ಅಮೀನಗಡ: ಗ್ರಾಮ ಪಂಚಾಯತ್ ಸಾಧನೆ ಪರಿಗಣಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯಿಂದ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕೆಲೂರ ಗ್ರಾಪಂ ಎರಡನೇ ಭಾರಿ ಆಯ್ಕೆಯಾಗಿದೆ.
ಇಳಕಲ್ಲ ತಾಲೂಕಿನ ಕೆಲೂರ ಗ್ರಾಪಂ ಕೆಲೂರ ಸೇರಿದಂತೆ ತಳ್ಳಕೇರಿ, ಕುಣಿಮೆಂಚಿ ಗ್ರಾಮಗಳನ್ನು ಒಳಗೊಂಡಿದೆ. ಗ್ರಾಪಂನ ಅಭಿವೃದ್ಧಿ ಆಧಾರದಲ್ಲಿ 2013-14ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಈಗ ಇದೇ ಗ್ರಾಪಂ 2019-20ನೇ ಸಾಲಿನಲ್ಲೂ ಮತ್ತೆ ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ವಿಶೇಷ ಸಾಧನೆ ಮಾಡಿದೆ. ಪುರಸ್ಕಾರವೂ 5ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಜಿಪಂ ಅಧಿ ಕಾರಿಗಳು ಖುದ್ದು ನಡೆಸಿದ ಪರಿಶೀಲನೆ, ಸೌಕರ್ಯಗಳನ್ನಾಧರಿಸಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗೆಗಿನ ಅಂಕಿ ಅಂಶಗಳನ್ನಾಧರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಗ್ರಾಪಂ ಸಾಧನೆ: 2019-20ನೇ ಸಾಲಿನಲ್ಲಿ ಕೆಲೂರ ಗ್ರಾಮ ಪಂಚಾಯತಿ ಅಧಿಕ ತೆರಿಗೆ ವಸೂಲಿ ಮಾಡಿ ಪ್ರಗತಿ ಸಾಧಿ ಸಿದೆ ಮತ್ತು ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಟಾನ, ಸ್ವತ್ಛ ಭಾರತ ಮಿಶನ್ ಯೋಜನೆಯಡಿ ಶೇ. 97 ಸಾಧನೆ ಮಾಡಿದೆ. ವಸತಿ ಯೋಜನೆ ಅನುಷ್ಟಾನದಲ್ಲಿ ಶೇ. 90 ಗುರಿ ತಲುಪಿದೆ. ಇದಕ್ಕಾಗಿ ಜಿಲ್ಲಾ ಪಂಚಾಯತಿ 200 ಅಂಕಗಳಿಗೆ 177 ಅಂಕಗಳನ್ನು ನೀಡಿತ್ತು. ಪುರಸ್ಕಾರಕ್ಕೆ ಆಯ್ಕೆಯಾಗಲು ಇದು ಕೂಡಾ ಪ್ರಮುಖ ಕಾರಣ.
ಸಾಧನೆ ಮಾಡಿದ ಗ್ರಾಪಂಗಳನ್ನು ಗುರುತಿಸಿ ಪ್ರತಿವರ್ಷ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡುತ್ತಿದೆ. ಈ ಬಾರಿ ನಮ್ಮ ಕೆಲೂರ ಗ್ರಾಪಂ ಅಭಿವೃದ್ಧಿ ಕಾರ್ಯ ಗುರುತಿಸಿ ಪ್ರಶಸ್ತಿ ಬಂದಿದ್ದು, ಸಂತಸವಾಗಿದೆ. ಗ್ರಾಮದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕಾಮ ಗಾರಿ ಮತ್ತು ಸ್ವತ್ಛತೆಗೆ ಆದೆ¤ತೆ ನೀಡಬೇಕು. ಕೆಲೂರ ರಾಜ್ಯಕ್ಕೆ ಮಾದರಿ ಗ್ರಾಪಂ ಆಗಬೇಕು.
–ರಾಜು ನಾಡಗೌಡ, ನಿರ್ದೇಶಕರು ವಿಜಯ ಮಹಾಂತೇಶ ಬ್ಯಾಂಕ್
ಕೆಲೂರ ಗ್ರಾಪಂ ವ್ಯಾಪ್ತಿಯ ಮೂರು ಹಳ್ಳಿಗಳ ಜನರ ಸಹಕಾರ ಮತ್ತು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಮದಲ್ಲಿ ಮಾಡಿದ ಅಭಿವೃದ್ದಿ ಕಾಮಗಾರಿಗಳನ್ನು ಗುರುತಿಸಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು ಬಹಳ ಖುಷಿ ತಂದಿದೆ. ಗ್ರಾಮದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲು ಈ ಪ್ರಶಸ್ತಿ ಸಹಕಾರಿಯಾಗಿದೆ.
–ಪಿ.ಬಿ.ಮುಳ್ಳೂರ ಪಿಡಿಒ ಕೆಲೂರ