ಶಹಾಬಾದ: ಅಹಿಂಸಾತ್ಮಕ ಹೋರಾಟದ ಮೂಲಕವು ಗೆಲ್ಲಬಹುದು ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾಚೇತನ ಮಹಾತ್ಮ ಗಾಂಧೀಜಿ ಎಂದು ಗ್ರೇಡ್-1 ತಹಶೀಲ್ದಾರ್ ಅಂಜುಮ್ ತಬಸೂಮ್ ಹೇಳಿದರು.
ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಹಾಗೂ ಸ್ವತ್ಛ ಭಾರತ ಪರಿಕಲ್ಪನೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡು ಅಹಿಂಸಾ ಚಳವಳಿ ಮೂಲಕ ಮಹಾತ್ಮ ಗಾಂಧಿಧೀಜಿ ಸ್ವಾತಂತ್ರ್ಯ ದೊರಕಿಸಿಕೊಟ್ಟರು ಎಂದು ಗುಣಗಾನ ಮಾಡುತ್ತೇವೆ. ಏಕೆಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದರು ಎನ್ನುವುದಕ್ಕಿಂತ, ಹಿಂಸೆ ಇಲ್ಲದೇ ಶಾಂತಿಯ ಹೋರಾಟ ಮಾಡಿದರು ಎನ್ನುವ ಕಾರಣ ಮುಖ್ಯವಾದದ್ದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರೇಡ್-2 ತಹಶೀಲ್ದಾರ್ ರವೀಂದ್ರ ಧಾಮಾ , ಮಹಾತ್ಮ ಗಾಂಧಿ ಅವರು ಅನುಸರಿಸಿದ ಸತ್ಯ, ಶಾಂತಿ ಅಹಿಂಸೆ, ತ್ಯಾಗ, ಸತ್ಯಾಗ್ರಹದಿಂದ ರಕ್ತರಹಿತ ಕ್ರಾಂತಿ ಉಂಟಾಗಿ ನಮಗೆ ಸ್ವಾತಂತ್ರ್ಯ ದೊರಕಿತು ಎಂದರಲ್ಲದೇ ಸ್ವತ್ಛತೆ ಜವಾಬ್ದಾರಿ ಎಲ್ಲರದ್ದು ಎಂದು ಹೇಳಿದರು. ಸರಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲ ಶಮಸುದ್ದಿನ್ ಪಟೇಲ್, ದಲಿತ ಸಾಹಿತ್ಯ ಅಕಾಡೆಮಿ ಶಹಾಬಾದ ತಾಲೂಕಾಧ್ಯಕ್ಷ ನಾಗಪ್ಪ ಎಸ್.ಬೆಳಮಗಿ ಮಾತನಾಡಿದರು.
ಶಿವಪುತ್ರಪ್ಪ ಕೋಣಿನ್, ದೂರದರ್ಶನ ನಿರ್ದೇಶಕ ಶಂಕರ ಕೋಡ್ಲಾ, ಏಮನಾಥ ರಾಠೊಡ, ಡೋಹರ್ ಕಕ್ಕಯ್ಯ ಸಮಾಜದ ಸಾಯಿಬಣ್ಣ ಎಂ. ಹೋಳ್ಕರ್, ದಸಂಸ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಕರಣಿಕ್, ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಸಂತೋಷ ಹುಲಿ, ಕಸಾಪ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ಕಸಾಪ ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಕರ್, ಅಮರ ಕೋರೆ ಹಾಜರಿದ್ದರು. ಇದೇ ವೇಳೆ ಆಕಾಶವಾಣಿ ಕಲಾವಿದರು ಗಾಯನ ಪ್ರಸ್ತುತಪಡಿಸಿದರು.
ಎಂ.ಎನ್. ಸುಗಂ ನಿರೂಪಿಸಿದರು, ರವೀಂದ್ರ ಬೆಳಮಗಿ ಸ್ವಾಗತಿಸಿದರು, ಹಾಜಪ್ಪ ರಾಮಪುರ ವಂದಿಸಿದರು.