Advertisement

ಮೆಟ್ರೋದಲ್ಲಿ ಸ್ವಚ್ಛತೆ ಮೂಲಕ ಗಾಂಧಿ ಜಯಂತಿ

11:58 AM Oct 03, 2017 | |

ಬೆಂಗಳೂರು: ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛ ಭಾರತ ಅಭಿಯಾನದಡಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ), ಇಸ್ಕಾನ್‌ ಸಹಯೋಗದಲ್ಲಿ ನಗರದ ಮೆಟ್ರೋ ನಿಲ್ದಾಣಗಳ ಆಸು-ಪಾಸು ಸ್ವಚ್ಛತಾ ಕಾರ್ಯಕ್ರಮ ನಡೆಸಿತು.

Advertisement

ಸುಮಾರು 21 ನಿಲ್ದಾಣಗಳ ಸುತ್ತಮುತ್ತ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲ ಮತ್ತು ನಿಗಮದ ಸಿಬ್ಬಂದಿ ಸೇರಿದಂತೆ ಸಾವಿರಕ್ಕೂ ಅಧಿಕ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಬೆಳಗ್ಗೆ 10.30ಕ್ಕೆ ಇಸ್ಕಾನ್‌ ದೇವಸ್ಥಾನದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಧಿಕಾರಿಗಳು, ಸಿಬ್ಬಂದಿ, ಇಸ್ಕಾನ್‌ ದೇವಸ್ಥಾನ ಮಂಡಳಿ ಪದಾಧಿಕಾರಿಗಳು, ಭಕ್ತರು ಪೊರಕೆ ಹಿಡಿದು ಸ್ವಚ್ಛತೆಯಲ್ಲಿ ತೊಡಗಿದ್ದರು.

ಇದರಿಂದ ಪ್ರೇರಿತರಾದ ದಾರಿಹೋಕರು ಕೂಡ ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಿದರು. ನಿಲ್ದಾಣದ ಸುತ್ತಲಿನ ಕಸ ಗೂಡಿಸಿ, ಎಲ್ಲೆಂದರಲ್ಲಿ ಬಿಸಾಡಿದ್ದ ತ್ಯಾಜ್ಯ ಆರಿಸಿದ ಸ್ವಯಂಸೇವಕರು, ಮೆಟ್ರೋ ಸೇತುವೆಯ ಪಿಲ್ಲರ್‌ಗಳಿಗೆ ಬಣ್ಣ ಬಳಿದರು. ಎಲ್ಲ ನಿಲ್ದಾಣಗಳಿಗೆ ಮೆಟ್ರೋದಲ್ಲಿ ಸಂಚರಿಸಿದ ಸ್ವಯಂಸೇವಕರು, ಹತ್ತಿರದ ಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಸ್ವಚ್ಛಗೊಳಿಸಿದರು. 

ಆರ್‌ಎಂಸಿ ಯಾರ್ಡ್‌, ಯಶವಂತಪುರ ಮಾರುಕಟ್ಟೆ, ಯಶವಂತಪುರ ರೈಲು ನಿಲ್ದಾಣದ ಹೊರಾಂಗಣ, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ನಗರ ರೈಲು ನಿಲ್ದಾಣ, ಗಾಂಧಿನಗರ ಶಾಪಿಂಗ್‌ ಏರಿಯಾ, ಚಿಕ್ಕಪೇಟೆ, ಸುಲ್ತಾನ್‌ಪೇಟೆ, ಅಕ್ಕಿಪೇಟೆ, ಹಳೆಯ ತಾಲ್ಲೂಕು ಕಚೇರಿ, ಬನಶಂಕರಿ ಮಾರುಕಟ್ಟೆ, ಕೆ.ಆರ್‌. ಮಾರುಕಟ್ಟೆ, ಕಲಾಸಿಪಾಳ್ಯ, ಬೆಂಗಳೂರು ವೈದ್ಯಕೀಯ ಕಾಲೇಜು, ನವಾಬ್‌ ಹೈದರ್‌ಖಾನ್‌ ರಸ್ತೆ, ಎಸ್‌ಜೆಪಿ ರಸ್ತೆ, ಎಸ್‌ಪಿ ರಸ್ತೆ, ನ್ಯೂ ಬಂಬೂ ಬಜಾರ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ನಿಗಮದ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next