್ಮಗಾಂಧಿ ಜಯಂತಿ ಆಚರಣೆ ಅಂಗವಾಗಿ ವಿಶೇಷ ಗ್ರಾಮ ಸಭೆಯಲ್ಲಿ 33 ಕೆಲಸಗಳಿಗೆ ಕ್ರಿಯಾಯೋಜನೆ ರೂಪಿಸಿದ್ದು, ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ಪಡೆದು ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆಯಲಾಗುವುದು. ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವತ್ಛತಾ ಆಂದೋಲನ, ಇ-ಖಾತಾ ಆಂದೋಲನ ಸೇರಿದಂತೆ ಸಾರ್ವಜನಿಕರಲ್ಲಿ ಒಣ, ಹಸಿ ಕಸ ವಿಂಗಡಿಸುವ ಬಗ್ಗೆ ಪ್ರತಿ ಹಳ್ಳಿಗಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಎಲ್ಲಾ ಸದಸ್ಯರು ಮತ್ತು ಪಂಚಾಯಿತಿ ಸಿಬ್ಬಂದಿ ಸಹಕಾರದಲ್ಲಿ ಮಾಡಲಾಗುತ್ತಿದೆ ಎಂದರು.

ಗ್ರಾಮ ಪಂಚಾಯತಿಯ ವರ್ಗ-1 ರಡಿ 5 ಲಕ್ಷ ರೂ. ವೆಚ್ಚದಲ್ಲಿ ಹಳೇ ಪಂಚಾಯಿತಿ ಕಟ್ಟಡ ಸ್ಥಳದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

Advertisement

ಮೊಬೈಲ್‌ ಇಂಟರ್‌ನೆಟ್‌ ವ್ಯವಸ್ಥೆ: ಶಿಕ್ಷಣ ಫೌಂಡೇಷನ್‌ ಜಿಲ್ಲಾ ವ್ಯವಸ್ಥಾಪಕ ವೆಂಕಟೇಶ್‌ ಮಾತನಾಡಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಹಕಾರದಿಂದ ಶಿಕ್ಷಣ ಫೌಂಡೇಶನ್‌ ಮತ್ತು ಡೆಲ್‌ ಸಂಸ್ಥೆ ಸಹಯೋಗದೊಂದಿಗೆ ರಾಜ್ಯದಲ್ಲಿ ಸುಮಾರು ಸುಮಾರು 1,330 ಗ್ರಾಪಂ ಗ್ರಂಥಾಲಯಗಳಲ್ಲಿ ಗ್ರಾಮ ಡಿಜಿ ವಿಕಸನ ಕೌಶಲ್ಯ ತರಬೇತಿ ಯೋಜನೆ ಅನುಷ್ಠಾನಗೊಂಡಿದ್ದು, ಅದರಂತೆ ರಾಮನಗರ ಜಿಲ್ಲೆಯಲ್ಲಿ 62 ಗ್ರಾಪಂ ಗ್ರಂಥಾಲಯಗಳಿಗೆ ಗ್ರಾಮ ಡಿಜಿ ವಿಕಾಸನ ಕಾರ್ಯಕ್ರಮದ ಸ್ಮಾರ್ಟ್‌ ಟಿವಿ 4 ಸ್ಮಾರ್ಟ್‌ ಮೊಬೈಲ್‌ ಇಂಟರ್‌ನೆಟ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಗ್ರಾಮದ ಯುವಕ- ಯುವತಿಯರು ಸಮುದಾಯದವರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಗ್ರಂಥಾಲಯಕ್ಕೆ 5 ಕಂಪ್ಯೂಟರ್‌: ಬಮೂಲ್‌ ನಿರ್ದೇಶಕ ಪಿ. ನಾಗರಾಜು ಮಾತನಾಡಿ, ಪ್ರತಿಯೊಬ್ಬರಿಗೂ ಓದಿನ ಜೊತೆಗೆ ಕೌಶಲ್ಯ ಮುಖ್ಯವಾಗಿ ಅವಶ್ಯಕತೆಯಿದೆ. ಹಾಗಾಗಿ, ಬಮೂಲ್‌ ಕಲ್ಯಾಣ ಟ್ರಸ್ಟ್‌ ವತಿಯಿಂದ ಗ್ರಂಥಾಲಯಕ್ಕೆ 5 ಕಂಪ್ಯೂಟರ್‌ ನೀಡಲಾಗುವುದು. ಸಾರ್ವಜನಿಕರಿಗೆ ಶಾಶ್ವತವಾದ ಮತ್ತು ಜ್ಞಾನದ ಸಂಪತ್ತನ್ನು ವೃದ್ಧಿಸುವ ಮಾದರಿ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಿ ದೇಶದ ಮಹಾತ್ಮರಾದ ಗಾಂಧೀಜಿ ಮತ್ತು ಲಾಲ್‌ಬಹದ್ದೂರ್‌ಶಾಸ್ತ್ರಿ ಅವರ ಹುಟ್ಟುಹಬ್ಬದಂದು ಲೋಕಾರ್ಪಣೆ ಮಾಡುತ್ತಿರುವ ಗ್ರಾಪಂ ಕಾರ್ಯವನ್ನು ಶ್ಲಾಘಿಸಿದರು. ಅಧಿಕಾರಿ ಕಿರಣ್‌ಕುಮಾರ್‌, ಗ್ರಾಪಂ ಸದಸ್ಯ ವೆಂಕಟೇಶ ಮೂರ್ತಿ, ಶ್ರೀನಿವಾಸ್‌, ಎಂ.ಜಿ. ರಾಜಶೇಖರ್‌, ಮಾಯಮ್ಮ, ನಾಗರತ್ನಮ್ಮ, ಶೋಭಾ, ಕೆಂಪರಾಜಮ್ಮ, ಗೀತಾ, ಶೋಭಾ, ಮಂಚಮ್ಮ, ಇಂದ್ರಮ್ಮ, ಪಿಡಿಒ ಡಿ.ಎಂ. ಮಾದೇ ಗೌಡ, ಕಾರ್ಯದರ್ಶಿ ಕೃಷ್ಣ ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next